ಕೃಷಿ ಕಾರ್ಮಿಕರ ಕೊರತೆಯಿಂದಾಗಿ ಕೃಷಿಯಿಂದ ವಿಮುಖರಾಗುತ್ತಿರುವ ಇಂದಿನ ಕಾಲಮಾನದಲ್ಲಿ ಇಲ್ಲೊಬ್ಬ ರೈತ ಕೃಷಿ ಚಟುವಟಿಕೆಗೆ ಏಕವ್ಯಕ್ತಿ ಬಳಸುವ ಸಾಧನವನ್ನು ( Agriculture Krishi Bheema machine) ಸಿದ್ಧಪಡಿಸಿದ್ದಾರೆ.

ಹೌದು, ಗದಗ ಜಿಲ್ಲೆಯ ಲಕ್ಷ್ಮೇಶ್ವರದ ಚನ್ನಪ್ಪ ವೀರಭದ್ರಪ್ಪ ಕೋಲಕಾರರವರು ಕೃಷಿ ಕಾರ್ಮಿಕರಿಲ್ಲದೆ ಪರದಾಡುವ ರೈತರಿಗಾಗಿ ಪೆಟ್ರೋಲ್, ಡಿಸೇಲ್ ಇಲ್ಲದೆ ಕೃಷಿ ಕೆಲಸಗಳಿಗೆ ಅನುಕೂಲ ಆಗುವ ಹೊಸ ಯಂತ್ರವೊಂದನ್ನು ಸಂಶೋಧಿಸಿ ಬೆರಗು ಮೂಡಿಸಿದ್ದಾರೆ.

ರೈತ ಚನ್ನಪ್ಪರವರು ಸ್ಥಳೀಯವಾಗಿ ಸಿಗುವ. ಕಬ್ಬಿಣ ಸಲಾಕೆ, ಸರಳು, ಚಕ್ರಗಳು, ಸರಪಳಿ, ಮೋಟಾರು ಚೈನ್, ಕಟ್ಟಿಗೆ ಇತ್ಯಾದಿಗಳನ್ನು ಬಳಸಿ ಈ ಸಾಧನೆಯನ್ನು ತಯಾರಿಸಿದ್ದಾರೆ. ಈ ಉಪಕರಣವನ್ನು ರೈತರು ಸರಳವಾಗಿ ಹೊಲದಲ್ಲಿ ಉಪಯೋಗಿಸಬಹುದು. ಯಂತ್ರಕ್ಕೆ ಪೆಟ್ರೋಲ್, ಡಿಸೇಲ್‌ನ ಅವಶ್ಯಕತೆ ಇಲ್ಲ. ಶಬ್ದರಹಿತ, ಹೊಗೆರಹಿತ ಉಪಕರಣ ಇದಾಗಿದೆ. ಕೇವಲ ಚೈನು ಎಳೆಯುತ್ತಾ ಚಾಲನೆ ಮಾಡಬಹುದು.

ಈ ಉಪಕರಣದ ಸಹಾಯದಿಂದ ರೈತರು ರಂಟೆ, ಕುಂಟೆ ಹೊಡೆಯುವುದು, ಬಿತ್ತನೆ ಕಾರ್ಯವನ್ನೂ ಮಾಡುವುದು, ಕೂಲಿಕಾರರಿಲ್ಲದೆ ಎಡೆ ಹೊಡೆಯುವ ಕೆಲಸವನ್ನು ಸುಲಭವಾಗಿ ಮಾಡಬಹುದು. ಸೈಕಲ್ ತುಳಿಯುವಂತೆ ಪೆಡಲ್‍ಗಳನ್ನು ತುಳಿದಾಗ ಉಪಕರಣ ಕಾರ್ಯ ನಿರ್ವಹಿಸುತ್ತದೆ. ಯಾವುದೇ ರೈತ ಸುಲಭವಾಗಿ ಈ ಉಪಕರಣವನ್ನು ಹೊಲದಲ್ಲಿ ಉಪಯೋಗಿಸುವಂತೆ ತಯಾರಿಸಿದ್ದಾರೆ.

ಮುಂದಿನ ಏಕಚಕ್ರ ಸರಳವಾಗಿ ಹೊರಳುವಂತೆ ಪ್ಯಾಡಲ್ ಕೂಡ ಅಳವಡಿಸಿದ್ದಾರೆ. ಅಲ್ಲದೆ ರೈತರು ಆರಾಮಾವಾಗಿ ಕುರ್ಚಿಯ ಮೇಲೆ ಕುಳಿತು ಚಾಲನೆ ಮಾಡಬಹುದು. ರೈತರಿಗೆ ಆಳುಗಳು ಸಿಗದೆ ಇದ್ದಾಗ ಅವರಿಗೆ ಈ ಉಪಕರಣ ಸಹಾಯಕ್ಕೆ ಬರುತ್ತದೆ.

‘ಈಚಿನ ದಿನಗಳಲ್ಲಿ ರೈತರು ಅನೇಕ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಕೂಲಿಕಾರರ ಸಮಸ್ಯೆ, ಯಂತ್ರಗಳ ದುಬಾರಿ ವೆಚ್ಚಭರಿಸಲು ರೈತರಿಂದ ಸಾಧ್ಯ ಆಗುತ್ತಿಲ್ಲ. ಕಾರಣ ಅತಿ ಕಡಿಮೆ ಖರ್ಚಿನಲ್ಲಿ ಈ ಯಂತ್ರವನ್ನು ಸಿದ್ಧಪಡಿಸಬೇಕೆನ್ನುವ ಉದ್ದೇಶ ಇದೆ. ಸರ್ಕಾರ ರೈತರಿಗೆ ಕಡಿಮೆ ಹಣದಲ್ಲಿ ಯಂತ್ರ ಸಿದ್ದಪಡಿಸಿ ಅನೂಕೂಲ ಮಾಡಿಕೊಟ್ಟರೆ ರೈತರ ಸಮಸ್ಯೆ ಅಲ್ಪಮಟ್ಟಿಗಾದರೂ ಪರಿಹಾರವಾಗುತ್ತದೆ’ ಎಂದು ಚನ್ನಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *