ಸ್ವಾತಂತ್ರ್ಯ ಹೋರಾಟದಲ್ಲಿ ಬಂಜಾರ ಸಮುದಾಯದ ತ್ಯಾಗ ಬಲಿದಾನ ಇತಿಹಾಸದ ಕೊರತೆಯಿಂದಾಗಿ ಬೆಳಕಿಗೆ ಬಂದಿಲ್ಲ- ಶಾರದಾದೇವಿ ಜಾಧವ

Written by Ramlinganna

Updated on:

Banjara State level seminar : ಬಂಜಾರಾ ಸಮುದಾಯದವರು ಸ್ವಾತಂತ್ರ್ಯ ಹೋರಾಟದಲ್ಲಿ ನೇರವಾಗಿ ಪಾಲ್ಗೊಳ್ಳದಿದ್ದರೂ ಪರೋಕ್ಷವಾಗಿ ಪಾಲ್ಗೊಂಡು ಪ್ರಾಣ ತ್ಯಾಗ ಮಾಡಿದ್ದಾರೆ. ಆದರೆ ಇತಿಹಾಸದ ಕೊರತೆಯಿಂದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣ ತ್ಯಾಗ ಮಾಡಿದ್ದು ಎಲ್ಲಿಯೂ ಬೆಳಕಿಗೆ ಬಂದಿಲ್ಲ. ಹಾಗಾಗಿ ಬಂಜಾರ ಸಮುದಾಯದವರು ತಮ್ಮ ಇತಿಹಾಸವನ್ನು ತಾವು ಅರಿಯಬೇಕಾಗಿದೆ ಎಂದು ಸರ್ಕಾರಿ ಮಹಾವಿದ್ಯಾಲಯದ ಪ್ರಾಧ್ಯಾಪಕಿ ಶಾರದಾದೇವಿ ಎಸ್. ಜಾಧವ್ ಅಭಿಪ್ರಾಯ ವ್ಯಕ್ತಪಡಿಸಿದರು.

ನಮ್ಮ ಯೂಟೂಬ್ ಚಾನೆಲ್ ಸಬಸ್ಕ್ರೈಬ್ ಮಾಡಿ ಇಂತಹ ಮಾಹಿತಿ ಪಡೆಯಿರಿ

ಅವರು ಬಂಜಾರಾ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಬೆಂಗಳೂರು ಹಾಗೂ ಗುಲ್ಬರ್ಗ ವಿಶ್ವವಿದ್ಯಾಲಯ ಕಲಬರುಗಿ ಸಹಯೋಗದಲ್ಲಿ ಕನ್ನಡ ವಿಭಾಗದ ಹರಿಹರ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕೀರಣದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಬಂಜಾರರ ಪಾತ್ರ , ಲದೇಣಿ ವ್ಯಾಪಾರ ಹಾಗೂ ಬಂಜಾರರ ಭಾಷೆ ಮತ್ತು ಸಂಸ್ಕೃತಿ ಕುರಿತು ಮಾತನಾಡಿದರು.

Banjara State level seminar

ಸ್ವಾತಂತ್ರ್ಯ ಪೂರ್ವದಲ್ಲಿ ಜಲಿಯಾನ್ ವಾಲಾಬಾಗ್  ಹತ್ಯಾಕಾಂಡದಂತೆ ಭಗತ್ ಚಳವಳಿ ನಡೆದಿತ್ತು.  ಗುಜರಾತ್ ಮಧ್ಯಪ್ರದೇಶದ ನಡುವೆ  ಮಾನವಘಡ ಎಂಬ ಸ್ಥಳದಲ್ಲಿ ಬಂಜಾರಾ ಸಮಾಜದ ಗುರುಗೋವಿಂದ ನೇತೃತ್ವದಲ್ಲಿ ಚಳವಳಿ ನಡೆಯುತ್ತದೆ.  ಬ್ರೀಟೀಶರು ಹೇರುತ್ತಿದ್ದ ತೆರಿಗೆಯನ್ನು ನಿಷೇಧಿಸಬೇಕೆಂದು ಆಗ್ರಹಿಸಿ ಹೊರಾಟ ಮಾಡಲು ಒಂದೇ ಕಡೆ ಸೇರಿರುತ್ತಾರೆ. ಆಗ ಏಕಾ ಏಕಿ ನಾಲ್ಕುಕಡೆಯಿಂದ ಬಂದ ಬ್ರೀಟೀಶರ ಸೈನಿಕರು ಒಂದೇ ಸವನೆ ಗುಂಡಿನ ಸುರಿಮಳೆಗೈಯುತ್ತಾರೆ. ಈ ಹತ್ಯಾಕಾಂಡದಲ್ಲಿ 1500 ಕ್ಕೂ ಹೆಚ್ಚು ಜನ ಬಂಜಾರರು ತಮ್ಮ ಪ್ರಾಣ ಕಳೆದುಕೊಂಡರು. ನಂತರ ಶವಸಂಸ್ಕಾರಕ್ಕೂ ಬಿಡುವುದಿಲ್ಲ. ಇದರಿಂದಾಗಿ ಎಷ್ಟೋ ಶವಗಳು ಕೊಳೆತುಹೋಗುತ್ತವೆ ಎಂದು ಕಳವಳ ವ್ಯಕ್ತಪಡಿಸಿದರು.

