ಕರ್ನಾಟಕ ರಾಜ್ಯದ ಬಿಜೆಪಿ ಕಂಡ ಅಗ್ರಗಣ್ಯ ನಾಯಕ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಮುನ್ನ ಭಾವುಕರಾಗುತ್ತಲೇ ವಿದಾಯ ಭಾಷಣ ಮಾಡಿದದರು.

ಬಿಜೆಪಿ ಪಕ್ಷ ಸಂಘಟನೆ ಮತ್ತು ತಮ್ಮ ರಾಜಕೀಯ ಇತಿಹಾಸದ ಬಗ್ಗೆ ಮೆಲುಕು ಹಾಕುತ್ತಾ, ಭಾಷಣದ ಮಧ್ಯೆ ಮಧ್ಯೆ ಬಿ.ಎಸ್. ಯಡಿಯೂರಪ್ಪನವರು ಗದ್ಗತಿರಾಗುತ್ತಿದ್ದರು.ಆರಂಭಿಕ ಕಾಲದಿಂದ ಬಿಜೆಪಿ ಪಕ್ಷವನ್ನು ಕಟ್ಟಿದ ಬಗೆಯ ಕುರಿತು ಸವಿಸ್ತಾರವಾಗಿ ಮಾತನಾಡಿದರು.

ಒಂದು ಕಾಲದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಕೇಂದ್ರದಲ್ಲಿ ಸಚಿವನಾಗೋಕೆ ಹೇಳಿದ್ದರು. ಆದರೆ ನಾನು ಅವರಿಗೆ ಕರ್ನಾಟಕದಲ್ಲಿ ಪಕ್ಷ ಕಟ್ಟಬೇಕಿದೆ. ಯಾವುದೇ ಕಾರಣಕ್ಕೂ ನಾನು ದೆಹಲಿಗೆ ಬರುವುದಿಲ್ಲ ಎಂದು ಹೇಳಿ ಪಕ್ಷ ಸಂಘಟನೆಯಲ್ಲಿ ತೊಡಗಿದೆ ಎಂದರು.

ಬಸವ ಕಲ್ಯಾಣ ಶಿವಮೊಗ್ಗ ಪಾದಯಾತ್ರೆ ಮೂಲಕ ಪಕ್ಷ ಸಂಘಟನೆ ಮಾಡಿದೆವು. ವಸಂತ ಬಂಗೇರಿ ಬಿಟ್ಟು ಹೋದಾಗ ಒಬ್ಬನೇ ವಿಧಾನಸಭೆಯಲ್ಲಿ ಹೋರಾಟ ಮಾಡಿದ್ದೇನೆ.  ಮಂಡ್ಯದಲ್ಲಿ ಹುಟ್ಟಿ ಶಿಕಾರಿಪುರದಲ್ಲಿ ಸಾಮಾಜಿಕ ಕಾರ್ಯ ಆರಂಭ ಮಾಡಿದೆ. ನನ್ನ ಮೇಲೆ ಮಾರಾಣಾಂತಿಕ ಹಲ್ಲೆ ನಡೆದಿತ್ತು. ಆಗ ಬದುಕುವುದೇ ಕಷ್ಟ ಎಂಬಂತಿತ್ತು. ರೈತಪರ, ದಲಿತಪರ ಹೋರಾಟ ಮಾಡಿದೆ. ನನ್ನ ಕಾರ್ಯಕ್ಕೆ ರಾಷ್ಟ್ರೀಯ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದ್ದರಷ್ಟೇ ಅಲ್ಲ, ರಾಜ್ಯದಲ್ಲಿ ಪಕ್ಷವನ್ನು ಬಲಿಷ್ಟವಾಗಿ ಮಾಡಿ ಆಧಿಕಾರಕ್ಕೆ ತಂದಿದ್ದರಿಂದಲೇ ತನ್ನನ್ನು ಮುಖ್ಯಮಂತ್ರಿ ಸ್ಥಾನ ಸಿಕ್ಕಿದೆ ಎಂದರು.

75 ವರ್ಷ ದಾಟಿದ್ದೇನೆಂದು ಅಧಿಕಾರದಿಂದ ಇಳಿಯುವಂತೆ ಕೇಂದ್ರದ ನಾಯಕರು ನನಗೆ ಹೇಳಿಲ್ಲ. ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ 75 ವರ್ಷ ದಾಟಿದವರಿಗೆ ಯಾರಿಗೂ ರಾಜಕೀಯದಲ್ಲಿ ಅವಕಾಶ ಕೊಟ್ಟಿಲ್ಲ ಯುವಕರಿಗೆ ಅವಕಾಶ ಕೊಡಬೇಕೆಂಬ ಅವರ ಉದ್ದೇಶವಾಗಿದೆ. ಆದರೂ ಸಹ ನನಗೆ ನರೇಂದ್ರ ಮೋದಿ ಹಾಗೂ ಅಮಿತ್ ಶಾರವರು ಅವಕಾಶ ಕೊಟ್ಟಿದ್ದಾರೆ. ಅವರ ಆಶೀರ್ವಾದದಿಂದಲೇ ಸಾಧನೆ ಮಾಡಿದ್ದೇನೆ ಎಂದರು.

