ಕೊರೊನಾ ಸಂಕಷ್ಟಕ್ಕೆ ಸಿಲುಕಿ ಪರಿತಪಿಸುತ್ತಿರುವ ಕೃಷಿ ವಲಯಕ್ಕೆ ಈ ಬಾರಿಯ 2021-22ನೇ ಸಾಲಿನ ಬಜೆಟ್ ನಲ್ಲಿ (karnataka Budget 2021-22 ) ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಭರಪೂರ ಕೊಡುಗೆ ನೀಡಿದ್ದು, ಒಟ್ಟಾರೆ ಕೃಷಿ ಕ್ಷೇತ್ರಕ್ಕೆ 31028 ಕೋಟಿ ರೂಪಾಯಿ ಅನುದಾನ ಒದಗಿಸಿದ್ದಾರೆ.
ಒಟ್ಟು 2 ಕೋಟಿ 46 ಲಕ್ಷದ 207 ಕೋಟಿ ರೂಪಾಯಿ ಬಜೆಟ್ ಮಂಡಿಸಿದ ಬಿಎಸ್ ಯಡಿಯೂರಪ್ಪ ಕೋವಿಡ್ ಸಂಕಷ್ಟದಲ್ಲೂ ಕೃಷಿ ಕ್ಷೇತ್ರಕ್ಕೆ ಭಾರೀ ಅನುದಾನ ನೀಡಿದ್ದಾರೆ.
ಗುಣಮಟ್ಟದ ಬಿತ್ತನೆ ಬೀಜ, ಬೆಳೆ ನಿರ್ವಹಣೆ, ಕೊಯ್ಲೋತ್ತರ ನಿರ್ವಹಣೆ, ಸಂಗ್ರಹಣೆ, ನೀರಾವರಿ, ಪಶುಸಂಗೋಪನೆ, ಮೀನುಗಾರಿಕೆ ಸೇರಿದಂತೆ ಪ್ರತಿಯೊಂದು ಹಂತದಲ್ಲೂ ರೈತಾಪಿ ವರ್ಗದವರಿಗೆ ಅಗತ್ಯ ಮೂಲಭೂತ ಸೌಲಭ್ಯ ಒದಗಿಸಲು ಸರ್ಕಾರ ಮುಂದಾಗಿದೆ. ಪ್ರಸಕ್ತ ಸಾಲಿನಲ್ಲಿ ಫಸಲ್ ಬಿಮಾ ಯೋಜನೆಗೆ 900 ಕೋಟಿ ರೂ.ಗಳನ್ನು ಹಾಗೂ ಕೃಷಿ ಸಿಂಚಾಯಿ ಯೋಜನೆಗಳಿಗೆ 831 ಕೋಟಿ ರೂ.ಗಳನ್ನು ಒದಗಿಸಿದ್ದಾರೆ.
ರೈತ ಮಕ್ಕಳ ಮೀಸಲಾತಿ ಶೇ. 50ಕ್ಕೆ ಹೆಚ್ಚಳ
ಈ ಬಾರಿಯ ಮುಂಗಡಪತ್ರದಲ್ಲಿ ಕೃಷಿ ವಿಶ್ವವಿದ್ಯಾನಿಲಯಗಳಲ್ಲಿ ರೈತ ಮಕ್ಕಳಿಗೆ ನೀಡುತ್ತಿರುವ ಮೀಸಲಾತಿಯನ್ನು ಶೇ. 40 ರಿಂದ ಶೇ. 5೦ಕ್ಕೆ ಹೆಚ್ಚಿಸಲಾಗಿದೆ. ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳಲ್ಲಿ ರೈತರ ಮಕ್ಕಳಿಗೆ ಕೃಷಿ ಪದವಿ ಪಡೆಯಲು ಈವರೆಗೆ ಶೇಕಡಾ 40ರಷ್ಟು ಸೀಟುಗಳನ್ನು ಮಾತ್ರ ನೀಡಲಾಗುತ್ತಿತ್ತು. ಈ ಬಾರಿಯ ಬಜೆಟ್‌ನಲ್ಲಿ ಈ ಮಿತಿಯನ್ನು ಶೇಕಡಾ 50ಕ್ಕೆ ಹೆಚ್ಚಳ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಕಟಿಸಿದರು.
ರೈತರು ಮಿತವ್ಯಯದಲ್ಲಿ ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು ನೆರವಾಗುವಂತೆ ಕೃಷಿಯಂತ್ರದಾರಿ ಕೇಂದ್ರಗಳನ್ನು ಬಲಪಡಿಸುವುದಾಗಿ ಪ್ರಸ್ತಾಪಿಸಿದ್ದಾರೆ. ಅವಶ್ಯವಿರುವ ಆಧುನಿಕ ಕೃಷಿ ಹಾಗೂ ಕೊಯ್ಲೋತ್ತರ ಯಂತ್ರೋಪಕರಣಗಳನ್ನು ಒದಗಿಸಲು ಮುಂದಾಗಿದ್ದಾರೆ. ಕೃಷಿ ಯಾಂತ್ರಿಕರಣ ಯೋಜನೆಯಡಿ ಸಣ್ಣ ಟ್ರ್ಯಾಕ್ಟರ್ಗಳಿಗೆ ಸಹಾಯಧನ ಹೆಚ್ಚಿಸಿದ್ದಾರೆ.
ಸಾವಯವ ಕೃಷಿಗೆ 500 ಕೋಟಿ ಅನುದಾನ
ಸಾವಯವ ಕೃಷಿಗೆ 500 ಕೋಟಿ ರೂ. ಯೋಜನೆಯನ್ನು ರೂಪಿಸಲು ಮುಂದಾಗಿದ್ದಾರೆ. ಜನರಿಗೆ ಆರೋಗ್ಯಕರ ಮತ್ತು ರಾಸಾಯನಿಕಮುಕ್ತ ಉತ್ಪನ್ನಗಳನ್ನು ದೊರಕಿಸಿಕೊಡಲು ಸಹಕಾರಿಯಾಗಲಿದೆ. ಸಾವಯವ ಮತ್ತು ಸಿರಿಧಾನ್ಯಗಳನ್ನು ವೈಜ್ಞಾನಿಕ ಬೆಲೆಯಲ್ಲಿ ಮಾರಾಟ ಮಾಡಲು ಹಾಗೂ ರೈತರಿಗೆ ಗರಿಷ್ಠ ಬೆಲೆ ದೊರಕಿಸಿಕೊಡಲು ರಾಷ್ಟ್ರೀಯ ಇ-ಮಾರುಕಟ್ಟೆ ಪ್ರೈವೇಟ್ ಲಿಮಿಟೆಡ್ ಮೂಲಕ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ.
ಪ್ರತಿ ಜಿಲ್ಲೆಗಳಿಗೆ ಗೋಶಾಲೆ
ಗೋ ಸಂಪತ್ತಿನ ರಕ್ಷಣೆಗಾಗಿ ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಗೋಶಾಲೆ ನಿರ್ಮಾಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದಿನ ಬಜೆಟಿನಲ್ಲಿ ಘೋಷಿಸಿದ್ದಾರೆ. ದೇಶೀಯ ಪಶು ಸಂಪತ್ತಿನ ರಕ್ಷಣೆಗೆ ಸರ್ಕಾರ ಕ್ರಮಕೈಗೊಳ್ಳಲಿದೆ. ದೇಶೀಯ ಗೋ ಸಂಪತ್ತಿನ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆಯೊಂದಿಗೆ ಮಾಹಿತಿ ತರಬೇತಿ ನೀಡಲು ಹೆಸರುಘಟ್ಟದಲ್ಲಿ ಥೀಮ್ ಪಾರ್ಕ್ ಸ್ಥಾಪನೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.