ನಮ್ಮ ಆರೋಗ್ಯ ಕೆಟ್ಟರೆ ನಾವು ವೈದ್ಯರ ಬಳಿ ಹೋಗಿ ತಪಾಸಣೆ ಮಾಡಿಸಕೊಂಡು ವೈದ್ಯರ ಸಲಹೆ ಮೇರೆಗೆ ಔಷಧ ತೆಗೆದುಕೊಳ್ಳುತ್ತೇವೆ. ಆದರೆ ಜಮೀನಿನ ಆರೋಗ್ಯ ತಪಾಸಣೆ ಮಾಡಿಸುವುದು ಹೇಗೆ….?  ಜಮನಿನ ಆರೋಗ್ಯ ಸರಿಯಾಗಿದೆಯೋ ಇಲ್ಲವೋ ಎಂಬುದನ್ನು ತಪಾಸಣೆ ಮಾಡಲು ರೈತರು ಎಲ್ಲಿಯೂ ಹೋಗಬೇಕಿಲ್ಲ. ತಾವೇ ಅತೀ ಸುಲಭವಾಗಿ ಗುರುತಿಸಬಹುದು. ಅದು ಹೇಗೆ ಅಂದುಕೊಂಡಿದ್ದೀರಾ… ಇಲ್ಲಿದೆ ಅತ್ಯಂತ ಸರಳೋಪಾಯ.

ಮಣ್ಣಿನಲ್ಲಿ  ಮುಖ್ಯವಾಗಿ ಮೂರು ಗುಣಗಳಿರುತ್ತವೆ ಎಂಬುದನ್ನು ರೈತರು ಮೊದಲು ತಿಳಿದುಕೊಳ್ಳಬೇಕು.  ಈ ಮೂರು ಗುಣಗಳಿಂದ ನಾವು ಮಣ್ಣಿನ ಆರೋಗ್ಯ ತಪಾಸಣೆ ಮಾಡಬಹುದು. ಮಣ್ಣಿನ ಮುಖ್ಯ ಮೂರು ಗುಣಗಳು ಯಾವುವೆಂದರೆ 1. ಮಣ್ಣಿನ ಭೌತಿಕ ಗುಣ 2 ಮಣ್ಣಿನ ಜೈವಿಕ ಗುಣ 3 ಮಣ್ಣಿನ ರಾಸಾಯನಿಕ ಗುಣ.

ಮೇಲೆ ತಿಳಿಸಿದ ಮೂರು ಗುಣಗಳ ಬಗ್ಗೆ ರೈತರಿಗೆ ಅರಿವಿದ್ದರೆ ಕೃಷಿಯಲ್ಲಿ ಫೇಲ್ ಆಗುವುದೇ ಇಲ್ಲ ಎಂಬುದನ್ನು ಹಲವಾರು ಕೃಷಿ ತಜ್ಞರು ಹಾಗೂ ಪ್ರಗತಿಪರ ರೈತರು ಆಗಾಗ ಸಲಹೆ ನೀಡುತ್ತಲೇ ಇರುತ್ತಾರೆ. ಆದರೆ ಇಂದು ಆಧುನಿಕ ತಂತ್ರಜ್ಞಾನಕ್ಕೆ ಮೊರೆ ಹೋಗಿ ಮಣ್ಣಿನ ಆರೋಗ್ಯದ ಕಡೆ ಗಮನಹರಿಸದೆ ಭೂತಾಯಿಯ ಫಲವತ್ತತೆಯನ್ನು ಹಾಳು ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ ಮಣ್ಣಿನ ಈ ಮೂರು ಗುಣಗಳಿಂದ ಆರೋಗ್ಯ ಹೇಗೆ ತಪಾಸಣೆ ಮಾಡಬೇಕು ಎಂಬುದನ್ನು ಇಲ್ಲಿ ಒಂದೊಂದಾಗಿ ವಿವರಿಸಲಾಗಿದೆ.

ಮಣ್ಣಿನ ಭೌತಿಕ ಗುಣ ಗುರುತಿಸುವುದು ಹೇಗೆ ?

ಮಣ್ಣಿನ ಭೌತಿಕ ಗುಣ ಗುರುತಿಸುವ ಮೊದಲ ವಿಧಾನ ಯಾವುದೆಂದರೆ… ನಿಮ್ಮ ಜಮೀನು ಅಥವಾ ತೋಟದಲ್ಲಿ ಬರಿಗಾಲಲ್ಲಿ ನಡೆದಾಡಿದರೆ ಕಾಲಿಗೆ ಮಣ್ಣು ಚುಚ್ಚಬಾರದು. ಚುಚ್ಚಿದರೆ ಬರಡು ಭೂಮಿ ಎಂದೇ ಅರ್ಥ. ಫಲವತ್ತತೆಯಿಲ್ಲ ಎಂದು ಹೇಳಬಹುದು. ಜಮೀನ ಸ್ಪಂಜ್ ತರಹ ಅನುಭವವಾಗಬೇಕು.ಸ್ಪಂಜ್ ತರಹ ಮೆತ್ತಗಿರಬೇಕು.

