ಎಪಿಎಂಸಿ ಮಾರುಕಟ್ಟೆಯನ್ನು (APMC is open until 12 noon) ಬೆಳಗ್ಗೆ 6 ರಿಂದ 12ರವರೆಗೆ ತೆರೆಯಲು ಅವಕಾಶ ಕಲ್ಪಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ, ಕೊರೋನಾ ಕರ್ಫ್ಯೂ ಹಿನ್ನೆಲೆಯಲ್ಲಿ ತೀವ್ರ ಸಂಕಷ್ಟಕ್ಕೆ ಈಡಾಗಿದ್ದ ರೈತರ ನೋವಿಗೆ ರಾಜ್ಯ ಸರ್ಕಾರ ಕೊನೆಗೂ ಸ್ಪಂದಿಸಿದೆ.
ಬೆಳಗ್ಗೆ ನಿಗದಿಪಡಿಸಿದ ನಾಲ್ಕು ಗಂಟೆಗಳಲ್ಲಿಯೇ ರೈತರು ವ್ಯಾಪಾರ ವಹಿವಾಟು ಮುಗಿಸಿಕೊಂಡು ಮನೆಗೆ ಹೋಗಬೇಕಿತ್ತು. ದಲ್ಲಾಳಿಗಳು ರೈತರ ಉತ್ಪನ್ನ ಖರೀದಿಸಲು ಮುಂದೆ ಬರದೆ ಇರುವುದರಿಂದ ರೈತರು ದಲ್ಲಾಳಿಗಳು ಕೇಳಿದ ಬೆಲೆಗೆ ಕೊಟ್ಟು ಹೋಗುವಂತಾಗಿತ್ತು. ಕೆಲವು ಸಲ ಉತ್ಪನ್ನ ಖರೀದಿಯಾಗದೆ ಉಳಿದುಕೊಂಡರೆ ವಾಪಸ್ಸು ತೆಗೆದುಕೊಂಡು ಹೋಗದೆ ರಸ್ತೆ ಮೇಲೆ ಎಸೆಯುವಂತಹ ಸಂಕಷ್ಟಕ್ಕೆ ಸಿಲುಕಿದ್ದರು. ಈಗ ಬೆಳಗ್ಗೆ 6 ರಿಂದ 12 ಗಂಟೆಯವರೆಗೆ ಎಪಿಎಂಸಿ ತೆರೆಯಲು ಅವಕಾಶ ನೀಡಿದ್ದರಿಂದ ರೈತರು ಅಲ್ಪ ನಿಟ್ಟುಸಿರು ಬಿಟ್ಟಿದ್ದಾರೆ.
ಅಷ್ಟೇ ಅಲ್ಲ ತರಕಾರಿ ಮತ್ತು ಹಣ್ಣು ಮಾರಾಟ ಮಳಿಗೆಗಳನ್ನು ತೆರೆಯಲು ಅವಕಾಶ ನೀಡದೆ ಇದ್ದುದ್ದರಿಂದ ವರ್ತಕರು ಎಪಿಎಂಸಿಗಳ ಕಡೆ ಬರುತ್ತಿರಲಿಲ್ಲ. ವರ್ತಕರು ಖರೀದಿಗೆ ಬಾರದೆ ಇರುವುದರಿಂದ ರೈತರು ವಾಪಸ್ಸು ತೆಗೆದುಕೊಂಡು ಹೋಗದೆ, ಇನ್ನೂ ಕೆಲವು ರೈತರು ಹಾಕಿದ್ದ ಕೂಲಿಯೂ ಸಿಗುವುದಿಲ್ಲವೆಂದು ಹೊಲದಲ್ಲಿಯೇ ಬೆಳೆ ಹರಗುತ್ತಿದ್ದರು. ಇದರಿಂದಾಗಿ ಸಾಕಷ್ಟು ಹಾನಿ ಅನುಭವಿಸುತ್ತಿದ್ದರು.
. ಎಪಿಎಂಸಿ ಮಾರುಕಟ್ಟೆಯನ್ನು ಬೆಳಗ್ಗೆ 6 ರಿಂದ 12ರವರೆಗೆ ತೆರೆಯುವ ಆದೇಶ ಮೇ 2ರ ಭಾನುವಾರದಿಂದ ಅನ್ವಯವಾಗುತ್ತದೆ ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ ಪ್ರಸಾದ ತಿಳಿಸಿದ್ದಾರೆ.
ಖರೀದಿ ವೇಳೆ ಮಾರುಕಟ್ಟೆಯಲ್ಲಿ ಆಗುತ್ತಿರುವ ನೂಕುನುಗ್ಗಲು, ಜನಸಂದಣಿ ತಪ್ಪಿಸಲು ಈ ಉಪಕ್ರಮ ಕೈಗೊಳ್ಳಲಾಗಿದೆ. ವಾರದ ಸಂತೆ ಸೇರಿದಂತೆ ಎಲ್ಲಾ ರೀತಿಯ ಸಂತೆಗಳನ್ನು ನಿರ್ಬಂಧಿಸಲಾಗಿದೆ. ಅದರ ಬದಲಾಗಿ ಹಾಪ್ ಕಾಮ್ಸ್, ಹಾಲಿನ ಬೂತ್ ಗಳು, ತಳ್ಳುಗಾಡಿಗಳ ಮೂಲಕ ತರಕಾರಿ, ಹಣ್ಣು ಮಾರಾಟಮಾಡುವವರು ಹಾಗೂ ದಬಾರಿ ಬೆಲೆಗೆ ಮಾರದೆ ಮಾರುಕಟ್ಟೆ ದರದಲ್ಲಿ ವ್ಯಾಪಾರ ಮಾಡುವವರಿಗೆ ಬೆಳಗ್ಗೆ 6 ರಿಂದ ಸಾಯಂಕಾಲ 6ರವರೆಗ ಅವಕಾಶ ನೀಡಲಾಗಿದೆ.