ಹೆಚ್ಚು ಇಳುವರಿ ನೀಡುವ ಕದಿರಿ ಲೇಪಾಕ್ಷಿ ತಳಿಯ ಮಾಹಿತಿ ಇಲ್ಲಿದೆ

Written by By: janajagran

Updated on:

ಕಡಿಮೆ ಇಳುವರಿ ಕೊಡುವ ಶೇಂಗಾ ಬಿತ್ತಿ ಬಿತ್ತಿ ಸುಸ್ತಾಗಿದ್ದೀರಾ…ಹೆಚ್ಚು ಇಳುವರಿ ಕೊಡುವ ತಳಿ ಗೊತ್ತಿಲ್ಲದೆ ಪರದಾಡುತ್ತಿರುವ ರೈತರಿಗಿಲ್ಲಿದೆ ಸಂತಸದ ಸುದ್ದಿ. ಇತ್ತೀಚೆಗೆ ಆಂಧ್ರಪ್ರದೇಶದ ನೆಲಗಡಲೆ ತಳಿ ಕರ್ನಾಟಕದಲ್ಲಿಯೂ ಹೆಚ್ಚು ಸದ್ದು ಮಾಡುತ್ತಿದೆ. ಆದು ಯಾವುದಪ್ಪಾ ಅಂದುಕೊಂಡಿದ್ದೀರಾ… ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಕದಿರಿಯಲ್ಲಿನ ಸರ್ಕಾರದ ನೆಲಗಡಲೆ ಸಂಶೋಧನಾ ಕೇಂದ್ರ ಅಭಿವೃದ್ಧಿಪಡಿಸಲಾದ ಕದಿರಿ ಲೇಪಾಕ್ಷಿ ಕೆ-1812 ತಳಿ ಕರ್ನಾಟಕದಲ್ಲಿಯೂ ಹೆಚ್ಚು ಪ್ರಸಿದ್ಧಿಯಾಗುತ್ತಿದೆ.

ಶೇಂಗಾ (ನೆಲಗಡಲೆ) ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಬೆಳೆಯುತ್ತಾರೆ. ಎಲ್ಲಾ ರೀತಿಯ ಹವಾಗುಣಕ್ಕೂ ಹೊಂದಿಕೊಳ್ಳುವ ಗುಣ ಹೊಂದಿರುವ ಶೇಂಗಾ ನೀರಾವರಿ ಹಾಗೂ ಖುಷ್ಕಿ ಭೂಮಿ ಕೆಂಪು ಹಾಗೂ ಕಪ್ಪು ಮಣ್ಣನಲ್ಲಿಯೂ ಬೆಳೆಯಬಹುದು.

ಈ ತಳಿಯು 110 ರಿಂದ 120 ದಿನಗಳಲ್ಲಿ ಕಟಾವಿಗೆ ಬರುತ್ತದೆ. ಒಂದು ಗಿಡಕ್ಕೆ 150 ರಿಂದ 200 ವರೆಗೆ ಕಾಯಿ ಕಟ್ಟುತ್ತದೆ. ಕಾಯಿಗಳು ದೊಡ್ಡಗಾತ್ರದಲ್ಲಿರುತ್ತವೆ. ಬೇರೆ ತಳಿಗೆ ಹೋಲಿಸಿದರೆ ಈ ತಳಿ ಎರಡರಿಂದ ಮೂರು ಪಟ್ಟು ಹೆಚ್ಚು ಇಳುವರಿ ಕೊಡುತ್ತದೆ. ಈ ತಳಿಯನ್ನು ಮಳೆಯಾಧಾರಿತ ಹಾಗೂ ಕೊಳವೆ ಬಾವಿಯ ನೀರಾವರಿ ಸೌಕರ್ಯ ಹೊಂದಿರುವ ರೈತರು ಬೆಳೆಯಬಹುದು. ಈ ತಳಿಯ ಬೆಲೆಯೂ ಮಾರುಕಟ್ಟೆಯಲ್ಲಿ ದುಪ್ಪಟ್ಟಾಗಿದೆ.

ಬೇರೆ ತಳಿಗೆ ಹೋಲಿಸಿದರೆ ಕದಿರಿ ಲೇಪಾಕ್ಷಿ ತಳಿಗೆ ರೋಗ ಬರುವುದು ಕಡಿಮೆ. ಈ ಕದಿರಿ ಲೇಪಾಕ್ಷಿ ತಳಿಯಲ್ಲಿ ಎಣ್ಣೆ ಅಂಶವೂ ಹೆಚ್ಚಾಗಿರುತ್ತದೆ. ಕಾಯಿಗಳಲ್ಲಿ ಬೀಜ ತುಂಬ ಗಡ್ಡಿಯಾಗಿರುತ್ತದೆ. ಹಾಗಾಗಿ ಹೆಚ್ಚು ತೂಕ ತೂಗುತ್ತದೆ.  ಪ್ರತಿ ಎಕರೆಗೆ 15 ರಿಂದ 20 ಕ್ವಿಂಟಾಲ್ ಇಳುವರಿ ಕೊಡುತ್ತದೆ ಎಂದು ಲೇಪಾಕ್ಷಿ ತಳಿ ಬಿತ್ತನೆ ಮಾಡಿದ ರೈತರ ಅನುಭವದ ಮಾತಾಗಿದೆ.

