ಪೌತಿ ಖಾತೆ, ಪೋಡಿ, ಪಹಣಿ, ಟಿಪ್ಪಣಿ, ಆಕಾರಬಂದ್ ಹದ್ದುಬಸ್ತು, ಖರಾಬು ಜಮೀನು, ವಂಶಾವಳಿ ಎಂದರೇನು? ಇಲ್ಲಿದೆ ಮಾಹಿತಿ

Written by Ramlinganna

Published on:

ರೈತರಿಗೆ ತಮ್ಮ ಜಮೀನಿನ ಪಹಣಿ ಬಗ್ಗೆ ಗೊತ್ತಿರುತ್ತದೆ. ಆದರೆ, ಪೌತಿ ಖಾತೆ, ಪೋಡಿ, ಟಿಪ್ಪಣಿ, ಆಕಾರಬಂದ, ಹದ್ದುಬಸ್ತು, ಖರಾಬು ಜಮೀನು ಸೇರಿದಂತೆ ಇನ್ನಿತರ ಇನ್ನಿತರ ಮಾಹಿತಿ ಗೊತ್ತಿರುವುದಿಲ್ಲ. ಹಾಗಾಗಿ ರೈತರಿಗೆ ಗೊತ್ತಿರಲೆಂದು ಸಂಕ್ಷೀಪ್ತವಾಗಿ ಮಾಹಿತಿ ಸಂಗ್ರಹಿಸಿ ಇಲ್ಲಿ ನೀಡಲಾಗಿದೆ.

ಪೌತಿ ಖಾತೆ ಎಂದರೇನು?

ಪಿತ್ರಾರ್ಜಿತ ಆಸ್ತಿಯ ಹಕ್ಕನ್ನು ರೈತರ ಹೆಸರಿಗೆ ವರ್ಗಾವಣೆ ಮಾಡುವ ಪ್ರಕ್ರಿಯೆಯನ್ನು ಪೌತಿ ಖಾತೆ ಎನ್ನುವರು. ಪಿತ್ರಾರ್ಜಿತ ಆಸ್ತಿಹಕ್ಕು ತಮ್ಮ ಕುಟುಂಬಕ್ಕೆ ಅಂದರೆ, ಪತ್ನಿ, ಮಕ್ಕಳಿಗೆ ವರ್ಗಾವಣೆಯಾಗಬೇಕು. ನಿಯಮದ ಪ್ರಕಾರದ ಯಾವುದೇ ವ್ಯಕ್ತಿ ಸಾವನ್ನಪ್ಪಿದಾಗ 28 ದಿನಗಳ ಒಳಗೆ ಸಂಬಂಧಪಟ್ಟ ಗ್ರಾಮ ಲೆಕ್ಕಿಗರೇ ಮರಣ ಪ್ರಮಾಣ  ಪತ್ರ ನೀಡಬೇಕು. ಒಂದು ವರ್ಷದ ಒಳಗಿದ್ದರೆ ತಪಶೀಲ್ದಾರ ನೀಡಬೇಕು. ಒಂದು ವರ್ಷದ ಮೇಲ್ಪಟ್ಟ ಪ್ರಕರಣಗಳಿಗಾಗಿ ಜೆಎಂಎಫ್ ನ್ಯಾಯಾಲಯದ ಮೂಲಕ ಮರಣ ಪ್ರಮಾಣ ಪತ್ರ ಪಡೆದು ಪೌತಿ ಖಾತೆಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.

ಪೋಡಿ ಎಂದರೇನು?

ಸಂಬಂಧಿಗಳ ಆಸ್ತಿ ವಿಭಾಗ ಮಾಡಿಕೊಳ್ಳಲು ಜಮೀನು ನಕಾಶೆ ಹಾಗೂ ಚಕ್ಕುಬಂದಿ ರಚಿಸಿ ಪಹಣಿಯಲ್ಲಿ ಹೆಸರು ದಾಖಲಿಸುವುದನ್ನು ಪೋಡಿ ಎನ್ನುತ್ತಾರೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಬಹುಮಾಲಿಕತ್ವದ ಪಹಣಿಗಳನ್ನು ಏಕವ್ಯಕ್ತಿ ಹೆಸರಿನಲ್ಲಿ ತಯಾರಿಸುವುದನ್ನು ಪೋಡಿ ಎನ್ನುವರು.

