ಒಂದು ವರ್ಷದಲ್ಲಿ ಜನವರಿಯಿಂದ ಡಿಸೆಂಬರ್ ವರೆಗೆ 12 ತಿಂಗಳು ಇರುವಂತೆ ಭಾರತದಲ್ಲಿಯೂ 12 ಮಾಸಗಳು ಇರುತ್ತವೆ. ಇವುಗಳನ್ನು ಎರಡು ಭಾಗವಾಗಿ ಮಾಡಲಾಗಿರುತ್ತದೆ. ಉತ್ತರಾಯಣ ಹಾಗೂ ದಕ್ಷಿಣಾಯನ. ನಮಗೆ ಬೆಳಕು ನೀಡುವ ಸೂರ್ಯ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶ ಮಾಡುವ ದಿನವನ್ನು ಸಂಕ್ರಾಂತಿ ಎಂದು ಕರೆಯುತ್ತಾರೆ. ಮಕರ ಎಂಬುದು ಒಂದು ರಾಶಿ, ಸಂಕ್ರಾಂತಿ ಅಥವಾ ಸಂಕ್ರಮಣ ಎಂದರೆ ಸೂರ್ಯ. ಸೂರ್ಯ ಧನರಾಶಿಯಿಂದ ಮಕರ ರಾಶಿಯತ್ತ ಚಲಿಸುತ್ತಾನೆ. ಸೂರ್ಯ ಜನವರಿ 14 ಅಥವಾ 15 ರಂದು ಸೂರ್ಯ ಧನಸ್ಸು ರಾಶಿಯಿಂದ ಮಕರ ರಾಶಿಗೆ ಸೇರುವ ಸಮಯವಾಗಿದ್ದರಿಂದ ಈ ಎರಡು ದಿನಗಳ ಸಮಯವನ್ನು ಮಕರ ಸಂಕ್ರಾಂತಿ ಎಂದು ಕರೆಯುತ್ತಾರೆ.
ಸಂಕ್ರಾಂತಿ ಹಬ್ಬವನ್ನು ವಿವಿಧ ರಾಜ್ಯಗಳಲ್ಲಿ ಒಂದೊಂದು ಹೆಸರಿನಿಂದ ಕರೆಯಲಾಗುತ್ತದೆ. ಕರ್ನಾಟಕದಲ್ಲಿ ಸುಗ್ಗಿ ಕಾಲವೆಂದು ಕರೆದರೆ, ತಮಿಳುನಾಡಿನಲ್ಲಿ ಪೊಂಗಲ್, ಕೇರಳದಲ್ಲಿ ಮಕರವಿಳಕ್ಕು ಹಾಗೂ ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಭೋಗಿ ಹಬ್ಬವೆಂದು ಕರೆಯುತ್ತಾರೆ.
ತಮಿಳುನಾಡಿನಲ್ಲಿ ಬೆಲ್ಲ, ಅಕ್ಕಿ, ತುಪ್ಪದಿಂದ ತಯಾರಿಸಿ ಪೊಂಗಲನ್ನು ಸುತ್ತಲೂ ಕಬ್ಬನ್ನು ಕಟ್ಟಿ ಸಿಂಗರಿದ ವಲೆಯಲ್ಲಿ ಮಾಡಿ ಹಬ್ಬ ಆಚರಿಸುತತ್ರೆ. ರೈತರು ಈ ದಿನದಂದು ಜಾನುವಾರುಗಳಿಗೆ ಮೈತೊಳೆದು ಸಿಂಗರಿಸಿ, ಮೆರವಣಿಗೆ ಮಾಡಿ ಸಂಜೆ ಊರ ಒಂದು ಬೀದಿಯ ದಾರಿಯಲ್ಲಿ ಕಿಚ್ಚು ಹಾಯಿಸುತ್ತಾರೆ.
