ಬೆಳೆಗಳಿಗೆ ಈಗ ಆ್ಯಪ್ ಮೂಲಕ ಪರಿಹಾರ, ಇಲ್ಲಿದೆ ಮಾಹಿತಿ

Written by Ramlinganna

Updated on:

New App for Crop compensation ಮಳೆಯಿಂದಾಗಿ ಬೆಳೆ ಹಾನಿಯಾದ ಮಾಲಿಕರಿಗೆ, ಮನೆಗಳು ಹಾನಿಯಾದವರಿಗೆ ಒಂದು ಹೊಸ ಆ್ಯಪ್ ಮೂಲಕ ಶೀಘ್ರದಲ್ಲಿಯೇ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ.

ರಾಜ್ಯದಲ್ಲಿ ಕಳೆದ ತಿಂಗಳಿಂದ ಸುರಿಯುತ್ತಿರುವ ಮಳೆಯಿಂದ ಅಪಾರ ಬೆಳೆ, ಮನೆಗಳು, ಸೇತುವೆಗಳು, ವಿದ್ಯುತ್ ಕಂಬಗಳು ಹಾಳಾಗಿವೆ. ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಖಾತೆಗಳಲ್ಲೂ ನೆರೆ ಪರಿಹಾರಕ್ಕಾಗಿ 800 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಈಗಾಗಲೇ ನೆರೆ ಪರಿಹಾರಕ್ಕಾಗಿ ಸರ್ಕಾರ 300 ಕೋಟಿ  ರೂಪಾಯಿ ಬಿಡುಗಡೆ ಮಾಡಿದೆ. ಇನ್ನೆರಡು ದಿನಗಳಲ್ಲಿ 500 ಕೋಟಿ ರೂಪಾಯಿ ಹಣ ಬಿಡುಗಡೆಯಾಗಲಿದೆ. ಪರಿಹಾರ ನೀಡಲು ಹಣದ ಕೊರತೆಯಿಲ್ಲ ಎಂದು ಕಂದಾಯ ಸಚಿವಆರ್.ಅಶೋಕ ತಿಳಿಸಿದ್ದಾರೆ.

ಅವರು ಕೊಳ್ಳೆಗಾಲದಲ್ಲಿ ನೆರೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜ್ಯದಲ್ಲಿ 1 ಲಕ್ಷದ 7 ಸಾವಿರ 63 ಹೆಕ್ಟೇರ್ ಬೆಳೆ ಹಾನಿಯಾಗಿದೆ. 10,373 ಸೇತುವೆಗಳು ಹಾಳಾಗಿವೆ. 16,301 ವಿದ್ಯುತ್ ಕಂಬಗಳು ಹಾಳಾಗಿವೆ. 15690 ಮನೆಗಳು ಭಾಗಶಃ ಹಾನಿಗೊಳಗಾಗಿವೆ.

ಈ ಹಿಂದೆ ಪರಿಹಾರ ನೀಡಲು 8 ರಿಂದ 9 ತಿಂಗಳು ಕಾಲಾವಕಾಸ ಬೇಕಾಗುತ್ತಿತ್ತು. ಆದರೆ ಈಗ 20 ದಿನದಿಂದ ಒಂದುವರೆ ತಿಂಗಳೊಳಗೆ ಪರಿಹಾರ ಹಣವನ್ನು ನೇರವಾಗಿ ರೈತರ ಖಾತೆಗೆ ಜಮಾ ಆಗುವಂತೆ ಕ್ರಮವಹಿಸಲಾಗಿದೆ ಎಂದು ತಿಳಿಸಿದ್ದಾರೆ.

ಅತೀವೃಷ್ಟಿ, ಪ್ರವಾಹ ಸೇರಿದಂತೆ ನೈಸರ್ಗಿಕ ವಿಕೋಪಗಳಿಂದ ಸಂಭವಿಸುವ ಹಾನಿಗೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್.ಡಿ.ಆರ್.ಎಫ್) ಮೂಲಕ ನೀಡುವ ಪರಿಹಾರದ ಮೊತ್ತವನ್ನು ಮೂರುಪಟ್ಟು ಹೆಚ್ಚಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಕಂದಾಯ ಸಚಿವರು ತಿಳಿಸಿದ್ದಾರೆ.

ಅವರು ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ವಿಕೋಪಗಳ ಸಂದರ್ಭದಲ್ಲಿ ಎನ್.ಡಿ.ಆರ್.ಎಫ್ ಮೂಲಕ ನೀಡುವ ಪರಿಹಾರ ಕಡಿಮೆಯಿದೆ. ಇದನ್ನು ಹೆಚ್ಚಿಸುವಂತೆ ಮನವಿ ಮಾಡಲು ಕೇಂದ್ರ ಗೃಹ, ಹಣಕಾಸು ಹಾಗೂ ಕೃಷಿ ಸಚಿವರನ್ನು ಭೇಟಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.

New App for Crop compensation ಬೆಳೆ ಹಾನಿ ಪರಿಹಾರ ಎಷ್ಟಿದೆ ನಿಮಗೆ ಗೊತ್ತೇ?

