ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಡ್-19 ಎರಡನೇ ಎಲೆ ತೀವ್ರವಾಗಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೊರೋನಾ ಸೋಂಕನ್ನು ತಡೆಯಲು ಮೇ 10 ರಿಂದ 24 ರವರೆಗೆ ಲಾಕ್ಡೌನ್ (Karnataka complete Lockdown) ಘೋಷಿಸಲಾಗಿದೆ.

ಶುಕ್ರವಾರ ಸಚಿವರು ಮತ್ತು ಅಧಿಕಾರಿಗಳ ಜತೆಗೆ ಸಭೆ ನಡೆಸಿದ ಬಳಿಕೆ ಸಾಯಂಕಾಲ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ತುರ್ತು ಸುದ್ದಿಗೋಷ್ಠಿ ಕರೆದು  ಲಾಕ್ಡೌನ್ ಮಾಹಿತಿ ನೀಡಿದರು. ಕರ್ನಾಟಕದಲ್ಲಿ ಈಗಾಗಲೇ ಜನತಾ ಕರ್ಫ್ಯೂ ಜಾರಿಯಲ್ಲಿದೆ. ಆದರೂ ಸೋಂಕಿನ ಸಂಖ್ಯೆ ನಿಯಂತ್ರಣಕ್ಕೆ ಬಾರದಿದ್ದರಿಂದ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮಕೈಗೊಂಡಿದೆ ಎಂದು ಹೇಳಿದರು.

ಯಾವುದಕ್ಕೆಲ್ಲಾ ನಿರ್ಬಂಧ ಗೊತ್ತಾ?

ಈಗಾಗಲೇ ನಿಗದಿಯಾಗಿರುವ ವಿಮಾನ, ರೈಲುಗಳು ಮಾತ್ರ ಓಡಾಡಲಿವೆ. ಮೆಟ್ರೋ, ಆಟೋ ರಿಕ್ಷಾ, ಕ್ಯಾಬ್‌, ಸಾರಿಗೆ ಬಸ್‌ಗಳು ಇರುವುದಿಲ್ಲ. ತುರ್ತು ಬಳಕೆಗೆ ಮಾತ್ರ ಕ್ಯಾಬ್‌ಗಳನ್ನು ಬಳಸಬಹುದು. ಶಾಲೆ, ಕಾಲೇಜು ಯಾವುದೂ ಇಲ್ಲ.

ಹೋಟೆಲ್‌, ರೆಸ್ಟೋರೆಂಟ್‌, ಅತಿಥಿ ಗೃಹಗಳು ಇರುವುದಿಲ್ಲ. ಹೋಟೆಲ್‌ಗಳಲ್ಲಿ ಪಾರ್ಸೆಲ್‌ ಸೇವೆಗೆ ಅಡುಗೆ ಕೋಣೆ ತೆರೆದಿರಬಹುದು. ಇದಲ್ಲದೆ, ಆರೋಗ್ಯ ಸಿಬ್ಬಂದಿ, ಪೊಲೀಸರು, ಸರಕಾರಿ ಅಧಿಕಾರಿಗಳು ಹಾಗೂ ರಾಜ್ಯದಲ್ಲಿ ಸಿಲುಕಿಕೊಂಡ ಪ್ರವಾಸಿಗಳು ಮಾತ್ರ ಹೋಟೆಲ್‌ಗಳಲ್ಲಿ ಉಳಿದುಕೊಳ್ಳಬಹುದು. ಪಾರ್ಸೆಲ್‌ ತೆಗೆದುಕೊಳ್ಳಲು ವಾಹನದಲ್ಲಿ ಹೋಗುವಂತಿಲ್ಲ.

ಸಿನಿಮಾ ಮಂದಿರ, ಜಿಮ್‌, ಸ್ಪಾ, ಶಾಪಿಂಗ್‌ ಮಾಲ್‌, ಯೋಗ ಕೇಂದ್ರ, ಕ್ರೀಡಾ ಚಟುವಟಿಕೆಗಳು, ಮನರಂಜನಾ ತಾಣಗಳು, ಅಮ್ಯೂಸ್‌ಮೆಂಟ್‌ ಪಾರ್ಕ್‌ಗಳು, ಕ್ಲಬ್‌ಗಳು, ಬಾರ್, ಅಡಿಟೋರಿಯಂಗಳನ್ನು ತೆರೆಯುವಂತಿಲ್ಲ. ಎಲ್ಲಾ ಸಾಮಾಜಿಕ, ರಾಜಕೀಯ, ಕ್ರೀಡೆ, ಮನರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳಿಗೆ ಅವಕಾಶ ಇಲ್ಲ.ಎಲ್ಲಾ ಧಾರ್ಮಿಕ ಕ್ಷೇತ್ರಗಳು ಮುಚ್ಚರಲಿವೆ.

