ತೋಟಗಾರಿಕಾ ಕ್ಷೇತ್ರದಲ್ಲಿ ಇಸ್ರೇಲ್ ತಂತ್ರಜ್ಞಾನಗಳ ಅಳವಡಿಕೆಗಾಗಿ ಇಂಡೋ-ಇಸ್ರೇಲ್ ಕೃಷಿ ಯೋಜನೆಯಡಿಯಲ್ಲಿ ರಾಜ್ಯದಲ್ಲಿ ಸ್ಥಾಪಿಸಿರುವ ಮೂರು ಉತ್ಕೃಷ್ಟತಾ (3 Agricultural Excellence centre) ಕೇಂದ್ರಗಳನ್ನು ಸಿಎಂ ಯಡಿಯೂರಪ್ಪ ಮತ್ತು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಉದ್ಘಾಟಿಸಿದರು.

ಇಸ್ರೇಲ್ ಮತ್ತು ಭಾರತದ ನಡುವೆ ಕೃಷಿ ಕ್ಷೇತ್ರದಲ್ಲಿ ನಿರಂತರವಾಗಿ ಬೆಳೆಯುತ್ತಿರುವ ಪಾಲುದಾರಿಕೆ ಮುಂದುವರಿಸುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ  ಇಂಡೋ-ಇಸ್ರೇಲ್ ಸೆಂಟರ್ ಆಫ್ ಎಕ್ಸಲೆನ್ಸ್ ಮೂರು ಕೇಂದ್ರಗಳನ್ನು ಉದ್ಘಾಟಿಸಲಾಯಿತು. ಈ ಕೇಂದ್ರಗಳು ಇಂಡೋ-ಇಸ್ರೇಲ್ ಕೃಷಿ ಯೋಜನೆಯ ಒಂದು ಭಾಗವಾಗಿದ್ದು, ಬಾಗಲಕೋಟೆಯಲ್ಲಿ ದಾಳೆಂಬ ಉತ್ಕೃಷ್ಟ ಕೇಂದ್ರ, ಕೋಲಾರದಲ್ಲಿ ಮಾವು ಉತ್ಕೃಷ್ಟತಾ ಕೇಂದ್ರ ಮತ್ತು ಧಾರವಾಡದಲ್ಲಿ ತರಕಾರಿ ಬೆಳೆಗಳ ಉತ್ಕೃಷ್ಟತಾ  ಕೇಂದ್ರಗಳು ಆರಂಭವಾಗಲಿವೆ.

ಕೋಲಾರದಲ್ಲಿ ಮಾವು ಉತ್ಕೃಷ್ಟ ಕೇಂದ್ರದ ಸ್ಥಾಪನೆಗಾಗಿ 1.98 ಕೋಟಿ ರೂಪಾಯಿ ಕೇಂದ್ರ ಸರ್ಕಾರ ಗೂ 3.60 ಕೋಟಿ ರೂಪಾಯಿ ರಾಜ್ಯ ಸರ್ಕಾರ ಒದಗಿಸಿದೆ. ಬಾಗಲಕೋಟೆಯಲ್ಲಿ ದಾಳಿಂಬೆ ಉತ್ಕೃಷ್ಟ ಕೇಂದ್ರ ಸ್ಥಾಪನೆಗೆ ಕೇಂದ್ರ ಸರ್ಕಾರ 3.43 ಕೋಟಿ ರೂಪಾಯಿ ಹಾಗೂ ರಾಜ್ಯ ಸರ್ಕಾರ 1.56 ಕೋಟಿ ರೂಪಾಯಿ ನೀಡಿದೆ. ಅದೇ ರೀತಿ ಧಾರವಾಡದಲ್ಲಿ ತರಕಾರಿ ಬೆಳೆಗಳ ಉತ್ಕೃಷ್ಟ ಕೇಂದ್ರ ಸ್ಥಾಪನೆಗೆ ಕೇಂದ್ರ ಸರ್ಕಾರವು 5 ಕೋಟಿ ರೂಪಾಯಿ ಮತ್ತು ರಾಜ್ಯ ಸರ್ಕಾರವು 2.60 ಕೋಟಿ ರೂಪಾಯಿ ಒದಗಿಸಿದೆ.