ಎನ್.ಡಿ.ಆರ್.ಎಫ್ ಮಾರ್ಗಸೂಚಿ ಪ್ರಕಾರ, ಬೆಳೆ ಹಾನಿ ಪ್ರಕರಣಗಳಲ್ಲಿ ಮಳೆಯಾಶ್ರಿತ ಜಮೀನುಗಳಿಗೆ ಪ್ರತಿ ಹೆಕ್ಟೇರಿಗೆ 6800 ರೂಪಾಯಿ, ನೀರಾವರಿ ಜಮೀನಿಗೆ ಪ್ರತಿ ಹೆಕ್ಟೇರಿಗೆ 13500 ರೂಪಾಯಿ, ಬಹುವಾರ್ಷಿಕ  ಬೆಳೆಗಳಿಗೆ ಪ್ರತಿ ಹೆಕ್ಟೇರಿಗೆ 18000 ರೂಪಾಯಿ ಪರಿಹಾರ ನೀಡಲಾಗುತ್ತಿದೆ. ಅದಕ್ಕೆ ರಾಜ್ಯ ಸರ್ಕಾರ ಮಳೆಯಾಶ್ರಿತ ಬೆಳೆಗಿಗೆ 6800 ರೂಪಾಯಿ ಹೆಚ್ಚಿಸಲಾಗಿದೆ. ನೀರಾವರಿ ಬೆಳೆಗಳಿಗೆ 11500 ರೂಪಾಯಿ ಪ್ರತಿ ಹೆಕ್ಟೇರಿಗೆ ಹೆಚ್ಚಿಸಲಾಗಿದೆ. ಅದೇ ರೀತಿ ಬಹುವಾರ್ಷಿಕ ಬೆಳೆಗಳಿಗೆ 10000 ರೂಪಾಯಿ ಸೇರಿಸಿ ವಿತರಿಸಲಾಗುತ್ತಿದೆ.

ಜೂನ್ 1 ರಿಂದ ಆಗಸ್ಟ್ 4ರವರೆಗೆ ಸುರಿದಿರುವ ಭಾರಿ ಮಳೆಗೆ ರಾಜ್ಯಾದ್ಯಂತ 64 ಜನ ಪ್ರಾಣ ಕಳೆದುಕೊಂಡಿದ್ದಾರೆ. ಮಳೆಯಿಂದಾಗಿ ರಾಜ್ಯದ 14 ಜಿಲ್ಲೆಗಳಿಗೆ ತೊಂದರೆಯಾಗಿದೆ.

ಇದನ್ನೂ ಓದಿ : ಬೆಳೆ ವಿಮೆ ಪರಿಹಾರ 2022 ಸ್ಟೇಟಸ್ ಮೊಬೈಲ್ ನಲ್ಲೇ ಚೆಕ್ ಮಾಡಿ

ಮಳೆಯಿಂದ ಹಾಳಾಗಿರುವ ನಷ್ಟವನ್ನು ಅಂದಾಜಿಸಲು ಅಧಿಕಾರಿಗಳು ಸರ್ವೆ ಕಾರ್ಯ ಕೈಗೊಳ್ಳಲಿದ್ದಾರೆ. ಮನೆ ಕಳೆದುಕೊಂಡರೆ 5 ಲಕ್ಷ ರೂಪಾಯಿ ಹೊಲ ಗದ್ದೆಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿದ್ದರೆ ಎಕರೆಗೆ 13800 ರೂಪಾಯಿ, ಗೋಡೆ ಕುಸಿದರೆ 50 ಸಾವಿರ ರೂಪಾಯಿ ಪರಿಹಾರ ವಿತರಿಸಲಾಗುವುದು ಎಂದು ತಿಳಿಸಿದ್ದಾರೆ.

ಮಳೆಯಿಂದ ಭಾರೀ ಪ್ರಮಾಣದ ಬೆಳೆ ನಷ್ಟ

ರಾಜ್ಯದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಭಾರೀ ಪ್ರಮಾಣದ ಬೆಳೆ ನಷ್ಟವಾಗಿದೆ ಆದರೂ ರಾಜ್ಯ ಸರ್ಕಾರವು ಸಮರೋಪಾದಿಯಲ್ಲಿ ಪರಿಹಾರ ಕ್ರಮಗಳನ್ನು ಕೈಗೊಳ್ಳುತ್ತಿಲ್ಲವೆಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಗಲಪುರ ನಾಗೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅವರು ಮೈಸೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ 2018ರಿಂದ ಸತತವಾಗಿ ನಾಲ್ಕು ಬಾರಿ ಅತೀವೃಷ್ಟಿ ಉಂಟಾಗಿ ರೈತರಿಗೆ ಅಪಾರ ನಷ್ಟವಾಗುತ್ತಿದೆ. ಕೇವಲ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾಹಿತಿ ಕಲೆಹಾಕಲಾಗುತ್ತಿದೆ. ಹಾನಿಗೀಡಾದ ಪ್ರದೇಶಕ್ಕೆ ಸಂಬಂಧಿಸಿದ ಅಧಿಕಾರಿಗಳು ಭೇಟಿ ನೀಡುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದ್ದಾರೆ.

Leave a Comment