ಬಿಸಿಲಿನಿಂದಾಗಿ ತಾಪಮಾನದಲ್ಲಿ ತೀವ್ರ ಹೆಚ್ಚಳವಾಗಿರುವ ಕಾರಣದಿಂದ ಕಲಬುರಗಿ ಮತ್ತು ಬೆಳಗಾವಿ ವಿಭಾಗದ ಒಂಬತ್ತು ಜಿಲ್ಲೆಗಳ ವ್ಯಾಪ್ತಿಯಲ್ಲಿ ಮೇ  ಅಂತ್ಯದವರೆಗೂ (government office timing changed) ಸರ್ಕಾರಿ ಕಚೇರಿಗಳ ಕೆಲಸದ ಅವಧಿಯನ್ನು ಬದಲಾವಣೆ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಭಾನುವಾರ ಆದೇಶ ಹೊರಡಿಸಿದೆ.

ಕರ್ನಾಟಕದಲ್ಲಿ ಬಿಸಿಲಿನ ತಾಪಕ್ಕೆ ಜನರು ಮನೆಗಳಿಂದ ಹೊರ ಬಾರದಂಥ ಸ್ಥಿತಿ ನಿರ್ಮಾಣವಾಗಿದೆ. ರಣ ಬಿಸಿಲು ಹೆಚ್ಚಾಗುತ್ತಿರುವ ಹಿನ್ನೆಲೆ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಸರ್ಕಾರಿ ನೌಕರರ ಕೆಲಸದ ಸಮಯವನ್ನು ಬದಲಾಯಿಸಲಾಗಿದೆ. ಏಪ್ರಿಲ್ 12ರಿಂದ ಹೊಸ ವೇಳಾಪಟ್ಟಿಯಂತೆ ಸರ್ಕಾರಿ ಕಚೇರಿಗಳು ಕಾರ್ಯಾರಂಭ ಮಾಡಲಿವೆ. ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 1.30ರವರೆಗೂ ಸರ್ಕಾರಿ ಕಚೇರಿಗಳನ್ನು ತೆರೆಯುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ

ಕಲಬುರಗಿ ವಿಭಾಗದ ಎಲ್ಲ ಏಳು ಜಿಲ್ಲೆಗಳು ಹಾಗೂ ಬೆಳಗಾವಿ ವಿಭಾಗದ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿಗಳ ಕೆಲಸದ ಸಮಯವನ್ನು ಬೆಳಗ್ಗೆ 8 ರಿಂದ ಮಧ್ಯಾಹ್ನ 1.30 ರವರೆಗೆ ಬದಲಾವಣೆ ಮಾಡಲಾಗಿದೆ.

ಬಿಸಿಲಿನ ತಾಪಮಾನ ಹೆಚ್ಚಾಗುತ್ತಿರುವ ಹಿನ್ನೆಲೆ ಕೆಲಸ ಅವಧಿಯನ್ನು ಬದಲಾಯಿಸುವಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಮನವಿ ಮಾಡಿತ್ತು. ಈ ಮನವಿಯನ್ನು ಪುರಸ್ಕರಿಸಿದ ಸರ್ಕಾರ ವಿಜಯಪುರ, ಬೆಳಗಾವಿ, ಬಾಗಲಕೋಟೆ, ಕಲಬುರಗಿ ವಿಭಾಗಳಲ್ಲಿ ಸರ್ಕಾರಿ ಕಚೇರಿಗಳ ಕೆಲಸದ ಸಮಯವನ್ನು ತಾತ್ಕಾಲಿಕವಾಗಿ ಬದಲಾಯಿಸಿದೆ.

ಉತ್ತರ ಕರ್ನಾಟಕದಲ್ಲಿ ಗುರುತಿಸಿದ ಕೆಲವು ಜಿಲ್ಲೆಗಳಲ್ಲಿ ಮಾತ್ರ ಸರ್ಕಾರಿ ಕಚೇರಿಗಳ ಕೆಲಸದ ಸಮಯವನ್ನು ಬದಲಾಯಿಸಲಾಗಿದೆ. ಉಳಿದ ಜಿಲ್ಲೆಗಳಲ್ಲಿ ಬೆಳಗ್ಗೆ 10 ರಿಂದ ಸಂಜೆ 5.30ರವರೆಗೆ ಕಾರ್ಯ ನಿರ್ವಹಿಸಲಿವೆ. ನಿಗದಿತ ಜಿಲ್ಲೆಗಳಲ್ಲಿ ಬೆಳಗ್ಗೆ 8 ರಿಂದ ಮಧ್ಯಾಹ್ನ 1.30ರವರೆಗೂ ತೆರೆದಿರುತ್ತವೆ. ಈ ಅವಧಿಯಲ್ಲೇ ಸಾರ್ವಜನಿಕರಿಗೆ ಯಾವುದೇ ರೀತಿ ತೊಂದರೆ ಆಗದಂತೆ ಕಾರ್ಯ ನಿರ್ವಹಿಸಲು ಸರ್ಕಾರಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೋವಿಡ್ 19 ಸೇರಿದಂತೆ ವಿಶೇಷ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸಲು ಸೂಚಿಸಿದಾಗ ಸಮಯ ಬದಲಾವಣೆ ಆದೇಶ ಅನ್ವಯವಾಗುವುದಿಲ್ಲ ಎಂದು ಇಲಾಖೆ ತಿಳಿಸಿದೆ

Leave a Reply

Your email address will not be published. Required fields are marked *