ರಾಜ್ಯದಲ್ಲಿರುವ ಈ ಮೂರು ಉತ್ಕೃಷ್ಟತಾ ಕೇಂದ್ರಗಳು ರೈತರಿಗೆ ಜ್ಞಾನವನ್ನು ವೃದ್ಧಿಸುವ, ಉತ್ತಮ ಕೃಷಿ ಪದ್ಧತಿಗಳ್ನು ಪ್ರಾತ್ಯಕ್ಷಿಸುವ ಮತ್ತು ರೈತರಿಗೆ ತರಬೇತಿ ನೀಡುವ ಒಂದು ಅತ್ಯಾಧುನಿಕ ಕೃಷಿ ಕೇಂದ್ರಗಳಾಗಲಿವೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉದ್ಘಾಟನೆಯ ನಂತರ ಹೇಳಿದರು.

ರೈತರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಇಂಡೋ-ಇಸ್ರೇಲ್ ಕೃಷಿ ಯೋಜನೆಯಡಿಲ್ಲಿರುವ ಈ ಉತ್ಕೃಷ್ಟತಾ ಕೇಂದ್ರಗಳು ನೆರವಾಗಲಿವೆ.

ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್, “ಈ ಕೇಂದ್ರಗಳು ಕರ್ನಾಟಕದ ಕೃಷಿಕ ಸಮುದಾಯಕ್ಕೆ ಇತ್ತೀಚಿನ ಇಸ್ರೇಲಿ ತಂತ್ರಜ್ಞಾನಗಳು ಲಭ್ಯವಾಗಲು ಸಹಾಯ ಮಾಡುತ್ತವೆ ಮತ್ತು ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ರೈತರ ಆದಾಯವನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ” ಎಂದರು.  ಈ ಕೇಂದ್ರಗಳು ವಾರ್ಷಿಕವಾಗಿ 50,000 ಕಸಿ ಉತ್ಪಾದನೆ ಮತ್ತು 25 ಲಕ್ಷ ತರಕಾರಿ ಸಸಿಗಳ ಉತ್ಪಾದನೆಯ ಸಾಮರ್ಥ್ಯವನ್ನು ಹೊಂದಿವೆ. ತೋಟಗಾರಿಕೆಯಲ್ಲಿ ಆಧುನಿಕ ಕೃಷಿ ಪದ್ಧತಿಗಳ ಬಗ್ಗೆ ಜ್ಞಾನ ಪಡೆಯಲು ಸುಮಾರು 20,000 ರೈತರು ಈ ಕೇಂದ್ರಗಳಿಗೆ ಭೇಟಿ ನೀಡಿದ್ದಾರೆ  ಎಂದರು.

ಭಾರತದಲ್ಲಿನ ಇಸ್ರೇಲ್ ರಾಯಭಾರಿ ಡಾ.ರಾನ್ ಮಲ್ಕಾ ಅವರು ಮಾತನಾಡಿ, “ಇಂಡೋ-ಇಸ್ರೇಲಿ ಸಹಭಾಗಿತ್ವದಲ್ಲಿ ನಾವು ಮೂರು ವಿಭಿನ್ನ ಕೇಂದ್ರಗಳನ್ನು ಉದ್ಘಾಟಿಸಿದ್ದೇವೆ. ಇದು ರಾಜ್ಯದ ಕೃಷಿ ಕ್ಷೇತ್ರದ ಅಭಿವೃದ್ಧಿಯಲ್ಲಿ ಒಂದು ಮೈಲಿಗಲ್ಲಾಗಿದ್ದು, ಸ್ಥಳೀಯ ರೈತರಿಗೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪರ್ಧೆಯ ಅವಕಾಶವನ್ನು ನೀಡುತ್ತದೆ ಎಂದರು.

ಉದ್ಘಾಟನಾ ಸಮಾರಂಭದಲ್ಲಿ ಭಾರತ ಸರ್ಕಾರದ ಕೃಷಿ, ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಸಂಜಯ್ ಅಗರ್ವಾಲ್, ಇಸ್ರೇಲಿ ವಿದೇಶಾಂಗ ಸಚಿವಾಲಯದ ಹಿರಿಯ ಅಧಿಕಾರಿಗಳು, ಭಾರತ ಸರ್ಕಾರದ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯ ಮತ್ತು ಕರ್ನಾಟಕ ಸರ್ಕಾರದ ಅಧಿಕಾರಿಗಳು ಭಾಗವಹಿಸಿದ್ದರು. ವರ್ಚುವಲ್ ಸಮಾರಂಭಕ್ಕೆ ಎಲ್ಲಾ ರಾಜ್ಯ ತೋಟಗಾರಿಕೆ ಮಿಷನ್‌ಗಳ ಹಿರಿಯ ಅಧಿಕಾರಿಗಳು ಇದ್ದರು.

Leave a Reply

Your email address will not be published. Required fields are marked *