ಜೆಡಿಎಸ್ ಜೊತೆ ಅನಿವಾರ್ಯವಾಗಿ ಸಮ್ಮಿಶ್ರ ಸರ್ಕಾರ ಮಾಡಲಾಯಿತು. ಆದರೆ ಒಪ್ಪಂದದಂತೆ ನಡೆಯದ ಕಾರಣ ನಾನು ಸಿಎಂ ಸ್ಥಾನ ಪಡೆಯದೆ ಪಕ್ಷ ಸಂಘಟನೆ ಮಾಡಿದೆ. ನಮ್ಮದೇ ಕೆಲವು ತಪ್ಪುಗಳಿಂದ ಕಳೆದ ಸಲ ಬಹುಮತ ಪಡೆಯಕ್ಕಾಗಲಿಲ್ಲ. ನಂತರ ಎಲ್ಲರ ಸಹಕಾರದಿಂದ ಅಧಿಕಾರಕ್ಕೆ ಬರುವಂತಾಯಿತು. ತನಗೆ ಬಂದ ಹಲವಾರು ಅಗ್ನಿ ಪರೀಕ್ಷೆಗಳನ್ನು ಎಲ್ಲರ ಸಹಕಾರದಿಂದ ಎದುರಿಸಿದ್ದೇನೆ ಎಂದರು.

ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಕೇಂದ್ರದಿಂದ ಯಾವುದೇ ಒತ್ತಡ ಬಂದಿಲ್ಲ. ಎರಡು ತಿಂಗಳ ಹಿಂದೆಯೇ ನಾನೇ ರಾಜೀನಾಮೆ ನೀಡಲು ಉದ್ದೇಶಿಸಿದ್ದೆ. ಸರ್ಕಾರಕ್ಕೆ ಎರಡು ವರ್ಷ ತುಂಬಿದ್ದರಿಂದ ಸ್ವಯಂ ಪ್ರೇರಣೆಯಿಂದ ರಾಜೀನಾಮೆ ನೀಡುವುದು ಸರಿ ಎಂದು ಆ ದಿನವನ್ನು ಆಯ್ಕೆ ಮಾಡಿದ್ದೆ. ರಾಜ್ಯಪಾಲರು ರಾಜೀನಾಮೆ ಪತ್ರವನ್ನು ಅಂಗೀಕರಿಸಿದ್ದಾರೆ. 4 ಬಾರಿ ಮುಖ್ಯಮಂತ್ರಿಯಾಗಿ ಕೆಲಸ ಮಾಡಲು ರಾಜ್ಯದ ಜನ ಅವಕಾಶ ನೀಡಿದ್ದಾರೆ. ಅದಕ್ಕೆ ಋಣಿಯಾಗಿದ್ದೇನೆ ಎಂದರು.

ರಾಜ್ಯ ರಾಜಕೀಯ ಕ್ಷೇತ್ರದಲ್ಲಿ ರಾಜಾಹುಲಿಯಂತೆ ಆರ್ಭಟಿಸುತ್ತಿದ್ದ ಬಿ.ಎಸ್. ಯಡಿಯೂರಪ್ಪ ಅವರ ಯುಗ ಈಗ ಅಂತ್ಯಗೊಂಡಿದೆ. ಮುಂದಿನ ಮುಖ್ಯಮಂತ್ರಿ ಯಾರೆಂದು ಇನ್ನೂ ನಿರ್ಧಾರವಾಗಿಲ್ಲ. ಮುಖ್ಯಮಂತ್ರಿ ಸ್ಥಾನಕ್ಕಾಗಿ ತೆರೆಮರೆಯಲ್ಲಿ ಭಾರಿ ಪೈಪೋಟಿ ನಡೆಯುತ್ತಿದೆ. ಇತ್ತ ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್. ವೈ ರಾಜೀನಾಮೆ ನೀಡಿದ ಕೂಡಲೇ ಅತ್ತ ದೆಹಲಿಯಲ್ಲಿ ಮುಂದಿನ ಸಿಎಂ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದೆ.

ಯಡಿಯೂರಪ್ಪನವರ ಅಭಿಮಾನಿಗಳಇಗೆ ಇಂದು ನಿಜಕ್ಕೂ ದುಃಖಧ ದಿನವೇ ಎನ್ನಬಹುದು. 4 ಬಾರಿ ಕರ್ನಾಟಕದ ಸಿಎಂ ಆದರೂ ಒಮ್ಮೆ ಕೂಡ ಅವರು ಅಧಿಕಾರಾವಧಿ ಪೂರ್ಣಗೊಳಿಸಲಿಲ್ಲ. ಹೀಗಾಗಿ ಅವರ ಅನುಯಾಯಿಗಳು ಅಭಿಮಾನಿಗಳು ಅತ್ಯಂತ ಭಾವುಕರಾಗಿದ್ದಾರೆ.

Leave a Reply

Your email address will not be published. Required fields are marked *