ಕರ್ನಾಟಕದಲ್ಲಿಯೂ ಸಹ ರಾಸುಗಳಿಗೆ ಪೂಜೆ ಸಲ್ಲಿಸುತ್ತಾರೆ. ವರ್ಷವಿಡೀ ತಮ್ಮ ಕೃಷಿ ಕಾರ್ಯಗಳಿಗೆ ಹೆಗಲು ಕೊಟ್ಟು ಕೆಲಸ ಮಾಡಿರುವ ರಾಸುಗಳಿಗೆ ಕೆಲವು ಕಡೆ ಸಂಕ್ರಾಂತಿ ಹಬ್ಬದಂದು ಮೆರವಣಿಗೆ ನಡೆಸಿ ಗೋಪೂಜೆ ಸಲ್ಲಿಸುತ್ತಾರೆ. ರೈತರು ತಮ್ಮಲ್ಲಿರುವ ಎತ್ತುಗಳಿಗೆ ಅಲಂಕಾರ ಮಾಡಿ ಪೂಜೆ ಮಾಡುತ್ತಾರೆ. ಮಾಘಿಯ ಚಳಿಯಲ್ಲಿ ಕಿಚ್ಚಾಯಿಸಲಾಗುತ್ತದೆ. ಬೆಳಗಿನ ಜಾವ ಮನೆಗಳ ಮುಂದೆ ಬಣ್ಣ ಬಣ್ಣದ ರಂಗೋಲಿಯನ್ನು ಬಿಡಿಸುತ್ತಾರೆ. ಕುಟುಂಬಸ್ಥರೊಂದಿಗೆ ನದಿಗಳಿಗೆ ತೆರಳಿ ಪುಣ್ಯ ಸ್ನಾನ ಆಚರಿಸಿ ನಾನಾ ಧಾರ್ಮಿಕ ಕ್ಷೇತ್ರ, ಗುಡಿ ಗುಂಡಾರಗಳಿಗೆ ತೆರಳಿ ಪೂಜೆ ಸಲ್ಲಿಸುತ್ತಾರೆ.
ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿಯೂ ಸಹ ಬೆಳಗ್ಗೆ ಮನೆಗಳ ಮುಂದೆ ಬಗೆಬಗೆಯ ರಂಗೋಲಿ ಬಿಡಿಸುತ್ತಾರೆ. ಅಂದು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಿಶೇಷವಾಗಿ ಗಾಳಿಪಟ ಆಡಿಸುವುದು ಇಲ್ಲಿ ದೊಡ್ಡ ಸ್ಪರ್ಧೆ ಏರ್ಪಡಿಸುತ್ತಾರೆ. ಪ್ರತಿ ಮನೆ ಮನೆಯ ಮೇಲೆ ಕುಟುಂಬಸ್ಥರೊಂದಿಗೆ ಮಕ್ಕಳೆಲ್ಲರೂ ಗಾಳಿಪಟ ಆಡಿಸಿ ಸಂಭ್ರಮಿಸುತ್ತಾರೆ.
ರೈತರು ತಾವು ಬೆಳೆದ ಬೆಳೆಗಳನ್ನು ರಾಶಿ ರಾಶಿಯಾಗಿ ಹಾಕಿ ಅದಕ್ಕೆ ಪೂಜೆ ಮಾಡುವುದಕ್ಕಾಗಿ ಸಂಕ್ರಾಂತಿ ಹಬ್ಬವನ್ನು ಸುಗ್ಗಿಯ ಹಬ್ಬ ಎಂದು ಸಹ ಕರೆಯುತ್ತಾರೆ.