ಇದನ್ನೂ ಓದಿ jaler kadi: ಪಂಚ್ ಆವೋನಿ ಭಾ ಜಳ್ ಲೇಮಾ

ಬಂಜಾರರು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸೈನಿಕರಿಗೆ, ರಾಜ ಮಹಾರಾಜರುಗಳಿಗೆ ಕಾಡಿನ ಮಾರ್ಗವಾಗಿ ಸರಕುಗಳನ್ನು ಸರಬರಾಜುಮಾಡುತ್ತಿದ್ದರು. ಇಸ್ಟೇ ಅಲ್ಲ ಉಪ್ಪನ್ನು ಸಹ ಬೇರೆಬೇರೆ ಪ್ರದೇಶಗಳಿಗೆ ಎತ್ತಿನ ಬಂಡಿಗಳ ಮೂಲಕ ಸರಬರಾಜು ಮಾಡುತ್ತಿದ್ದರು. ಆದರೆ ಬ್ರಿಟೀಶರು ಈ ಉಪ್ಪಿನ ಮೇಲೂ ತೆರಿಗೆ ವಿಧಿಸುತ್ತಾರೆ. ಇದರಿಂದಾಗಿ ಬಂಜಾರ ಸಮುದಾಯದವರಿಗೆ ಆರ್ಥಿಕವಾಗಿ ದೊಡ್ಡ ಹೊಡೆತ ಬೀಳುತ್ತದೆ. ದಂಡಿ ಉಪ್ಪಿನ ಸತ್ಯಾಗ್ರಹದಲ್ಲಿ ಬಂಜಾರ ಸಮುದಾಯದ ಸಾವಿರಾರು ಜನ ಪಾಲ್ಗೊಂಡಿದ್ದರು. ಆದರೆ ಇತಿಹಾಸದಲ್ಲಿ ದಾಖಲಾಗಿಲ್ಲ ಎಂದು ಖೇದ ವ್ಯಕ್ತಪಡಿಸಿದರು.

ಔರಂಗಜೇಬನ ಧರ್ಮಾಂಧತೆಯನ್ನು ಸಿಖ್ ಧರ್ಮದ ಗುರು ತೇಜ್ ಬಹಾದ್ದೂರ್ ವಿರೋಧಿಸಿದ್ದರು. ಇದರಿಂದಾಗಿ ತೇಜ್ ಬಹಾದ್ದೂರ್ ನನ್ನು ಔರಂಗ್ ಜೇಬ್ ನ ಸೈನಿಕರು ಬಂಧಿಸುತ್ತಾರೆ. ಮುಸ್ಲಿಂ ಧರ್ಮಕ್ಕೆ ಮತಾಂತರವಾಗಲು ಒತ್ತಾಯ ಮಾಡುತ್ತಾರೆ. ಆದರೂ ಒಪ್ಪಿಕೊಳ್ಳುವುದಿಲ್ಲ. ಇದರಿಂದಾಗಿ ಕ್ರೋಧಗೋಂಡ ಔರಂಗಜೇಬ್ ತೇಜ್ ಬಹಾದ್ದೂರನ ಶಿರಛೇದನ ಮಾಡುತ್ತಾರೆ.  ಅಂತ್ಯಸಂಸ್ಕಾರಕ್ಕೂ ಶವ ಕೊಡುವುದಿಲ್ಲ. ಆಗ ಬಂಜಾರಾ ಸಮುದಾಯದ ಲಕೀಶಾ ಬಂಜಾರಾ ಸೇರಿದಂತೆ ಹಲವಾರು ಜನ ಎತ್ತಿನ ಬಂಡಿಗಳ ಮೂಲಕ ತೇಜ್ ಬಹಾದ್ದೂರ ಪಾರ್ಥಿವ ಶರೀರ ಬಳಿ ಸೇರುತ್ತಾರೆ. ಲಕೀಶಾ ಬಂಜಾರಾ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಸೈನಿಕರಿಗೆ ಗೊತ್ತಿಲ್ಲದೆ ತೇಜ್ ಬಹಾದ್ದೂರವರ  ಪಾರ್ಥಿವ ಶರೀರವನ್ನುತಮ್ಮ ಬಂಡಿಯಲ್ಲಿ ಸಾಗಿಸಿಕೊಂಡು ಹೋಗುತ್ತಾರೆ. ಕೊನೆಗೆ ತನ್ನ ಮನೆಯಲ್ಲಿಯೇ ತೇಜ್ ಬಹಾದ್ದೂರ್ ರವರ ಶವವನ್ನಿಟ್ಟು ಮನೆಗೆ ಬೆಂಕಿ ಹಚ್ಚಿ ಅಂತ್ಯ ಸಂಸ್ಕಾರ ಮಾಡುತ್ತಾರೆ. ಇಂತಹ ಮಹಾನ್ ಹೋರಾಟಗಾರರ ಕುರಿತು ಬಂಜಾರಾ ಸಮುದಾಯದವರಿಗೆ ಬಂಜಾರಾ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ತಿಳಿಸಬೇಕೆಂದು ಹೇಳಿದರು.

