ರಾಜ್ಯದಲ್ಲಿ ಈಗಾಗಲೇ ಮುಂಗಾರು ತೀವ್ರಗೊಂಡಿದೆ. ಕಳೆದೆರಡು ದಿನಗಳಲ್ಲಿ ಸ್ವಲ್ಪ ಕ್ಷಿಣಿಸಿದ ಮಳೆ ಮತ್ತೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿ ಹಾಗೂ ಒಳನಾಡಿನ ಜಿಲ್ಲೆಗಳಲ್ಲಿ ಜೂನ್ 21 ರವರೆಗೆ ಭಾರಿ ಮಳೆ (Heavy rain) ಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಜೂನ್ 19 ರಂದು ಧಾರಾಕಾರ ಮಳೆಯಾಗುವ ಸಾಧ್ಯತೆಯಿರುವುದರಿಂದ ರೆಡ್ ಅಲರ್ಟ್ (Red Alert) ಘೋಷಿಸಲಾಗಿದೆ. ಕರಾವಳಿಯಲ್ಲಿ ಗಂಟೆಗೆ 50 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಗರಿಷ್ಠ 4.8 ಮೀಟರ್ ಗಳಷ್ಟು ಎತ್ತರದ ಅಲೆಗಳು ಏಳುತ್ತಿರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಇಲಾಖೆ ಎಚ್ಚರಿಸಿದೆ.
ಒಳನಾಡಿನ ಜಿಲ್ಲೆಗಳಲ್ಲೂ ಮುಂದಿನ ಎರಡು ದಿನ ವ್ಯಾಪಕ ಮಳೆಯಾಗಲಿದ್ದು, ಈ ಭಾಗದ ಶಿವಮೊಗ್ಗ, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಆರೇಂಜ್ ಅಲರ್ಟ್ (Orange alert) ಘೋಷಿಸಲಾಗಿದೆ. ಹಾವೇರಿ, ಧಾರವಾಡ, ಬೆಳಗಾವಿ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ (Yellow alert) ಘೋಷಿಸಲಾಗಿದೆ. ಉಳಿದೆಡೆ ಸಾಧಾರಣ ಮಳೆಯಾಗಲಿದೆ.
ಅಪಾಯಮಟ್ಟ ಮೀರಿ ಹರಿಯುತ್ತಿವೆ ನದಿಗಳು
ನೆರೆಯ ಮಹಾರಾಷ್ಟ್ರದ ಕೊಂಕಣ ಭಾಗ ಹಾಗೂ ರಾಜ್ಯದ ಗಡಿ ಭಾಗದಲ್ಲಿ ಕಳೆದ 24 ಗಂಟೆಯಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಗಡಿ ಭಾಗದ ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿದೆ.ವೇದಗಂಗಾ ಹಾಗೂ ದೂಧಗಂಗಾ ನದಿಯ ಐದು ಸೇತುವೆಗಳು ಮುಳುಗಡೆಗೊಂಡಿದ್ದು, ಸಂಚಾರ ಕಡಿತಗೊಂಡಿದೆ.
ಹಿಪ್ಪರಗಿ ಜಲಾಶಯದ ಒಳಹರಿವು 97000 ಕ್ಯೂಸೆಕ್
ಕಳೆದ ಕೆಲವು ದಿನಗಳಿಂದ ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ಸುರಿಯುತ್ತಿರುವ ಭಾರಿ ಪ್ರಮಾಣದ ಮಳೆಯಿಂದಾಗಿ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿ ಸಮೀಪದಲ್ಲಿ ಹರಿಯುತ್ತಿರುವ ಕೃಷ್ಣಾ ನದಿಗೆ ಶುಕ್ರವಾರ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಹಿಪ್ಪರಗಿ ಜಲಾಶಯಕ್ಕೆ ಶುಕ್ರವಾರ 97000 ಕ್ಯೂಸೆಕ್ ನೀರು ಹರಿದು ಬಂದಿದೆ. ಹೊರ ಹರಿವು 96 ಸಾವಿರ ಕ್ಯೂಸೆಕ್ ಇದೆ. ಜಲಾಶಯದಲ್ಲಿ ನೀರಿನ ಮಟ್ಟ 521 ಮೀಟರ್ ಇದೆ. ಮುಂದಿನ ದಿನಗಳಲ್ಲಿ ನದಿಯೂ ಅಪಾಯಮಟ್ಟ ಮೀರಿ ಹರಿಯುವ ಸಾಧ್ಯತೆಯಿರುವುದರಿಂದ ನದಿ ಪಾತ್ರದ ಜನರು, ತಮ್ಮ ಪಾತ್ರೆ ಹಾಗೂ ಜಾನುವಾರುಗಳ ಸಮೇತ ಸುರಕ್ಷಿತ ಸ್ಥಳಗಳಿಗೆ ತೆರಳಬೇಕೆಂದು ತಹಸೀಲ್ದಾರ ಮನವಿ ಮಾಡಿದ್ದಾರೆ.
ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆ –ಉಕ್ಕಿ ಹರಿಯುತ್ತಿದೆ ಘಟಪ್ರಭೆ
ಬೆಳಗಾವಿ ಜಿಲ್ಲೆಯಲ್ಲಿ ಭಾರಿ ಮಳೆ ಸುರಿಯದಿದ್ದರೂ ಪಕ್ಕದ ಬೆಳಗಾವಿ ಮತ್ತು ನೆರೆಯ ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಪರಿಣಾಮ ಘಟಪ್ರಭಾ ಮತ್ತು ಕೃಷ್ಣಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ.
ಕೃಷ್ಣಾ ಕಣಿವೆಯಲ್ಲಿ ಭಾರಿ ಮಳೆ-ಮೈದುಂಬಿ ಹರಿಯುತ್ತಿರುವ ಕೃಷ್ಣಾ
ಕೃಷ್ಣಾ ಕಣಿವೆಯಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಕೃಷ್ಣೆ ಈಗ ಮೈದುಂಬಿ ಅಪಾಯದ ಮಟ್ಟ ಮೀರಿ ಹರಿಯುವ ಸಾಧ್ಯತೆಯಿದೆ.