ಎರಡನೇ ವಿಧಾನವೆಂದರೆ… ಜಮೀನಿನ ಅಥವಾ ತೋಟದಲ್ಲಿ ಮಣ್ಣು ಕೈಯಿಂದ ತೆಗೆಯುಂತಾಗಬೇಕು. ಮಣ್ಣು ಚಹಾ ಪುಡಿಯಂತಿರಬೇಕು  ಮಣ್ಣು ಮೃದುವಾಗಿರಬೇಕು. ಹಾಗೂ ಮೆದುವಾಗಿರಬೇಕು. ಭೂಮಿ ತುಂಬಾ ಗಟ್ಟಿಯಿದ್ದರೆ ಅದು ಫಲವತ್ತತೆಯಿಲ್ಲ ಎಂದೇ ಅರ್ಥ.ಇದನ್ನು ರೈತರು ಗುರುತಿಸುವಂತಾಗಬೇಕು.

ಇದನ್ನೂ ಓದಿ : ಪಿಎಂ ಕಿಸಾನ್ ಯೋಜನೆಯ 10ನೇ ಕಂತಿನ ಲಿಸ್ಟ್ ನಲ್ಲಿ ನಿಮ್ಮ ಹೆಸರು ಮೊಬೈಲ್ ನಲ್ಲಿಯೇ ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಮೂರನೇ ವಿಧಾನ…. ಮಣ್ಣಿನಲ್ಲಿ  ಬೇರುಗಳ ಅಭಿವೃದ್ಧಿ ಯಥೇಚ್ಚವಾಗಿರಬೇಕು. ಮರಗಿಡಗಳ ಅಭಿವೃದ್ಧಿ ಬೇರುಗಳ ಮೇಲೆ ಗುರುತಿಸಬಹುದು. ಬೇರು ಯಥೇಚ್ಚವಾಗಿದ್ದರೆ ಮಣ್ಣು ಫಲವತ್ತತೆಯಿಂದ ಕೂಡಿದೆ ಎಂದು ಹೇಳಬಹುದು.

ಮಣ್ಣಿನ ಜೈವಿಕ ಗುಣ ಗುರುತಿಸುವುದು ಹೇಗೆ ?

ಯಾವುದಾದರೂ ನೀರಿನಿಲ್ಲಿ ಪ್ರಾಣಿಗಳು ಇಲ್ಲವೆಂದರೆ ನೀರಿನ ಸಮಸ್ಯೆ ಇದೆ ಎಂದರ್ಥ. ನೀರಲ್ಲಿ ನೀರು ಜೀವಿಗಳು ಇದ್ದಂತೆ ಮಣ್ಣಿನಲ್ಲಿಯೂ ಮಣ್ಣುಜೀವಿಗಳು ಇರಬೇಕು. ಮಣ್ಣಿನಲ್ಲಿ ಸಾವಿರಾರು ಸೂಕ್ಷ್ಮಾಣು ಜೀವಿಗಳಿರುತ್ತವೆ. ಅವು ಕಣ್ಣಿಗೆ ಕಾಣುವುದಿಲ್ಲ. ನಮ್ಮ ಕಣ್ಣಿಗೆ ಕಾಣುವ ಮುಖ್ಯ ಜೀವಿ ಎಂದರೆ ಎರೆಹುಳು, ಭೂಮಿಯಲ್ಲಿ ಎರೆಹುಳು ಇರಲೇಬೇಕು. ಎಱೆಹುಳ 24 ಗಂಟೆಗಳ ಕಾಲ ಕೆಲಸ ಮಾಡುವ ಜೀವಿ. ಎರಡು ಅಡಿಯಿಂದ 10 ಅಡಿಯವರೆಗೆ ಆಳಕ್ಕೆ ಹೋಗಿ  ಮೇಲ್ಗಡೆ ಬಂದು ಹಿಕ್ಕಿ ಹಾಕುತ್ತದೆ. ನಿಮ್ಮ ಜಮೀನಿನಲ್ಲಿ ಎರೆಹುಳು ಕಾಣಲಿಲ್ಲವೆಂದರೆ ಜಮೀನು ಫಲವತ್ತತೆಯಿಲ್ಲವೆಂದರ್ಥ. ಅದು ನಿರ್ಜೀವ ಭೂಮಿಯಿದ್ದಂತೆ. ಜಮೀನಿನ ಮಣ್ಣು ತೆಗೆಯುವಾಗಿ ಕೈಯಲ್ಲಿ ಎರೆಹುಳಗಳು ಬಂದರೆ ಜಮೀನು ಫಳವತ್ತತೆಯಿಂದ ಕೂಡಿರುತ್ತದೆ.