ಮೊಗಲರ ಆಳ್ವಿಕೆಯಲ್ಲಿರುವ ಜಂಗೀಭಂಗಿ, ಭೀಮಾನಾಯಕ, ಜೇಮ್ಲಾ ರಾಠೋಡ, ರೂಪ್ ಸಿಂಗ್, ಮಿಟ್ಟುಭುಕ್ಯಾ,  ಸೇರಿದಂತೆ ಅನೇಕರು ಸ್ವಾತಂತ್ರ್ಯ ಹೋರಾಟದಲ್ಲಿಪಾಲ್ಗೊಂಡಿದ್ದರು ಎಂದು ಹೇಳಿದರು.

Banjara State level seminar ಬರಹವಿಲ್ಲದಿದ್ದರೂ ಇನ್ನೂ ಜೀವಂತವಾಗಿರುವ ಭಾಷೆ ಬಂಜಾರಾ ಭಾಷೆ- ಬಾಬು ಎಂ ಜಾಧವ

ಸಾಹಿತಿ ಬಾಬು ಎಂ. ಜಾಧವ ಬಂಜಾರರ ಭಾಷೆ ಮತ್ತು ಸಂಸ್ಕೃತಿ ಕುರಿತು ಮಾತನಾಡುತ್ತಾ, ಬರಹಗಳಿರುವ ಸಾವಿರಾರು ಭಾಷೆಗಳೇ ಇಂದಿನ ಕಾಲದಲ್ಲಿ ಅಳವಿನಂಚಿನಲ್ಲಿದೆ. ಆದರೆ ಯಾವುದೇ ಬರಹವಿಲ್ಲದಿದ್ದರೂ ಇನ್ನೂ ಜೀವಂತವಾಗಿರುವ ಭಾಷೆ ಯಾವುದಾದರೂ ಇದೆಯೆಂದರೆ ಅದು ಬಂಜಾರಾ ಭಾಷೆ ಎಂದು ಹೇಳಿದರು.

ಬೇರೆಬೇರೆ ಭಾಷೆಗಳಲ್ಲಿಸಾಹಿತಿಗಳಿದ್ದಾರೆ. ಭಾಷೆ ಉಳಿಸುವುದಕ್ಕಾಗಿ ಸರ್ಕಾರಗಳು ಮುಂದಾಗುತ್ತಿವೆ. ಆದರೂ ಇತರ ಭಾಷೆಗಳಲ್ಲಿ ಮಾತನಾಡುವವರ ಸಂಖ್ಯೆ ತುಂಬಾ ಕಡಿಮೆಯಾಗುತ್ತಾ ಹೋಗುತ್ತಿದೆ. ಆದರೆ ಯಾವುದೇ ಲಿಪಿವಿಲ್ಲದಿದ್ದರೂ ದೇಶದ ಮೂಲೆ ಮೂಲೆಗಳಲ್ಲಿ ಬಂಜಾರ ಸಮುದಾಯದವರು ತಮ್ಮಭಾಷೆಗೆ ಜೀವ ನೀಡಿದ್ದಾರೆಂದರೆ ಆ ಭಾಷೆಗೆ ಎಂತಹ ತಾಕತ್ತು ಇದೆ ಎಂದರ್ಥ. ಬಂಜಾರಾ ಸಮಾಜವು ಕೇವಲ ವೇಷ ಭೂಷಣಕ್ಕಸ್ಟೇ ಸೀಮಿತವಾಗಿಲ್ಲ.  ಎಲೆಮರೆಕಾಯಿಯಂತೆ ಎಷ್ಟೋ ಜನ ಸಾಧಕರಿದ್ದಾರೆ. ಅಂತಹವರನ್ನು ಗುರುತಿಸುವ ಕೆಲಸ ಅಕಾಡಮೆ ಮಾಡಬೇಕೆಂದು ಹೇಳಿದರು.

