ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ (cyclone effect) ಉಂಟಾಗಿರುವ ಹಿನ್ನೆಲೆಯಲ್ಲಿ ಕಾರವಾರ ನಗರ ಸೇರಿದಂತೆ ಜಿಲ್ಲೆಯ ಕರಾವಳಿಯ ವಿವಿಧೆಡೆ ಮಳೆಯಾಗುತ್ತಿದೆ. ಸಮುದ್ರದ ಆಗ್ನೆಯ ಭಾಗದಲ್ಲಿ ವಾಯುಭಾರ ಕುಸಿತವಾಗಿದ್ದು, ಮೇ 14 ರ ನಂತರ ಚಂಡಮಾರುತವಾಗಿ ಪರಿವರ್ತನೆಯಾಗಬಹುದು.
ಇದರ ಪರಿಣಾಮವಾಗಿ ಮೇ. 15 ಹಾಗೂ 16 ರಂದು ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರತಿ ಗಂಡೆಗೆ 70-80 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ. 120-200 ಮಿ.ಮೀ ಮಳೆ ಬೀಳುವ ಮುನ್ಸೂಚನೆಯಿದ್ದು, ಜಿಲ್ಲೆಯ ಎಲ್ಲಾ ಮೀನುಗಾರರು ಹಾಗೂ ಸಾರ್ವಜನಿಕರು ಸಮುದ್ರದ ಕಡೆಗೆ ಬರದಿರುವಂತೆ ಎಚ್ಚರಿಕೆ ನೀಡಲಾಗಿದೆ.
ಮೀನುಗಾರಿಕೆಗೆ ತೆರಳಿರುವ ಮೀನುಗಾರರು ಕೂಡಲೇ ದಡಕ್ಕೆ ಮರಳುವಂತೆ ಕೋಸ್ಟ್ ಗಾರ್ಡ್ ಮತ್ತು ಮೀನುಗಾರಿಕಾ ಇಲಾಖೆಯಿಂದ ಈಗಾಗಲೇ ಸೂಚನೆ ನೀಡಲಾಗಿದೆ. ಈ ಸಂಬಂಧ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಭಾರತೀಯ ಹವಾಮಾನ ಇಲಾಖೆ ಸೂಚನೆ ನೀಡಿದೆ.
ಗಾಳಿ, ಮಳೆ ಸಂದರಅಭದಲ್ಲಿ ಮಕ್ಕಳು ಸಾರ್ವಜನಿಕರು ಸಮುದ್ರದ ಕಡೆಗೆ ಬರಬಾರದು. ಜೊತೆಗೆ ಅಪಾಯಕಾರಿ ವಿದ್ಯುತ್ ಕಂಬ, ಕಟ್ಟಡ, ಮರಗಳ ಹತ್ತಿರ ಹಾಗೂ ಕೆಳಗೆ ನಿಲ್ಲದೆ ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆದುಕೊಳ್ಳಬೇಕು. ಮಳೆ, ಗಾಳಿಯಿಂದ ಉಂಟಾಗುವ ಹಾನಿಯನ್ನು ತಪ್ಪಿಸಲು ಇರುವಂತಹ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು.
ಸಾರ್ವಜನಿಕರು ಇಂತಹ ಸಂದರ್ಭದಲ್ಲಿ ತುರ್ತು ಸೇವೆಗಾಗಿ ಇಲಾಖೆಯ ದಿನದ 24 ಗಂಟೆ ಕಾರ್ಯನಿರ್ವಹಿಸುವ ಕಂಟ್ರೋಲ್ ರೂಂನ ಟೋಲ್ ಫ್ರೀ ಸಂಖ್ಯೆ 1077 ಅಥವಾ ವ್ಯಾಟ್ಸಪ್ ನಂಬರ್ 9483511015 ಗೆ ಸಂಪರ್ಕಿಸಬಹುದು ಎಂದು ಅಪರ ಜಿಲ್ಲಾಧಿಕಾರಿ ಹೆಚ್.ಕೆ, ಕೃಷ್ಣಮೂರ್ತಿ ತಿಳಿಸಿದ್ದಾರೆ.
ಗುಜರಾತ್ ಭಾಗದ ಕರಾವಳಿಯಲ್ಲಿ ಉಂಟಾಗಿರುವ ವಾಯಭಾರ ಕುಸಿತದಿಂದಾಗಿ ಚಂಡಮಾರುತ ಉಂಟಾಗಲಿದ್ದು, ಮ್ಯಾನ್ಮಾರ್ ದೇಶವು ಅದಕ್ಕೆ ತೌಕ್ತೆ (ಹಲ್ಲಿ) ಎಂದು ಹೆಸರಿಟ್ಟಿದೆ.
ಕಳೆದ ವರ್ಷ ಸಂಭವಿಸಿದ ನಿಸರ್ಗ ಚಂಡಮಾರುತದಿಂದ ಕೋಟ್ಯಂತರ ರೂಪಾಯಿ ನಷ್ಟವುಂಟಾಗಿತ್ತು. ಈ ವರ್ಷ ಯಾವುದೇ ಹಾನಿಯನ್ನುಂಟು ಮಾಡದೆ ತೌಕ್ತೆ ಚಂಡಮಾರುತ ಹೋದರೆ ಸಾಕು. ಈಗಾಗಲೇ ಕೊರೋನಾದಿಂದಾಗಿ ಜನತೆ ಸಾಕಷ್ಟು ಸಂಕಷ್ಟದಲ್ಲಿ ಸಿಲುಕಿದ್ದಾರೆ.