ವಿಶ್ವದ ಮಾನವಕುಲಕ್ಕೆ ಅನ್ನ ನೀಡುವ ರೈತರು ನೆಮ್ಮದಿ ಮತ್ತು ಗೌರವದಿಂದ ಬದುಕು ಸಾಗಿಸಿದಾಗ ಮಾತ್ರ ನಮ್ಮ ಜೀವನ ಸಾರ್ಥಕ ಎಂದು ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಭಿಪ್ರಾಯಪಟ್ಟರು.

ಅವರು ಸಹಕಾರ ಇಲಾಖೆ ಮತ್ತು ಕಲಬುರಗಿ-ಯಾದಗಿರಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿಯಮಿತದಿಂದ ಶನಿವಾರ ಕಲಬುರಗಿ ನಗರದ ಡಾ. ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಆಯೋಜಿಸಿದ್ದ “ರೈತರಿಗೆ ಬಡ್ಡಿ ರಹಿತ ಸಾಲ” ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಮಂಜೂರಾತಿ ಪತ್ರ ನೀಡಿ ಮಾತನಾಡಿದರು.

ಗ್ರಾಮೀಣ ಆರ್ಥಿಕತೆಯನ್ನು ಸದೃಢಗೊಳಿಸಲು ಸಹಕಾರಿ ಬ್ಯಾಂಕುಗಳು ಸಹಕಾರಿಯಾಗಿವೆ. ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯ ಒಟ್ಟು 1,437 ಗ್ರಾಮಗಳಲ್ಲಿ ಬರುವ 10,000 ರೈತರಿಗೆ ಕೃಷಿ ಪೂರಕ ಚಟುವಟಿಕೆಗಳು ಹಾಗೂ ಮುಂಗಾರು ಹಂಗಾಮಿಗಾಗಿ ಕಡಿಮೆ ಬಡ್ಡಿ ದರದಲ್ಲಿ 50 ಕೋಟಿ ರೂ.ಗಳ ಕೃಷಿ ಅಲ್ಪಾವಧಿ ಬೆಳೆ ಸಾಲವನ್ನು ರೈತರಿಗೆ ವಿತರಿಸುವ ಮೂಲಕ ರೈತರ ಕಾಯಕಕ್ಕೆ ಬೆಂಬಲ ನೀಡಲಾಗುತ್ತಿದೆ ಎಂದ ಅವರು ರಾಜಕುಮಾರ ಪಾಟೀಲ ತೇಲ್ಕೂರ ಅವರ ನೇತೃತ್ವದಲ್ಲಿ ಬ್ಯಾಂಕ್ ಉತ್ತಮ ಪ್ರಗತಿಯತ್ತ ಸಾಗುತ್ತಿದ್ದು, ಕೃಷಿ, ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತ್ತಿದೆ ಎಂದರು.

ಕಲಬುರಗಿ-ಯಾದಗಿರಿ ಉಭಯ ಜಿಲ್ಲೆಗಳ ರೈತರ ಹಾಗೂ ಗ್ರಾಹಕರ ಸೇವೆಗಾಗಿ ಹಲವು ಆರ್ಥಿಕ ಸೌಲಭ್ಯಗಳನ್ನು ನೀಡುವ ಮೂಲಕ ಆರ್ಥಿಕ ಸ್ವಾವಲಂಬನೆಗೆ ಒತ್ತು ನೀಡಲಾಗುತ್ತಿದೆ. ಕೋವಿಡ್-19ರ ಸಂಕಷ್ಟದ ಅವಧಿಯಲ್ಲಿ ಸಹಕಾರ ಸಂಘಗಳು ಇನ್ನೂ ಹೆಚ್ಚಿನ ಸೇವೆಗಳನ್ನು ತಮ್ಮ ಸÀದಸ್ಯರುಗಳಿಗೆ ನೀಡಲು ಮುಂದಾಗಿರುವುದಕ್ಕೆ ಸಿ.ಎಂ  ಮೆಚ್ಚುಗೆ ವ್ಯಕ್ತಪಡಿಸಿದರು.