ಇದನ್ನೂ ಓದಿ Banjara Gotra (ಪಾಡಾ)ಗಳೆಷ್ಡು? ಇಲ್ಲಿದೆ ಮಾಹಿತಿ

ಇದೇ ಸಂದರ್ಭದಲ್ಲಿ ಬಂಜಾರ ಮಹಿಳೆಯರು ಧರಿಸುವ ಉಡುಪಿನ ಮೇಲೆ ಬಾಬು ಎಂ. ಜಾಧವ ಹಾಡಿದ ಹಾಡಿಗೆ ಚಪ್ಪಾಳೆ ಸುರಿಮಳೆಗೈಯಲಾಯಿತು. ಹಾಗೂ ಬಂಜಾರ ಕನ್ಯೆಯರಿಗೆ  ಮದುವೆ ಸಂದರ್ಭದಲ್ಲಿ ಊರಿನ ನಾಯಕ ಸೇರಿದಂತೆ ಮುಖಂಡರಿಗೆ ನೆನೆಯುವ ಹಾಡನ್ನು ಹಾಡಿ ನೆರದವರೆಲ್ಲರ ಮೈನವಿರೇಳಿಸುವಂತೆ ಮಾಡಿದರು.

ಬಂಜಾರಾ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಬೆಂಗಳೂರು ಸದಸ್ಯ ಡಾ. ಉತ್ತಮ ಕೆ.ಹೆಚ್. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, ಬಂಜಾರಾ ಸಮುದಾಯದವರ ಭಾಷೆ, ಸಂಸ್ಕೃತಿ, ಕೌಶಲ, ಸಾಹಿತ್ಯ ಸೇರಿದಂತೆ ಇತರ ವಿಚಾರಗಳ್ನೊಳಗೊಂಡ ಬೃಹತ್ ವಿಶ್ವಕೋಶವನ್ನು ಹೊರತರಲು ಉದ್ದೇಶಿಸಲಾಗಿದೆ.  ಈ ವಿಶ್ವಕೋಶ ತಯಾರಿಸುವ ತಂಡಕ್ಕೆ ಬರಗೂರು ರಾಮಚಂದ್ರಪ್ಪ ಮಾರ್ಗದರ್ಶನನೀಡಲಿದ್ದಾರೆ. ಇದಕ್ಕಾಗಿ 8 ಕೋಟಿ ರೂಪಾಯಿ ಅಗತ್ಯವಿದ್ದು, ಅಷ್ಟೊಂದು ಪ್ರಮಾಣದ ಹಣವನ್ನುಅಕಾಡೆಮಿಯಿಂದ ಭರಿಸಲು ಸಾಧ್ಯವಿಲ್ಲ. ಹೀಗಾಗಿ ಆರ್ಥಿಕ ನೆರವು ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಲಾಗಿದೆ. ಅಕಾಡೆಮಿಯಿಂದ ಪ್ರತಿ ತಿಂಗಳೂ ನಾಲ್ಕೈದು ಕಾರ್ಯಕ್ರಮಗಳನ್ನುಆಯೋಜಿಸಲಾಗುತ್ತಿದೆ. ಸಮುದಾಯದವರನ್ನು ತೊಡಗಿಸಿಕೊಳ್ಳಲಾಗುತ್ತಿದೆ. ಗುಲ್ಬರ್ಗ ವಿಶ್ವವಿದ್ಯಾಲಯದಂತೆ ರಾಜ್ಯದ ಎಂಟು ವಿಶ್ವವಿದ್ಯಾಲಯಗಳಲ್ಲಿ ಬಂಜಾರ ಅಧ್ಯಯನ ಪೀಠವನ್ನು ಆರಂಭಿಸಲು ಸಿದ್ಧತೆನಡೆದಿದೆ. ಅಗತ್ಯ ಬಿದ್ದರೆ ಅಕಾಡೆಮಿಯಿಂದ ಅಗತ್ಯ ನೆರವು ನೀಡಲಾಗುವುದು ಎಂದರು.