ಹದ್ದುಬಸ್ತು ಎಂದರೇನು?

ರೈತರ ಹೆಸರಿಗೆ ಪೋಡಿಯಾದ ಜಮೀನು ಬೇರೆಯವರಿಂದ ಒತ್ತುವರಿಯಾಗಿದ್ದರೆ ಅಳತೆ ಮಾಡಿ ನಿಖರ ಗಡಿ ಗುರುತಿಸುವುದರ ಮೂಲಕ ಜಮೀನು ಬಂದೋಬಸ್ತ್ ಮಾಡಿಕೊಳ್ಳುವ ಪ್ರಕ್ರಿಯೆಯನ್ನು ಹದ್ದುಬಸ್ತು ಎನ್ನುವರು. ಜಮೀನನ್ನು ಯಾರು ಒತ್ತುವರಿ ಮಾಡಿಕೊಂಡಿದ್ದಾರೆ ಹಾಗೂ ಎಷ್ಟು ಜಮೀನು ಒತ್ತುವರಿಯಾಗಿದೆ ಎಂಬುದನ್ನು ತಿಳಿದುಕೊಳ್ಳಲು ಹದ್ದುಬಸ್ತಿಗೆ ಅರ್ಜಿ ಸಲ್ಲಿಸಬೇಕು.

ಪಹಣಿ ಎಂದರೇನು?

ಜಮೀನು ಯಾರ ಹೆಸರಿನಲ್ಲಿದೆ ಎಂಬುದನ್ನು ತಿಳಿಸುವುದಕ್ಕೆ ಪಹಣಿ ಎನ್ನುವರು. ಇದಕ್ಕೆ ಆರ್.ಟಿಸಿ ಎಂದು ಸಹ ಕರೆಯುವರು. ಇದರಲ್ಲಿ ರೈತರ ಜಮೀನು ಯಾವ ಸರ್ವೆ ನಂಬರಿನಲ್ಲಿದೆ. ಖರಾಬು ಜಮೀನು, ಬೆಳೆಗಳ ವಿವರ, ಬೆಳೆಯ ನಮೂನೆ ಸೇರಿದಂತೆ ಇನ್ನಿತರ ಮಾಹಿತಿ ಇರುತ್ತದೆ.

ಖರಾಬು ಜಮೀನು ಎಂದರೇನು?

ಜಮೀನುಗಳಲ್ಲಿ ಪ್ರಕೃತಿದತ್ತವಾಗಿ ಹರಿಯುವ ಹಳ್ಳ-ಕೊಳ್ಳ, ರಾಜಕಾಲುವೆ, ಸಾರ್ವಜನಿಕ ಬಳಕೆಗೆ ಉಪಯೋಗವಾಗುವ ಕಾಲುದಾರಿ ಹಾಗೂ ಉಳುಮೆ ಮಾಡಲಾಗದ ಪಾಳು ಭೂಮಿಗಳನ್ನು ಬಿ ಖರಾಬು ಜಮೀನು ಎನ್ನುವರು.

ಇದನ್ನೂ ಓದಿ : ಮೊಬೈಲ್ ನಲ್ಲೇ ಚೆಕ್ ಮಾಡಿ ನಿಮ್ಮ ಪಿಎಂ ಕಿಸಾನ್ ಇಕೆವೈಸಿ ಸ್ಟೇಟಸ್

ಇಂತಹ ಜಮೀನು ಆಯಾ ಸರ್ವೆ ನಂಬರ್ಗಳ ವ್ಯಾಪ್ತಿಯಲ್ಲಿ ಕೆಲ ಗುಂಟೆಗಳಷ್ಟು ಪ್ರಮಾಣದಲ್ಲಿರುತ್ತವೆ. ಖಾಸಗಿ ನಿವೇಶಗಳ ನಡುವೆ ಸಿಲುಕಿಕೊಂಡಿರುವ ಜಮೀನು ಸಹ ಬಿ ಖರಾಬು ಜಮೀನು ಅಡಿಯಲ್ಲಿ ಬರುತ್ತದೆ.

