ರಾಜ್ಯದಲ್ಲಿ 2021ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸದಿರಲು (Karnataka PUC Exam cancelled) ನಿರ್ಧಾರ ಕೈಕೊಳ್ಳಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ ಕುಮಾರ ತಿಳಿಸಿದ್ದಾರೆ.
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೋವಿಡ್ ಕಾರಣದಿಂದಾಗಿ ವಿದ್ಯಾರ್ಥಿಗಳ ಆರೋಗ್ಯ ದೃಷ್ಯಿಂದಾಗಿ ಪರೀಕ್ಷೆಯಿಲ್ಲದೆ ವಿದ್ಯಾರ್ಥಿಗಳನ್ನು ತೇರ್ಗಡೆ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಈಗಾಗಲೇ ಕೇಂದ್ರಮಟ್ಟದ ಸಿಬಿಎಸ್ಇ 12ನೇ ತರಗತಿಯ ಪರೀಕ್ಷೆಗಳು ರದ್ದಾಗಿದೆ ಎಂದರು.
ಕಳೆದ ವರ್ಷಕ್ಕಿಂತ ಈ ವರ್ಷ ಪರಿಸ್ಥಿತಿ ತುಂಬಾ ವಿಭಿನ್ನವಾಗಿದೆ. ಮಕ್ಕಳ ಯೋಗಕ್ಷೇಮ ಮತ್ತು ಶೈಕ್ಷಣಿಕ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ನಡೆಸುವುದಿಲ್ಲ. ಪ್ರಥಮ ಪಿಯುಸಿ ಪರೀಕ್ಷೆ ಫಲಿತಾಂಶದ ಆಧಾರದ ಮೇಲೆ ಗ್ರೇಡಿಂಗ್ ನೀಡಲು ನಿರ್ಧರಿಸಲಾಗಿದೆ ಎಂದರು.
ವಿದ್ಯಾರ್ಥಿಗಳಿಗೆ ಎ, ಎ+, ಬಿ. ಬಿ+ ಎಂಬಂತೆ ಗ್ರೇಡ್ ನೀಡಲಾಗುವುದು. ಯಾವುದೇ ವಿದ್ಯಾರ್ಥಿ ಗ್ರೇಡ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರೆ, ತೃಪ್ತಿಯಿಲ್ಲ ಎಂದರೆ ಮಾತ್ರ ಅಂತಹ ವಿದ್ಯಾರ್ಥಿಗಳಿಗೆ ಕೋವಿಡ್ ಬಿಕ್ಕಟ್ಟು ಬಗೆಹರಿದನಂತರ ಪರೀಕ್ಷೆ ನಡೆಸಲಾಗುವುದು ಎಂದರು.
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಇಲ್ಲದೆ ಗ್ರೇಡಿಂಗ್ ನೀಡಲು ಕಷ್ಟವಾಗಿದೆ. ಕಾರಣ ಕಳೆದ ವರ್ಷ 9ನೇ ತರಗತಿ ಪರೀಕ್ಷೆಗಳನ್ನು ನಡೆಸಿಲ್ಲ. ಆ ಕಾರಣಕ್ಕಾಗಿ ಗ್ರೇಡಿಂಗ್ ನೀಡಲು ಅನಿವಾರ್ಯವಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ನಡೆಸುತ್ತಿದ್ದೇವೆ ಎಂದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಬಹು ಆಯ್ಕೆ (ಮಲ್ಟಿಪಲ್ ಚಾಯ್ಸ್) ಮೇಲೆ ನಡೆಯುತ್ತವೆ. ಎರಡು ಪರೀಕ್ಷೆ ಇರುತ್ತದೆ. ಭಾಷಾ ಪರೀಕ್ಷೆಗೆ ಒಂದು ಪ್ರಶ್ನೆ ಪತ್ರಿಕೆ ಮತ್ತು ಐಚ್ಛಿಕ ವಿಷಯಗಳಾದ ಸಮಾಜ, ಗಣಿತ ಮತ್ತು ವಿಜ್ಞಾನ ಇವುಗಳಿಗೆ ಒಂದು ಪ್ರಶ್ನೆ ಪತ್ರಿಕೆ ಇರುತ್ತದೆ ಎಂದರು.
ಎಸ್‌ಎಸ್‌ಎಲ್‌ಸಿಗೆ ನಡೆಯುವ ಎರಡು ವಿಷಯಗಳ ಪರೀಕ್ಷೆಯಲ್ಲಿ ಭಾಷಾ ವಿಷಯಗಳಾದ ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಮೂರೂ ವಿಷಯಗಳನ್ನು ಸೇರಿಸಿ ಒಂದು ಪರೀಕ್ಷೆ, ಐಚ್ಛಿಕ ವಿಷಯಗಳಾದ ಗಣಿತ, ಸಮಾಜ, ವಿಜ್ಞಾನ ವಿಷಯಗಳೂ ಸೇರಿದಂತೆ ಎರಡೂ ಪರೀಕ್ಷೆಗಳು ನಡೆಯಲಿವೆ. ಪ್ರತಿ ವಿಷಯಕ್ಕೆ ತಲಾ 40 ಅಂಕದಂತೆ 120 ಅಂಕಗಳಿಗೆ ಪರೀಕ್ಷೆ ಇದ್ದು, ಪ್ರತಿ ಪ್ರಶ್ನೆಗೂ 4 ಉತ್ತರಗಳಿರುತ್ತವೆ. ವಿದ್ಯಾರ್ಥಿಗಳು ಸರಿಯಾದ ಒಂದು ಉತ್ತರವನ್ನು ಆಯ್ಕೆ ಮಾಡಬೇಕು ಎಂದವರು ಹೇಳಿದರು.
ಈ ಪರೀಕ್ಷೆಗೆ 4 ಗಂಟೆಯ ಕಾಲಾವಕಾಶ ನೀಡಲಾಗಿದೆ. ಪ್ರಶ್ನೆಗಳು ಸರಳ ಮತ್ತು ನೇರವಾಗಿ ಇರುತ್ತವೆ ವಿದ್ಯಾರ್ಥಿಗಳು ಗೊಂದಲಕ್ಕೆ ಒಳಗಾಗದಂತಹ ಸರಳ ಪ್ರಶ್ನೆಗಳನ್ನು ನೀಡಲಾಗುವುದು ಎಂದರು.
ಜುಲೈ ಮೂರನೇ ವಾರದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ನಡೆಯಲಿದ್ದು, 20 ದಿನ ಮೊದಲೇ ಪರೀಕ್ಷೆಯ ವೇಳಾಪಟ್ಟಿ ಬಿಡುಗಡೆ ಮಾಡುತ್ತೇವೆ, ಮಾದರಿ ಪ್ರಶ್ನೆ ಪತ್ರಿಕೆಯನ್ನು ಪ್ರಕಟಿಸಲಾಗುವುದು. ಪರೀಕ್ಷೆಗೆ ಹಾಜರಾಗುವ ಪ್ರತಿ ವಿದ್ಯಾರ್ಥಿಗೂ ಎನ್-95 ಮಾಸ್ಕ್ ನೀಡಲಾಗುವುದು. ಪರೀಕ್ಷಾ ಮೇಲ್ವಿಚಾರಕರಿಗೆ ವ್ಯಾಕ್ಸಿನೇಷನ್ ಮಾಡುವುದಾಗಿ ಅವರು ಹೇಳಿದರು.