ಗೆರಿಲ್ಲಾ ಯುದ್ಧದಲ್ಲಿ ನಿಪುಣರಾಗಿದ್ದ ಬಂಜಾರ ಸಮುದಾಯದವರಿಗೆ ಕಿರುಕುಳ ನೀಡಲೆಂದೇ ಬ್ರಿಟೀಷರು ಕ್ರಿಮಿನಲ್  ಟ್ರೈಬ್ (ಅಪರಾಧ ಎಸಗುವ ಬುಡಕಟ್ಟು) ಪಟ್ಟಿಗೆ ಸೇರಿಸಿತ್ತು.ಅಷ್ಟಾಗಿಯೂ ಸ್ವಾತಂತ್ರ್ಯ ಹೋರಾಟಗಾರರಿಗೆ ಕಾಡಿನಲ್ಲಿ ಅನ್ನ ಆಶ್ರಯ ನೀಡಿ ಸಲುಹಿದ್ದಾರೆಎಂದರು.

ಬಂಜಾರಾ ಸಂಸ್ಕೃತಿಯನ್ನು ರಾಜ್ಯದ ವಿಶ್ವವಿದ್ಯಾಲಯಗಳು ಪರಿಚಯಿಸುತ್ತಿರುವುದು ಶ್ಲಾಘನೀಯ. ಗುಲ್ಬರ್ಗ ವಿಶ್ವವಿದ್ಯಾಲಯದಂತೆ ರಾಜ್ಯದ ಎಲ್ಲ 8 ವಿಶ್ವವಿದ್ಯಾಲಯಗಳು, ವಿಚಾರ ಸಂಕೀರಣ, ಗೋಷ್ಠಿಗಳನ್ನು ನಡೆಸಿ ಸಂಸ್ಕೃತಿ ಉಳಿಸುವ ಕೆಲಸ ಮಾಡಬೇಕಾಗಿದೆ. ಬಂಜಾರರ ಸಂಗೀತ, ಕಸೂತಿ ಕಲೆ ಉಳಿಸುವ ಅಗತ್ಯವಿದೆ ಎಂದರು.

ಬಂಜಾರಾ ಸಮುದಾಯದವರು ಶ್ರಮಜೀವಿಗಳಾಗಿದ್ದಾರೆ. ಅವರು ಎಂದೂ  ಭಿಕ್ಷಾಟನೆ ಮಾಡುವುದಿಲ್ಲ. ತುಂಬಾ ಸ್ವಾಭಿಮಾನಿಗಳಾಗಿದ್ದರಿಂದ ಇನ್ನೊಬ್ಬರ ಮುಂದೆ ಕೈಚಾಚುವ ಕೆಲಸ ಮಾಡುವುದಿಲ್ಲವೆಂದು ಹೆಮ್ಮೆ ವ್ಯಕ್ತಪಡಿಸಿದರು.

ಅಣ್ಣಾರಾಯ್ ಎಸ್. ರಾಠೋಡ ಮಾತನಾಡಿ, ಬ್ರೀಟೀಶರು ಬರುವುದಕ್ಕಿಂತ ಮೊದಲು ಶೇ. 90 ರಷ್ಟು ಜನ ಬಂಜಾರ ಸಮುದಾಯದವರು ವ್ಯಾಪಾರ ಮಾಡುತ್ತಿದ್ದರು. ಸರಕುಗಳನ್ನುಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸಾಗಿಸಿ ಜೀವನ ಸಾಗಿಸುತ್ತಿದ್ದರು. ಆದರೆ ಬ್ರೀಟೀಶರು ಬಂದ ನಂತರ ಅವರ ವ್ಯಾಪಾರಕ್ಕೆ ತೊಂದರೆಯಾಗುತ್ತದೆ ಎಂದು ಬಂಜಾರರು ನಡೆಸುವ ವ್ಯಾಪಾರಕ್ಕೆ ಅಡ್ಡಿ ವ್ಯಕ್ತಪಡಿಸಿದರು. ಕಿರುಕುಳ ಕೊಡಲು ಆರಂಭಿಸಿದರು. ಹಾಗಾಗಿ ಬಂಜಾರ ಸಮುದಾಯದವರು ವಿವಿಧೆಡೆ ವಲಸೆ ಹೋಗಲು ಆರಂಭಿಸಿದರು ಎಂದು ಹೇಳಿದರು.

