ಚೀನಾ ದೇಶವು ಅನೇಕ ದೇಶಗಳಿಗೆ ನಿಗೂಡ/ರಹಸ್ಯಮಯವಾಗಿ ಬೀತ್ತನೆ ಬೀಜಗಳು ರಫ್ತು ಮಾಡುತ್ತಿದ್ದು, ರೈತರು ಇಂತಹ ಬಿತ್ತನೆ ಬೀಜದ ಪೊಟ್ಟಣಗಳು ತಮ್ಮ ಮನೆ ಬಾಗಿಲಿಗೆ ಬಂದಲ್ಲಿ ಅದನ್ನು ಸ್ವೀಕರಿಸದೇ ವಾಪಸ್ಸು (Don’t receive fake seeds) ಕಳುಹಿಸಬೇಕು. ಒಂದು ವೇಳೆ ರೈತರು ಬಿತ್ತನೆ ಬೀಜವನ್ನು ಸ್ವೀಕರಿಸಿದ್ದಲ್ಲಿ ಅದನ್ನು ಪೊಟ್ಟಣ ಸಮೇತ ಸುಟ್ಟು ಹಾಕಬೇಕು ಇಲ್ಲವೇ ತಮ್ಮ ಸಮೀಪದ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಅಥವಾ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕೆಂದು ಕಲಬುರಗಿ ಜಂಟಿ ಕೃಷಿ ನಿರ್ದೇಶಕ ರಿತೇಂದ್ರನಾಥ ಸೂಗೂರ ಅವರು ರೈತರಲ್ಲಿ ಮನವಿ ಮಾಡಿದ್ದಾರೆ.

ಇಂತಹ ಅನಾಮಧೇಯ ಬಿತ್ತನೆ ಬೀಜದ ಪೊಟ್ಟಣಗಳು ರೈತರ ಮನೆ ಬಾಗಿಲಿಗೆ ಬಂದಾಗ ರೈತರು ಅದನ್ನು ಸ್ವೀಕರಿಸಿ ಬೀಜಗಳನ್ನು ಬಿತ್ತನೆ ಮಾಡಿದ್ದಲ್ಲಿ ಕೃಷಿ ಭೂಮಿಯು ಸಂಪೂರ್ಣ ನಾಶವಾಗುವ ಸಾಧ್ಯತೆಯಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಬೀಜಗಳ ಬಳಕೆಯಿಂದ ಕೃಷಿ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿ ಕ್ರಮೇಣ ಭೂಮಿಯು  ಬಂಜರಾಗುವ ಸಾಧ್ಯತೆ ಇದೆ. ಆದ್ದರಿಂದ ಇಂತಹ ಬಿತ್ತನೆ ಬೀಜದ ಪೊಟ್ಟಣಗಳು ರೈತರು ಸ್ವೀಕರಿಸದೇ ವಾಪಸ್ಸು ಕಳುಹಿಸಬೇಕು. ವಿವಿಧ ತಳಿಗಳ ಬಿತ್ತನೆ ಬೀಜದ ಈ ಪೊಟ್ಟಣಗಳನ್ನು ಯಾರು ಕಳುಹಿಸುತ್ತಾರೆ, ಇವು ಎಲ್ಲಿಂದ ಬರುತ್ತವೆ ಎಂಬ ವಿವರಗಳು ಇರುವುದಿಲ್ಲ. ಅದು ತೀವ್ರ ಆಚ್ಚರಿಗೂ ಕಾರಣವಾಗಿದೆ.

ಈಗಾಗಲೇ ಇಂಗ್ಲೇಡ್, ಕೆನಡಾದಲ್ಲಿ ಅನೇಕ ರೈತರಿಗೆ ಇಂತಹ ಬೀಜಗಳು ಸರಬರಾಜು ಆಗಿರುತ್ತವೆ  ಹಾಗೂ ಅಮೇರಿಕಾದ 28 ರಾಜ್ಯಗಳಲ್ಲಿ 14 ಜಾತಿಯ ಹೂವಿನ ತಳಿಗಳು ಪತ್ತೆ ಮಾಡಲಾಗಿದೆ. ಈ ಬೀಜಗಳು ಕೀಟಗಳು  ಮತ್ತು ರೋಗಾಣುಗಳಿಂದ ಕೂಡಿದ್ದು, ರೈತರು ಅವುಗಳು ಬಿತ್ತನೆ ಮಾಡಿದರೆ ಬೆಳೆಯು ಬೆಳೆದ ಒಂದು ತಿಂಗಳಲ್ಲಿ ಕೀಟ ಮತ್ತು ರೋಗದ ಬಾಧೆಯಿಂದ ಸಂಪೂರ್ಣ ಬೆಳೆ ನಾಶವಾಗುತ್ತದೆ.

ಆದ್ದರಿಂದ ರೈತರು ಪ್ರಮಾಣಿಕೃತ ಹಾಗೂ ನಂಬಿಕೆಯ ಬೀಜ ಮಾರಾಟಗಾರರಿಂದ ಮಾತ್ರ ಬಿತ್ತನೆ ಬೀಜ ಖರೀದಿ ಮಾಡಿ ಅದರ ರಸೀದಿ ಪಡೆದು ಬೀಜಗಳನ್ನು ಬಿತ್ತನೆ ಮಾಡಬೇಕೆಂದು ಜಂಟಿ ಕೃಷಿ ನಿರ್ದೇಶಕರು ರೈತರಲ್ಲಿ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *