ಏಕ ದೇಶ, ಏಕ ಪಡಿತರ ಚೀಟಿ ಯೋಜನೆಯನ್ನು ಜಾರಿಗೆ ತಂದಿರುವ ಕೇಂದ್ರ ಸರ್ಕಾರ ಈಗ ‘ಮೇರಾ ರೇಷನ್ ಕಾರ್ಡ್’ (ನನ್ನ ಪಡಿತರ ಚೀಟಿ) ಎಂಬ ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದೆ. ಒಂದು ದೇಶ ಒಂದು ಪಡಿತರ ಚೀಟಿ ಯೋಜನೆಯಡಿ ರೇಷನ್ ಅಂಗಡಿಗಳನ್ನು ಸುಲುಭವಾಗಿ ಗುರುತಿಸಲು ಎಲ್ಲಿ ಬೇಕಾದರೂ ಪಡಿತರ ಪಡೆಯಲು ಅವಕಾಶ ಕಲ್ಪಿಸುವುದಕ್ಕಾಗಿ ಮೇರಾ ರೇಷನ್ ಕಾರ್ಡ್ ಮೊಬಲ್ ಆ್ಯಪ್ (‘Mera Ration’ mobile app ) ಬಿಡುಗಡೆ ಮಾಡಿದೆ.
ಒನ್ ನೇಷನ್ ಒನ್ ರೇಷನ್ ಕಾರ್ಡ್ ಯೋಜನೆ ದೇಶಾದ್ಯಂತ 32 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಸೇರಿಸಿದ್ದು, ದೆಹಲಿ, ಪಶ್ಚಿಮ ಬಂಗಾಳ, ಛತ್ತೀಸ್ ಗಢ ಮತ್ತು ಅಸ್ಸಾಂಗಳಲ್ಲಿ ಈ ಯೋಜನೆ ಇದುವರೆಗೂ ಜಾರಿಯಾಗಿಲ್ಲ. ಅತೀ ಶೀಘ್ರವೇ ಎಲ್ಲಾ ರಾಜ್ಯಗಳಲ್ಲಿಯೂ ಜಾರಿಗೆ ತರಲಾಗುವುದು ಎಂದು ಆಹಾರ ಕಾರ್ಯದರ್ಶಿ ಸುಧಾಂಶು ಪಾಂಡೆ ಮಾಹಿತಿ ನೀಡಿದರು.
ಆ್ಯಪ್ ಬಿಡುಗಡೆ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಡಿತರ ಚೀಟಿದಾರರು ತಮಗೆ ಎಷ್ಟು ಪಡಿತರ ಸಿಗುತ್ತದೆ ಎಂಬುದನ್ನು ಸ್ವತಃ ತಾವೇ ಪರೀಕ್ಷಿಸಿಕೊಳ್ಳಲು ಈ ಆ್ಯಪ್ ಸಹಾಯ ಮಾಡುತ್ತದೆ. ಈ ಆ್ಯಪ್ ನ ಪ್ರಯೋಜನಗಳನ್ನು ದೇಶದ ಯಾವುದೇ ಪಡಿತರ ಅಂಗಡಿಯಿಂದ ಪಡೆಯಲು ಒನ್ ನೇಷನ್ ಒನ್ ರೇಷನ್ ಕಾರ್ಡ್ ಯೋಜನೆಯಡಿ ಪಡಿತರ ಚೀಟಿದಾರರು ತಮ್ಮ ಪಾಲಿನ ಆಹಾರಧಾನ್ಯಗಳನ್ನು ಸಂಗ್ರಹಿಸಬಹುದು.
2021ರ ಮಾರ್ಚ್ 31ರಂದು ದೇಶಾದ್ಯಂತ ಒಂದೇ ಒಂದು ಪಡಿತರ ಚೀಟಿ ಯೋಜನೆ ಜಾರಿಗೆ ಬರಲಿದೆ. ಒಂದೇ ಪಡಿತರ ಚೀಟಿ ಇಟ್ಟುಕೊಂಡು ದೇಶದ ಯಾವುದೇ ಭಾಗದಲ್ಲಿ ಬೇಕಾದರೂ ಪಡಿತರ ಪಡೆಯುವ ಯೋಜನೆ ಇದಾಗಿದೆ. ವಿಶೇಷವಾಗಿ ರಾಜ್ಯದಿಂದ ರಾಜ್ಯಗಳಿಗೆ ವಲಸೆ ಹೋಗುವ ವಲಸಿಗರಿಗೆ ಈ ಆ್ಯಪ್ ನೆರವಾಗಲಿದ್ದು, ಸಮೀಪದ ರೇಶನ್ ಅಂಗಡಿಯನ್ನು ಆ್ಯಪ್ ಮೂಲಕ ಗುರುತಿಸಬಹುದಾಗಿದೆ.
ಸದ್ಯ ಮೇರೇ ರೇಷನ್ ಕಾರ್ಡ್ ಆ್ಯಪ್ ಇಂಗ್ಲಿಷ್ ಹಾಗೂ ಹಿಂದಿ ಭಾಷೆಯಲ್ಲಿ ಲಭ್ಯವಿದೆ. ಶೀಘ್ರದಲ್ಲೇ ದೇಶದ ಇತರ 14 ಭಾಷೆಗಳಲ್ಲಿ ಲಭ್ಯವಾಗಲಿದೆ. ವಲಸಿಗರು ಹೆಚ್ಚು ಎಲ್ಲಿದ್ದಾರೆ ಎಂದು ಗುರುತಿಸಿ ಭಾಷೆಗಳನ್ನು ನಿರ್ಧರಿಸಲಾಗುತ್ತದೆ ಎಂದು ಸರ್ಕಾರ ಹೇಳಿದೆ.
ಕೇಂದ್ರ ಸರ್ಕಾರವು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ 81 ಕೋಟಿ ಜನರಿಗೆ ರಿಯಾಯಿತಿ ದರದಲ್ಲಿ ನಾನಾ ರೀತಿಯ ಆಹಾರ ಧಾನ್ಯಗಳನ್ನು ವಿತರಿಸುತ್ತದೆ. ಆದರೆ ವಲಸೆ ಕಾರ್ಮಿಕರು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ತೆರಳಿದಾಗ ಪಡಿತರ ಪಡೆಯಲು ಸಾಧ್ಯವಾಗುವುದಿಲ್ಲ. ಈ ಸಮಸ್ಯೆಯನ್ನು ನಿವಾರಿಸಲೆಂದೇ ಯಾವುದೇ ವಲಸಿಗ ವ್ಯಕ್ತಿ ದೇಶದ ಯಾವುದೇ ಪಡಿತರ ಅಂಗಡಿಯಿಂದ ಅಗತ್ಯವಿರುವ ಪಡಿತರ ಪಡೆಯಲು ಒಂದು ದೇಶ, ಒಂದು ಪಡಿತರ ಎಂಬ ಯೋಜನೆಯನ್ನು ಕೇಂದ್ರ ಸರ್ಕಾರ ರೂಪಿಸಿದೆ.
ಹೇಗೆ ಕೆಲಸ ಮಾಡುತ್ತದೆ:
ಈ ಆ್ಯಪ್ ಮೂಲಕ ಸಮೀಪದ ರೇಶನ್ ಅಂಗಡಿ ಎಲ್ಲಿದೆ..?. ಅಲ್ಲಿ ಯಾವ ಧಾನ್ಯ ಸಿಗಲಿವೆ..? ಇತ್ತೀಚಿನ ವಹಿವಾಟು, ಆಧಾರ್ ಸಂಯೋಜನೆ ಮಾಹಿತಿ ಲಭ್ಯವಿರುತ್ತದೆ. ವಲಸಿಗರು ತಮ್ಮ ವಿವರವನ್ನು ಆ್ಯಪ್ ಮೂಲಕ ನೀಡಿ ರೇಷನ್ ಪಡೆಯಬಹುದು.