ಗುಲ್ಬರ್ಗ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಗೊರುಶ್ರೀರಾಮುಲು ಅಧ್ಯಕ್ಷತೆವಹಿಸಿ ಮಾತನಾಡುತ್ತಾ, ಸರ್ಕಾರ ನೀಡುವ ಸೌಲಭ್ಯಗಳನ್ನುಪಡೆದುಕೊಂಡು ಬಂಜಾರಾ ಸಮುದಾಯದ ಜನ ಅಭಿವೃದ್ಧಿಯಾಗಬೇಕು. ಭಾಷೆ, ಸಂಸ್ಕೃತಿ ಉಳಿಸಲು ಬಂಜಾರಾ ಅಕಾಡೆಮಿ ಕೆಲಸ ಮಾಡುತ್ತಿದೆ. ಗುಲ್ಬರ್ಗ ವಿಶ್ವವಿದ್ಯಾಲಯವೂ ಸಹ ಸರ್ಕಾರದ ಗಮನಕ್ಕೆ ತರುವ ಕೆಲಸ ಮಾಡುತ್ತದೆ ಎಂದರು.

ರಾಜೇಂದ್ರ ಯರನಾಳ ಮಾತನಾಡಿ, ಬಂಜಾರರ ಸಂಸ್ಕೃತಿ ಶ್ರೀಮಂತವಾಗಿದೆ. ಭರತನಾಟ್ಯ, ಯಕ್ಷಗಾನದಂತಹ ನೃತ್ಯಗಳು ವಿಶ್ವಮಟ್ಟದಲ್ಲಿ ಪ್ರಸಿದ್ಧಿ ಹೊಂದಿದೆ. ಆದರೆ ಬಂಜಾರ ನೃತ್ಯಕ್ಕೆ ಯಾವುದೇ ಪ್ರಾಧಾನ್ಯತೆ ಇಲ್ಲಿದಂತಾಗಿದೆ. ಕೇವಲ ಕಾರ್ಯಕ್ರಮಗಳಲ್ಲಿ ಸಮಾರಂಭಗಳಲ್ಲಿಮಾತ್ರ ಬಂಜಾರ ನೃತ್ಯ ಸೀಮಿತಗೊಂಡಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಶಿಕ್ಷಕ ರಾಜೇಂದ್ರ ರಾಠೋಡ ಪ್ರಾರ್ಥಿಸಿದರು. ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಸಂಪನ್ಮೂಲ ವ್ಯಕ್ತಿಗಳ ಸಂಘ, ಬೆಂಗಳೂರು ರಾಜ್ಯ ಖಜಾಂಚಿ ಲಕ್ಷ್ಮಣ ರಾಠೋಡ ಸ್ವಾಗತಿಸಿದರು. ಹಿರಿಯ ಪ್ರಾಧ್ಯಾಪಕ ರಮೇಶ ರಾಠೋಡ ಪ್ರಾಸ್ತಾವಿಕವಾಗಿ ಮಾತನಾಡಿದರು.  ರವಿ ನಾಯಕ ನಿರೂಪಣೆ ಮಾಡಿದರು.

ಕಾರ್ಯಕ್ರಮದಲ್ಲಿ, ಸಂತೋಷ ಪವಾರ, ವಿಜಯಕುಮಾರ ರಾಠೋಡ, ಸಂತೋಷ ರಾಠೋಡ, ಸುನೀಲ್ ರಾಠೋಡ, ಗಣೇಶ ರಾಠೋಡ, ಸೀಮಾ ಎಸ್. ಜಾಧವ, ಅಣ್ಣಾರಾಯ ಎಸ್. ರಾಠೋಡ ಸೇರಿದಂತೆ ಬಂಜಾರಾ ಸಮಾಜದ ಮುಖಂಡರು ಉಪಸ್ಥಿತರಿದ್ದರು.

ಸುದ್ದಿ ಬರೆೆದವರು

ರಾಮಲಿಂಗ್ ಚಿನ್ನಾ ರಾಠೋಡ್

ಮೊಬೈಲ್ ನಂಬರ್ 9731491393

Banjara State level seminar

Leave a Comment