ಏನೇನು ಓಪನ್ ಇರುತ್ತವೆ:

ಆರೋಗ್ಯ, ವೈದ್ಯಕೀಯ ಶಿಕ್ಷಣ, ಪೊಲೀಸ್,  ಗೃಹ ರಕ್ಷಕ ದಳ, ಬಂಧೀಖಾನೆ, ನಾಗರಿಕ ರಕ್ಷಣೆ, ಅಗ್ನಿಶಾಮಕ ಸೇವೆ,  ಕಂದಾಯ ಇಲಾಖೆ, ವಿಪತ್ತು ನಿರ್ವಹಣಾಇಲಾಖಾ ಅಧಿಕಾರಿಗಳು, ಬೆಸ್ಕಾಂ, ಒಳಚರಂಡಿ, ನೀರು ,  ಖಜಾನೆ ಅಧಿಕಾರಿಗಳು, ಬ್ಯಾಂಕ್ , ವಿಮಾ ಕಂಪನಿಗಳು , ಎಟಿಎಂಗಳು, ಮುದ್ರಣ ಮತ್ತು ಎಲೆಕ್ರ್ಟಾನಿಕ್ ಮಾಧ್ಯಮಗಳು ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡಲಾಗಿದೆ ಎಂದರು.

ಪೆಟ್ರೋಲ್‌, ಡೀಸೆಲ್‌, ಎಲ್‌ಪಿಜಿ ಹಾಗೂ ಪಿಎನ್‌ಜಿ ಗ್ಯಾಸ್‌ ಕೇಂದ್ರಗಳು, ವಿದ್ಯುತ್‌ ಉತ್ಪಾದನೆ ಮತ್ತ ಸರಬರಾಜು ಕೇಂದ್ರಗಳು, ವಿಕೋಪ ನಿರ್ವಹಣಾ ಕೇಂದ್ರಗಳು, ಅಂಚೆ ಕಚೇರಿ ಮತ್ತು ಮುನ್ನೆಚ್ಚರಿಕೆ ನೀಡುವ ಕೇಂದ್ರಗಳು ತೆರೆದಿರಲಿವೆ. ಕೋರ್ಟ್‌ ಮತ್ತು ನ್ಯಾಯಾಂಗಕ್ಕೆ ಸಂಬಂಧಿಸಿದ ಕಚೇರಿ ಕೆಲಸಗಳು ಹೈಕೋರ್ಟ್‌ ಹೊರಡಿಸಿದ ಮಾರ್ಗಸೂಚಿಯನ್ವಯ ಮುಂದುವರಿಯುತ್ತವೆ.

ನ್ಯಾಯಬೆಲೆ ಅಂಗಡಿಗಳು, ದಿನಸಿ, ತರಕಾರಿ ಮತ್ತು ಹಣ್ಣು, ಹಾಲು ಮತ್ತು ಬೇಕರಿ ಉತ್ಪನ್ನಗಳು, ಮಾಂಸ ಮತ್ತು ಮೀನು ಮತ್ತು ಪ್ರಾಣಿಗಳ ಮೇವಿನ ಅಂಗಡಿಗಳು, ಮದ್ಯದ ಅಂಗಡಿಗಳು ಬೆಳಿಗ್ಗೆ 6 ರಿಂದ 10ಗಂಟೆವರೆಗೆ ಮಾತ್ರ ತೆರೆದಿರಲಿವೆ. ಹೋಮ್‌ ಡೆಲಿವರಿಗೆ ಅವಕಾಶವಿದೆ. ತಳ್ಳುಗಾಡಿಗಳು, ಹಾಲಿನ ಬೂತ್‌ಗಳು, ಹಾಪ್‌ಕಾಮ್ಸ್‌ಗಳು ಬೆಳಿಗ್ಗೆ 6 ರಿಂದ ಸಂಜೆ 6ರವರೆಗೆ ತೆರೆದಿರಲಿವೆ.

ಮದುವೆಗೆ 50 ಜನ, ಅಂತ್ಯಸಂಸ್ಕಾರಕ್ಕೆ 50 ಜನ:

ಈಗಾಗಲೇ ನಿಗದಿಯಾಗಿರುವ ಮದುವೆಯಲ್ಲಿ 50 ಜನ ಮಾತ್ರ ಭಾಗವಹಿಸಬಹುದು. ಅಂತ್ಯಸಂಸ್ಕಾರದಲ್ಲಿ ಕೇವಲ 5 ಜನ ಭಾಗವಹಿಸಲು ಅವಕಾಶವಿದೆ. ಅಲ್ಲೂ ಕೊರೊನಾ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಲೇಬೇಕು. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಾಸ್ಕ್‌ ಧರಿಸದಿದ್ದರೆ 250 ರೂ. ಹಾಗೂ ಉಳಿದೆಡೆ 100 ರೂ. ದಂಡ ವಿಧಿಸಲು ಆದೇಶಿಸಲಾಗಿದೆ

Leave a Reply

Your email address will not be published. Required fields are marked *