ಎರೆಹುಳುವಿನ ಮಹತ್ವ

ಎರೆಹುಳು ನಿರಂತರವಾಗಿ ರೈತರ ಜಮೀನಿನಲ್ಲಿ ಕೆಲಸ ಮಾಡುವ ಜೀವಿಯಾಗಿದ್ದರಿಂದ ಅದನ್ನು ರೈತನ ಮಿತ್ರವೆಂದು ಕರೆಯಲಾಗುತ್ತದೆ.. ಈ ಜೀವಿ ದಿನದ 24 ಗಂಟೆಯಲ್ಲಿ ತನ್ನ ತೂಕದ ಐದರಷ್ಟು ಹಿಕ್ಕಿ ಹಾಕುತ್ತದೆ. ಉದಾಹರಣೆ ಒಂದು ಎಕರೆ ಜಮೀನಿನಲ್ಲಿ ಒಂದು ಕೆಜಿ ಎರೆಹುಳ ಬಿಟ್ಟರೆ ಒಂದು ದಿನದಲ್ಲಿ ಐದುಕೆಜಿ, ಒಂದು ತಿಂಗಳಲ್ಲಿ 150 ಕೆಜಿ  ಹಾಗೂ  12 ತಿಂಗಳಿಗೆ ಅಂದರೆ 365 ದಿನದಲ್ಲಿ  1800 ಕೆಜಿ ಗೊಬ್ಬರವನ್ನು ಉತ್ಪಾದಿಸುತ್ತದೆ. ಇದಕ್ಕಿಂತ ದೊಡ್ಡ ಗೊಬ್ಬರ ಕಾರ್ಖಾನೆ ಮತ್ತೊಂದುಯಿದೆಯೇ…. ಇಂದು ಈ ಕಾರ್ಖಾನೆ ಜೀವಂತವಾಗಿಲ್ಲ. ಅದಕ್ಕಾಗಿಯೇ ಇಳುವರಿ ಕಡಿಮೆಯಾಗುತ್ತಿದೆ. ಇಂದು ಜಮೀನಿನಲ್ಲಿ ಎರೆಹುಳು ಕಾಣದಂತಾಗಿದೆ. ರೈತರು ತಮ್ಮ ಮಿತ್ರನನ್ನು ಕಳೆದುಕೊಂಡಿದ್ದರಿಂದಲೇ ಕೃಷಿಯಲ್ಲಿ ಹಾನಿಯಾಗುತ್ತಿದೆ.

ಮಣ್ಣಿನ ರಾಸಾಯನಿಕ ಗುಣ ಗುರುತಿಸುವುದು ಹೇಗೆ?

ಜಮೀನಿಗೆ ಎಲ್ಲಾ ರೀತಿಯ ಪೋಷಕಾಂಶಗಳು ಬೇಕು. ಎನ್.ಪಿ.ಕೆ. ಬೇಕೇ ಬೇಕು. ನಿಮ್ಮ ತೋಟದಲ್ಲಿ ನೈಸರ್ಗಿಕವಾಗಿ ಎನ್.ಪಿ.ಕೆ ಇರಬೇಕು. ಇದನ್ನು ಹೊರಗಿನಿಂದ ಖರೀದಿ ಮಾಡುವ ಅವಶ್ಯಕತೆಯಿಲ್ಲ. ಭೌತಿಕ ಗುಣವಿದ್ದರೆ ರಾಸಾಯನಿಕ ಗುಣ ಇದ್ದೇ ಇರುತ್ತದೆ. ಮಣ್ಣಿನಲ್ಲಿ ತ್ಯಾಜ್ಯ ಕಲಿತು ಇದ್ದಿಲು ತರ ಕಪ್ಪಗಾಗಿರಬೇಕು. ಆಗ ನಿಮ್ಮ ಜಮೀನಿನಲ್ಲಿ ಎನ್.ಪಿಕೆ ಇದೆ ಎಂದರ್ಥ.

ರೈತರು ತಮ್ಮ ಜಮೀನಿಗೆ ತಾವೇ ಡಾಕ್ಟರ್ ಆಗಿ ಕೆಲಸ ಮಾಡಬಹುದು. ಮುಖ್ಯವಾಗಿ ಜಮೀನು ಫಲವತ್ತಾಗಿಡಲು ರೈತ ಮೊದಲು ಜಮೀನಿನಲ್ಲಿ ಎರೆಹುಳಗಳನ್ನು ಸೇರಿಸಬೇಕು. ಆಗ ಭೂಮಿಯ ಫಲವತ್ತತೆ ಹೆಚ್ಚಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.

Leave a Reply

Your email address will not be published. Required fields are marked *