ಸಂಕ್ರಾಂತಿ ಹಬ್ಬದಂದು ಎಳ್ಳುಬೆಲ್ಲ ಹಂಚಿ ಶುಭಕೋರುತ್ತಾರೆ. ಈ ಸಮಯದಲ್ಲಿ ಎಳ್ಳುಮಿಶ್ರಿತ ಪದಾರ್ಥಗಳನ್ನು ಸವಿಯುತ್ತಾರೆ. ಸಜ್ಜೆರೊಟ್ಟಿ ಸಹ ಈ ಪದಾರ್ಥಗಳಲ್ಲಿ ಒಂದಾಗಿದೆ. ಸಂಕ್ರಾತಿ ಹಬ್ಬದಂದು ಎಳ್ಳುಬೆಲ್ಲ ಏಕೆ ಹಂಚುತ್ತಾರೆ ಗೊತ್ತೇ….ಸಂಕ್ರಾಂತಿ ಹಬ್ಬದಲ್ಲಿ ಎಳ್ಳು ದಾನ ಮಾಡುವ ಪದ್ಧತಿಯಿದಂ. ಆದರೆ ಕೇವಲ ಎಳ್ಳು ಸ್ವೀಕರಿಸಲು ಜನ ಹಿಂಜರಿಯುತ್ತಿದ್ದರು. ಕಾರಣ ಎಳ್ಳು ಶನಿ ಗ್ರಹದ ಪ್ರತಿನಿಧಿ ಹಾಗೂ ಆತನ ಧಾನ್ಯವಾಗಿದೆ. ಶನಿಗ್ರಹ ಎಂದಾಕ್ಷಣ ಶನಿಕಾಟ ಇರುತ್ತದೆ ಎಂಬ ಭಯ ಈಗಲೂ ಕೆಲವು ಜನರಲ್ಲಿದೆ. ಹಾಗಾಗಿ ಎಳ್ಳು ಶನಿದೇವತೆಯ ಧಾನ್ಯವಾದ್ದರಿಂದ ಕೇವಲ ಎಳ್ಳು ಸ್ವೀಕರಿಸುವುದಿಲ್ಲ. ಎಳ್ಳು ಸ್ವೀಕರಿಸಿದರೆ ಆತನ ಪಾಪ ನಮಗೆ ತಗಲುತ್ತದೆ ಹಾಗೂ ದೋಷ ಉಂಟಾಗುತ್ತದೆ ಎಂಬ ನಂಬಿಕೆ. ಹೀಗಾಗಿ ಕೆಲವು ಜನ ಈಗಲೂ ಕೇವಲ ಎಳ್ಳು ಸ್ವೀಕರಿಸುವುದಿಲ್ಲ. ಈ ಕಾರಣಕ್ಕಾಗಿಯೇ ಜನ ಎಳ್ಳಿನ ಜೊತೆಗೆ ಬೆಲ್ಲ, ಕಡಲೆಬೀಜ, ಕೊಬ್ಬರಿಯಂತ ಮಿಶ್ರಣ ಮಾಡಿ ದಾನ ಮಾಡುವ ಪದ್ಧತಿ ಆರಂಭವಾಗಿದೆ. ಹಾಗಾಗಿ ಸಂಕ್ರಾಂತಿ ಹಬ್ಬವನ್ನು ಎಲ್ಲುಬೆಲ್ಲದ ಹಬ್ಬವೆನ್ನುತ್ತಾರೆ.
ಸಂಕ್ರಾಂತಿ ಹಬ್ಬಕ್ಕೆ ವೈಜ್ಞಾನಿಕ ರೀತಿಯಲ್ಲಿ ನೋಡಿದಾಗ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಅತೀ ಹೆಚ್ಚು ಚಳಿ ಇರುತ್ತದೆ. ಚಳಿಯಿದ್ದಾಗ ಎಳ್ಳು ಸೇವನೆ ಮಾಡಿದರೆ ದೇಹದ ಉಷ್ಣತೆ ಹೆಚ್ಚಾಗುವುದರೊಂದಿಗೆ ಚರ್ಮದ ಕಾಂತಿಯೂ ಹೆಚ್ಚಾಗುತ್ತದೆ. ಹಾಗಾಗಿ ಸಂಕ್ರಾಂತಿ ಹಬ್ಬದಲ್ಲಿ ಎಳ್ಳು ಸೇವನೆ ಮಾಡುತ್ತಾರೆ.