ಕಪ್ಪು ಥ್ರಿಪ್ಸ್ ನುಶಿ ನಿರ್ವಹಣಾ ಕ್ರಮಗಳ ಮಾಹಿತಿ

Written by Ramlinganna

Updated on:

Black thrips management ಮೆಣಸಿನಕಾಯಿ ಬೆಳೆ ಕರ್ನಾಟಕದಲ್ಲಿ ವ್ಯಾಪಕವಾಗಿ ಖುಷ್ಕಿ ಭೂಮಿಯಲ್ಲಿ ಹಾಗೂ ನೀರಾವರಿ ಪ್ರದೇಶದಲ್ಲಿರೈತರು ಬೆಳೆಯುತ್ತಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ಹಲವಾರು ಖಾಸಗಿ ಕಂಪನಿಗಳು ಹೊರ ತಂದಿರುವ ಕೆಂಪು ಮೆಣಸಿನಕಾಯಿ ಮತ್ತು ಹಸಿರು ಮೆಣಸಿನಕಾಯಿ ಸಂಕರಣ ತಳಿಗಳನ್ನು ರೈತರು ಬೆಳೆಯುತ್ತಿದ್ದಾರೆ. ವಿಶೇಷವಾಗಿ ನೀರಾವರಿ ಸೌಲಭ್ಯ ಹೊಂದಿರುವ ರೈತರು ಗುಣಮಟ್ಟದ ಸಂಕರಣ ತಳಿಗಳನ್ನು ಬಳಸಿ ಹೆಚ್ಚು ಇಳುವರಿಯನ್ನು ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಆಂದ್ರಪ್ರದೇಶ, ತೆಲಂಗಾಣ ಹಾಗೂ ಕರ್ನಾಟಕದ ಮೆಣಸಿನಕಾಯಿ ಬೆಳೆಯುವ ಪ್ರದೇಶದಲ್ಲಿ ಥ್ರಿಪ್ಸ್ ನುಶಿಯ ಕಾಟ ಕಂಡು ಬಂದಿದೆ. ಇದನ್ನುರೈತರು ಕಪ್ಪು ನುಶಿ ಎಂದೇ ಕರೆಯುತ್ತಾರೆ. ವೈಜ್ಞಾನಿಕವಾಗಿ ಈ ಕೀಟವನ್ನು ಥ್ರಿಪ್ಸ್  ಪಾರ್ವಿ ಸ್ಪೈನಸ್ ಎಂದು ಕರೆಯಲ್ಪಡುವ ಈ ಕೀಟವು ವಿಶ್ವವ್ಯಾಪಿ ಕೀಟವಾಗಿದೆ.

ಇದೊಂದು ಸರ್ವಭಕ್ಷಕ ಪೀಡೆಯಾಗಿದ್ದು, ಬೀನ್ಸ್, ಬದನೆ, ಪಪ್ಪಾಯ, ಮೆಣಸಿನಕಾಯಿ, ಕಾಳುಮೆಣಸು, ಆಲೂಗಡ್ಡೆ ಮತ್ತು ಸ್ಟ್ರಾಬೆರಿಯಂತಹ ಬೆಳೆಗಳನ್ನು ಬಾಧಿಸಬಲ್ಲದು. ಇದಲ್ಲದೇ, ಅಲಂಕಾರಿಕ ಸಸ್ಯಗಳಲ್ಲೂ ಕಂಡುಬಂದಿದೆ. ಈ ಕೀಟವು ಮೆಣಸಿನಕಾಯಿ ಬೆಳೆಗಾರರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಸಕಾಲಿಕ ಬೆಳೆಯ ಮೇಲ್ವಿಚಾರಣೆಯಿಂದ ಮಾತ್ರ ಈ ಕೀಟವನ್ನು ನಿರ್ವಹಿಸಬಹುದು.

ಲಕ್ಷಣಗಳು:      

ಪ್ರೌಢ ಕೀಟಗಳು ಗುಂಪು ಗುಂಪಾಗಿ ಎಲೆಗಳ ಕೆಳಭಾಗದಲ್ಲಿ, ಹೂಗಳ ಒಳಗೆ ಮತ್ತು ಹೊರಗೆ ಕಂಡುಬರುತ್ತದೆ. ಮರಿ ಹಂತದ ನುಸಿಗಳು ಎಲೆಗಳ ಕೆಳಭಾಗದಲ್ಲಿ ಕೇಂದ್ರೀಕೃತಗೊಂಡಿರುತ್ತವೆ. ಕೀಟಗಳು ಸಸ್ಯದ ಬಹುಭಾಗಗಳಿಂದ ರಸವನ್ನು ಹೀರುವುದರಿಂದ ಸಸ್ಯದ ಬೆಳವಣಿಗೆ ಕುಂಠಿತಗೊಳ್ಳುತ್ತದೆ.

ಇದನ್ನೂ ಓದಿ ನಿಮ್ಮ ಜಮೀನು ಯಾರಿಂದ ಯಾರ ಹೆಸರಿಗೆ ವರ್ಗಾವಣೆಯಾಗಿದೆ? ಇಲ್ಲೇ ಚೆಕ್ ಮಾಡಿ

ಎಲೆಗಳ ಅಂಚುಗಳ ಮೇಲ್ಮುಖವಾಗಿ ಮುದುಡುವುದು, ಹೂವುಗಳು ಉದುರುವುದು ಮತ್ತು ಬೆಳವಣಿಗೆ ಹಂತದಲ್ಲಿರುವ ಚಿಗುರುಗಳು ಗುಂಪಾಗಿ ಹೂಬಿಡದೆ ಒಣಗುವುದು ಸಾಮಾನ್ಯವಾಗಿ ಕಂಡುಬರುವ ಹಾನಿಯ ಲಕ್ಷಣಗಳಾಗಿವೆ. ಕಾಲಕ್ರಮೇಣ, ಹೂವುಗಳು ಉದುರಿ ಹೋಗುತ್ತವೆ. ಇದರಿಂದ, ಕಾಯಿಗಳ ಸಂಖ್ಯೆ ಕಡಿಮೆಯಾಗಿ ಇಳುವರಿಯು ಗಣನೀಯ ಪ್ರಮಾಣದಲ್ಲಿ ಕುಂಠಿತಗೊಳ್ಳುತ್ತದೆ.

Black thrips management ಸಮಗ್ರ ಪೀಡೆ ನಿರ್ವಹಣಾ ಕ್ರಮಗಳು

೧.         ಬೇಸಿಗೆ ಹಂಗಾಮಿನಲ್ಲಿ ಆಳವಾಗಿ ಉಳುಮೆ ಮಾಡಿ ಅಥವಾ ರೆಂಟೆ ಹೊಡೆದು ಕೋಶಾವಸ್ಥೆಯಲ್ಲಿರುವ ಕೀಟದ ಅವಸ್ಥೆಗಳನ್ನು ನಾಶಪಡಿಸಬಹುದು.

೨.         ಹಂಗಾಮಿಗೆ ತಕ್ಕಂತೆ ಬಿತ್ತನೆ ಕೈಗೊಳ್ಳಬೇಕು. ತಡವಾಗಿ ಬಿತ್ತನೆ ಮಾಡುವುದನ್ನುತಪ್ಪಿಸುವುದು.

೩.         ಕೀಟ ನಿರೋಧಕತೆ ಹೊಂದಿರುವ/ ಬೇಗನೇ ಮಾಗುವ /ಕಡಿಮೆ ಅವಧಿಯ ತಳಿಗಳನ್ನು ಬಳಸಿ ಕೀಟದ ಬಾಧೆಯಿಂದ ತಪ್ಪಿಸಿಕೊಳ್ಳಬಹುದು.

೪.         ಸ್ವಚ್ಛ ಬೇಸಾಯಕ್ಕೆ ಆದ್ಯತೆ ನೀಡಬೇಕು. ಮೆಣಸಿನಕಾಯಿ ಬೆಳೆ ಕ್ಷೇತ್ರವನ್ನು ಕಳೆ-ಕಸ ಮುಕ್ತವಾಗಿರಿಸುವುದು ಒಳ್ಳೆಯದು. ಹೊಲದ ಸುತ್ತಮುತ್ತಇರುವ ಆಸರೆ ಕಳೆಗಳಾದ ಪಾರ್ಥೇನಿಯಂ, ಎಕ್ಕೆ ಗಿಡಗಳನ್ನು ತೆಗೆದುಹಾಕುವುದು.

೫.         ಕೃಷಿ ವಿಶ್ವವಿದ್ಯಾಲಯ ಶಿಫಾರಸ್ಸು ಮಾಡಿದ ಕೀಟನಾಶಕಗಳನ್ನು ಬೀಜೋಪಚಾರಕ್ಕೆ ಬಳಸುವುದು.

೬.         ಹೊಲದ ಸುತ್ತಲೂ 2-3ಸಾಲು ಎತ್ತರ ಬೆಳೆಯಬಹುದಾದ ಜೋಳ/ಮೆಕ್ಕೆಜೋಳ/ಸಜ್ಜೆ ಬೆಳೆಯನ್ನು ಬೇಲಿ ಬೆಳೆಯಾಗಿ ಬಿತ್ತುವುದರಿಂದ ಕೀಟಗಳ ಪ್ರಸಾರವನ್ನು ನಿಯಂತ್ರಿಸಬಹುದು.

೭.         ಶಿಫಾರಸ್ಸು ಮಾಡಿದಅಂತರದಲ್ಲಿ (9೦ x 3೦ ಸೆಂ.ಮೀ./ 6೦x 45 ಸೆಂ. ಮೀ.) ಬಿತ್ತನೆ/ ನಾಟಿ ಕೈಗೊಳ್ಳಬೇಕು.

೮.         ಪ್ರತಿ ಎಕರೆಗೆ ಚೆನ್ನಾಗಿ ಕೊಳಿತ ತಿಪ್ಪೆಗೊಬ್ಬರ ಅಥವಾ ಕಾಂಪೋಸ್ಟ್ ಗೊಬ್ಬರ (10-12 ಟನ್/ ಎಕರೆಗೆ) ಬಳಸುವುದು ಸೂಕ್ತ. ಸದರಿ ಸಾವಯವ ಗೊಬ್ಬರಗಳಿಗೆ ಮೆಟಾರೈಜಿಯಂ ಅಥವಾ ಸುಡೋಮೊನಾಸ್ ಜೀವಾಣುಗಳನ್ನು (2 ಕೆಜಿ/ ಟನ್) ಬೆರೆಸಿ ಹೊಲಕ್ಕೆ ಹಾಕುವುದು ಸೂಕ್ತ.

೯.         ಕೀಟಕ್ಕೆ ನಿರೋಧಕತೆಯನ್ನು ಹೆಚ್ಚಿಸಲು ಪ್ರತಿ ಎಕರೆಗೆ 1೦೦ ಕೆಜಿ. ಬೇವಿನ ಹಿಂಡಿ ಅಥವಾ 5೦೦ ಕೆಜಿ ಎರೆಹುಳು ಗೊಬ್ಬರವನ್ನು ಬಳಸಬೇಕು.

೧೦.       ಶಿಫಾರಸ್ಸು ಮಾಡಿದ ಸಮತೋಲಿತಗೊಬ್ಬರ (ಸಾ.ರಂ.ಪೊ)ದ ಜೊತೆಗೆ ಪೊಟ್ಯಾಷ್ ಬಳಕೆಗೆ ಹೆಚ್ಚು ಒತ್ತು ನೀಡಬೇಕು.

೧೧.       ಸಿಲ್ವರ್ ಬಣ್ಣದ ಪ್ಲಾಸ್ಟಿಕ್ ಶೀಟ್ (25-30 ಮೈಕ್ರಾನ್) ನಿಂದ ಮಲ್ಚಿಂಗ್ ಮಾಡುವುದರಿಂದ ಮಣ್ಣಿನಲ್ಲಿ ಕೀಟವು ಕೋಶಾವಸ್ಥೆಗೆ ಹೋಗುವುದನ್ನುತಡೆಯಬಹುದು.

೧೨.       ನೀಲಿ ಅಂಟು ಬಲೆಗಳನ್ನು ಪ್ರತಿಎಕರೆಗೆ 25-30 ರಂತೆ ಬೆಳೆಯ ಎತ್ತರಕ್ಕೆ ನೇತು ಹಾಕುವುದರಿಂದ ಕೀಟಗಳನ್ನು ಆಕರ್ಷಿಸಿ ನಿಯಂತ್ರಿಸಬಹುದು.

೧೩.       ಆಗಿಂದಾಗ್ಗೆ ಅಂತರ ಬೇಸಾಯ ಮಾಡುವುದರಿಂದ/ ಕುಂಟೆ ಹೊಡೆಯುವುದರಿಂದ ಕೋಶಾವಸ್ಥೆಯಲ್ಲಿರುವ ಥ್ರಿಪ್ಸ್ ನುಶಿಯನ್ನು ನಾಶಪಡಿಸಬಹುದು.

೧೪.       ಸಾಧ್ಯವಾದಲ್ಲಿ ಕಾಲುವೆ ಮುಖಾಂತರ ನೀರುಣಿಸುವ ಬದಲು ತುಂತುರು ನೀರಾವರಿ ಪದ್ಧತಿಯನ್ನು ಅಳವಡಿಸುವುದು ಸೂಕ್ತ.

೧೫.       ತೀವ್ರ ಬಾಧೆಗೊಳಗಾದ ಗಿಡಗಳನ್ನು ಕಿತ್ತುಗುಂಡಿಯಲ್ಲಿ ಮುಚ್ಚಬೇಕು ಅಥವಾ ಸುಡಬೇಕು.

 

ಲೇಖಕರು : ಡಾ. ಹೀನಾ ಎಮ್.ಎಸ್.ಮತ್ತು ಡಾ. ಶಿವಶಂಕರ ಮೂರ್ತಿ

ಐ.ಸಿ.ಎ.ಆರ್.-ಕೃಷಿ ವಿಜ್ಞಾನ ಕೇಂದ್ರ, ಇಂಡಿ

ಕೃಷಿ ವಿಶ್ವವಿದ್ಯಾಲಯ, ಧಾರವಾಡ

Leave a Comment