ಟಿಪ್ಪಣಿ ಎಂದರೇನು?

ಸ್ವಾತಂತ್ರ್ಯ ಪೂರ್ವದಲ್ಲಿ ರಾಜ್ಯದ ಜಮೀನುಗಳನ್ನು ಸರ್ವೆ ಮಾಡಲಾಯಿತು. ಸ್ವಾತಂತ್ರಯ ನಂತರ ಮತ್ತೆ ಜಮೀನುಗಳನ್ನು ಸರ್ವೆ ಅಂದರೆ ಅಳತೆ ಮಾಡಲಾಯಿತು. ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರ ಮಾಡಲಾದ ಅಳತೆಯಲ್ಲಿ ಕೆಲವು ತಪ್ಪುಗಳನ್ನು ಸರಿಪಡಿಸಲಾಯಿತು. ಈ ರೀತಿ ಸರಿಪಡಿಸಿದ ಸರ್ವೆಗಳನ್ನು ಟಿಪ್ಪಣಿ ಎನ್ನುವರು.

ಆಕಾರಬಂದ್ ಎಂದರೇನು?

ಜಮೀನಿನ ಅಂತಿಮ ವಿಸ್ತೀರ್ಣವನ್ನು ಆಕಾರಬಂದ ಎನ್ನುವರು. ಆಕಾರಬಂದ್ ಸಹ ನೋಡಲು ಪಹಣಿಯಂತೆ ಕಾಣುತ್ತದೆ. ಇದರಲ್ಲಿ ಒಟ್ಟು 29 ಕಾಲಂಗಳಿರುತ್ತವೆ.

ಮುಟೇಶನ್ ಎಂದರೇನು?

ಮುಟೇಶನ್ ಪ್ರಾಪರ್ಟಿಗೆ ಸಂಬಂಧಿಸಿದ ಪದ. ಆಸ್ತಿ, ಜಮೀನು ಯಾರಿಂದ ಯಾರಿಗೆ ಪ್ರಾಪರ್ಟಿ ವರ್ಗಾವಣೆಯಾಗಿದೆ ಎಂಬುದನ್ನು ತಿಳಿಸುವ ಹಾಗೂ ಅದು ಹೇಗೆ ವರ್ಗಾವಣೆಯಾಗಿದೆ ಎಂಬುದು ತಿಳಿಸುವುದಕ್ಕೆ ಮುಟೇಶನ್ ಎನ್ನುವರು.  ಇದು ಗಿಫ್ಟ್, ಸೇಲ್, ವಿಲ್ ಮತ್ತು ಉತ್ತರಾಧಿಕಾರತ್ವ ಇತ್ಯಾದಿ ರೀತಿಯಲ್ಲಿ ವರ್ಗಾವಣೆಯಾಗುವ ಆಸ್ತಿಯ ಬಗ್ಗೆ ತಿಳಿಸುತ್ತದೆ.

ವಂಶವೃಕ್ಷ ಎಂದರೇನು?

ವಂಶವೃಕ್ಷವೆಂದರೆ ನಮ್ಮ ವಂಶದ ಮೂಲ. ಅದರ ಬೆಳವಣಿಗೆ, ಅಲ್ಲಿನ ಕವಲುಗಳು ಹೀಗೆ ಕುಟುಂಬದಲ್ಲಿ ಹುಟ್ಟಿದ, ಮೃತಪಟ್ಟವರ ಎಲ್ಲರ ಹೆಸರಿನೊಂದಿಗೆ ಹುಟ್ಟಿದ ದಿನ, ವಿದ್ಯಾರ್ಹತೆ, ಉದ್ಯೋಗ, ವೃತ್ತಿ ಮೊದಲಾದ ಸಮಗ್ರ ಮಾಹಿತಿಗಳನ್ನು ಪಟ್ಟಿ ಮಾಡುವುದ್ನು ವಂಶವೃಕ್ಷ ಎನ್ನುವರು. ವಂಶವೃಕ್ಷದಿಂದ ನಮ್ಮ ಮುಂದಿನ ಪೀಳಿಗೆಗೆ ವಂಶದ ಪರಿಚಯ ಮಾಡಿಸುವುದು ಸುಲಭವಾಗುತ್ತದೆ.

Leave a comment