ಡಿ.ಸಿ.ಸಿ. ಬ್ಯಾಂಕಿನಲ್ಲಿ ಸರ್ಕಾರದ ಸಹಭಾಗಿತ್ವವನ್ನು ಪ್ರೋತ್ಸಾಹಿಸಲು ಹಾಗೂ ಷೇರು ಬಂಡವಾಳ ಹೆಚ್ಚಿಸುವ ಉದ್ದೇಶದಿಂದ 21 ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕುಗಳಿಗೆ 10 ಲಕ್ಷ ರೂ.ಗಳ ಗರಿಷ್ಠ ಮಿತಿಗೊಳಪಟ್ಟು ಶೇ.25ರಷ್ಟು ಷೇರು ಬಂಡವಾಳ ನೀಡಲು 2021-22ರ ಆಯವ್ಯಯದಲ್ಲಿ ಘೋಷಿಸಲಾಗಿದೆ. ರಾಜ್ಯದಲ್ಲಿ 5,500 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಅವುಗಳನ್ನು 198 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಗಣಕೀಕರಣಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಕಳೆದ ವರ್ಷದಲ್ಲಿ ಸಹಕಾರ ಸಂಘಗಳು ಕೃಷಿ ಕ್ಷೇತ್ರದಲ್ಲಿ 25.67 ಲಕ್ಷ ರೈತರಿಗೆ 16,641 ಕೋಟಿ ರೂ.ಗಳ ಅಲ್ಪಾವಧಿ ಕೃಷಿ ಸಾಲ, 52 ಲಕ್ಷ ರೈತÀರಿಗೆ 1,260.21 ಕೋಟಿ ರೂ.ಗಳ ಮಧ್ಯಮಾವಧಿ, ದೀರ್ಘಾವಧಿ ಸಾಲ ವಿತರಣೆ ಮಾಡಿದ್ದು, ಗುರಿಗೆ ಎದುರಾಗಿ ಶೇ.114ರಷ್ಟು ಸಾಧನೆ ಮಾಡಲಾಗಿದೆ. ಇದರಲ್ಲಿ 57 ಲಕ್ಷ ರೈತರಿಗೆ 105.64 ಕೋಟಿ ರೂ.ಗಳ ಸಾಲವನ್ನು ಹೈನುಗಾರಿಕೆ ಚಟುವಟಿಕೆಗೆ ನೀಡಿದೆ ಎಂದು ವಿವರಿಸಿದರು.

ಪ್ರಸಕ್ತ ಸಾಲಿನಲ್ಲಿ ಕೋವಿಡ್ ಸಂಕಷ್ಟದಲ್ಲಿರುವ ರೈತರಿಗೆ ಹೆಚ್ಚಿನ ಸಾಲ-ಸೌಲಭ್ಯ ನೀಡುವ ಉದ್ದೇಶವನ್ನು ಹೊಂದಿದ್ದು, 30.26 ಲಕ್ಷ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ರೂ. 19,370 ಕೋಟಿ ಅಲ್ಪಾವಧಿ ಬೆಳೆ ಸಾಲ ಮತ್ತು 60 ಲಕ್ಷ ರೈತರಿಗೆ ಶೇ.3ರ ಬಡ್ಡಿ ದರದಲ್ಲಿ 1,440 ಕೋಟಿ ಮಧ್ಯಮಾವಧಿ, ದೀರ್ಘಾವಧಿ ಸಾಲ ವಿತರಣೆ ಮಾಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಇತ್ತೀಚಿಗೆ ಮಳೆಯಿಂದ ರಾಜ್ಯದಲ್ಲಿ ಜಲಾಶಯಗಳು, ಕೆರೆ-ಕಟ್ಟೆಗಳು ತುಂಬಿವೆ. ನಿರೀಕ್ಷೆಗೂ ಮೀರಿ ಮಳೆಯಾಗುತ್ತಿದ್ದು, ಈ ಬಾರಿ ಕಳೆದ ವರ್ಷಕ್ಕಿಂತ ಉತ್ತಮ ಬೆಳೆ ಬರುವ ನಿರೀಕ್ಷೆಯಿದೆ ಎಂದ ಸಿ.ಎಂ, ಜನಸಾಮಾನ್ಯರ ಸಹಾಯಕ್ಕಾಗಿ ಮತ್ತು ಅವರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸುವ ಉನ್ನತ ಉದ್ದೇಶದಿಂದ ಸಹಕಾರ ಬ್ಯಾಂಕ್‌ಗಳು ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು.

Leave a Reply

Your email address will not be published. Required fields are marked *