ಬೇರೆ ತಳಿಗೆ ಹೋಲಿಕೆ ಮಾಡಿದರೆ ಇಳುವರಿ ಅಷ್ಟೇ ಅಲ್ಲ ಈ ತಳಿ ಬೇಗ ರೋಗಕ್ಕೆ ತುತ್ತಾಗುವುದಿಲ್ಲ. ರೋಗ ನಿರೋಧಕ ಶಕ್ತಿ ಹೆಚ್ಚಿರುವುದರಿಂದ ಈ ತಳಿಗೆ ಎಲೆಚುಕ್ಕೆ ರೋಗ, ತುಕ್ಕು ರೋಗಗಳು ಬರುವುದಿಲ್ಲ. ಗಿಡಗಳು ವಿಶಾಲವಾಗಿ ಬೆಳೆಯುತ್ತವೆ.. ಏಕಕಾಲದಲ್ಲಿ ಹೂ ಬಿಟ್ಟು ಕಾಯಿ ಕಟ್ಟುವುದರಿಂದ  ಇಳುವರಿಯೂ ಹೆಚ್ಚಾಗುತ್ತದೆ ಎನ್ನುತ್ತಾರೆ ಲೇಪಾಕ್ಷಿ ತಳಿ ಬಿತ್ತಿದ ರೈತರು.

ಇದನ್ನೂ ಓದಿ: ರೈತರಿಗೆ ಸಂತಸದ ಸುದ್ದಿ: ಹೆಚ್ಚು ಇಳುವರಿ ಕೊಡುವ ಶೇಂಗಾ (High yielding Groundnut varieties) ತಳಿಗಳ ಮಾಹಿತಿ ಇಲ್ಲಿದೆ

ರಾಜ್ಯದ ಎಲ್ಲಾ ರೈತ ಸಂಪರ್ಕ ಕೇಂದ್ರದಲ್ಲಿ ಕರ್ನಾಟಕ ಸರ್ಕಾರವು ಈ ತಳಿಯನ್ನು ವಿತರಣೆ ಮಾಡಿದರೆ ರೈತರಿಗೆ ತುಂಬಾ ಅನುಕೂಲವಾಗುತ್ತದೆ. ಯಾರದ್ದೋ ಮಾತು ಕೇಳಿ ಸರಿಯಾಗಿ ಬೀಜ ಗುರುತಿಸದೆ ಇತರ ತಳಿಗಳನ್ನು ಕದಿರಿ ಲೇಪಾಕ್ಷಿ ತಳಿಯೆಂದು ರೈತರಿಗೆ ಯಾರೂ  ಮೋಸ ಮಾಡದಿರಲು ಸರ್ಕಾರವೇ ವಿತರಣೆ ಮಾಡಬೇಕು.  ಕದಿರಿ ಲೇಪಾಕ್ಷಿ ತಳಿ ಬಿತ್ತಿದ ರೈತರ ಮಾಹಿತಿಯೂ ಇತರ ರೈತರಿಗೆ ಇರುವುದಿಲ್ಲ.  ಆ ಗ್ರಾಮಕ್ಕಷ್ಟೇ ಈ ತಳಿಯ ಬಗ್ಗೆ ಮಾಹಿತಿ ಇರುತ್ತದೆ. ಹಾಗಾಗಿ ಕರ್ನಾಟಕ ಸರ್ಕಾರವು ಈ ತಳಿಯನ್ನು ಪರಿಚಿಯಿಸಿದರೆ ಉತ್ತಮ ಎನ್ನುತ್ತಾರೆ ಪ್ರಗತಿಪರ ರೈತರು.

ಆಂಧ್ರಪ್ರದೇಶದ ನೆರೆಯ ಜಿಲ್ಲೆಯಿಂದ ಕರ್ನಾಟಕದ ರೈತರು ತಂದು ಈಗಾಗಲೇ ಬಿತ್ತಣಿಕೆ ಮಾಡುತ್ತಿದ್ದಾರೆ. ಹೆಚ್ಚು ಇಳುವರಿಯೂ ಪಡೆಯುತ್ತಿದ್ದಾರೆ. ಲೇಪಾಕ್ಷಿ ತಳಿಯನ್ನು ಬಿತ್ತಿದ ರೈತರು ಉತ್ತಮ ಲಾಭವಾಗುತ್ತಿದೆ ಎಂದು ಕಟಾವಿನ ನಂತರ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಭೂಮಿಯನ್ನು ಚೆಲ್ಲಾಗಿ ಹದ ಮಾಡಿ ಭೂಮಿಯಲ್ಲಿ ಈ ತಳಿಯನ್ನು ಬಿತ್ತರೆ ಹೆಚ್ಚು ಇಳುವರಿಯಾಗುವ ಸಾಧ್ಯತೆಯಿದೆ.  ಕೊಟ್ಟಿಗೆ ಗೊಬ್ಬರವರನ್ನು ಹಾಕುವುದರ ಮೂಲಕ ಉತ್ತಮ ಇಳುವರಿ ಪಡೆಯಬಹುದು. ಕೃಷಿ ತಜ್ಞರ ಸಲಹೆ ಪಡೆದು ಬಿತ್ತನೆ ಮಾಡಿದರೆ ಲಾಭ ಮಾಡಿಕೊಳ್ಳಬಹುದು.

ಮಧುಗಿರಿ ತಾಲೂಕಿನ ಮಿಡಿಗೇಶಿ ಹೋಬಳಿಯ ಚೀಲನಹಳ್ಳಿಯ ರೈತ ರಂಗನಾಥ ಯಾಧವ ಕದಿರಿ ಲೇಪಾಕ್ಷಿ ತಳಿ ಬಿತ್ತಿ ಉತ್ತಮ ಲಾಭ ಮಾಡಿಕೊಂಡಿದ್ದಾರೆ. ಹೆಚ್ಚಿನ ಮಾಹಿತಿ ಹಾಗೂ ಕದಿರಿ ಲೇಪಾಕ್ಷಿ ತಳಿಯ ಬೀಜಕ್ಕಾಗಿ 9900995386 ಗೆ ಕರೆ ಮಾಡಿ ಸಂಪರ್ಕಿಸಬಹುದು.

Leave a Comment