Totagarike mela at Bagalkote ಪ್ರತಿವರ್ಷದಂತೆ ಈ ವರ್ಷವೂ ಸಹ ಬಾಗಲಕೋಟೆಯಲ್ಲಿ ಡಿಸೆಂಬರ್ 25 ರಿಂದ ಡಿಸೆಂಬರ್ 27 ರವರೆಗೆ ಮೂರು ದಿನಗಳ ಕಾಲ ತೋಟಗಾರಿಕೆ ಮೇಳ ಜರುಗಲಿದೆ.
ಈ ವರ್ಷ ತೋಟಗಾರಿಕಾ ಮೇಳವನ್ನು ಮಹಿಳಾ ಸಬಲೀಕರಣಕ್ಕಾಗಿ ತೋಟಗಾರಿಕೆ ಎಂಬ ಆಶಯದೊಂದಿಗೆ ನಡೆಸಲಾಗುವುದು. ಕೊರೋನಾ ಕಾರಣದಿಂದಾಗಿ ಈ ಬಾರಿ ಸೀಮಿತ ಪ್ರಮಾಣದಲ್ಲಿ ಆಫ್ಲೈನ್ ಉಳಿದೆಲ್ಲಾ ಆನ್ಲೈನ್ ಮೂಲಕವೇ ತೋಟಗಾರಿಕಾ ಮೇಳ ಆಯೋಜಿಸಲಾಗುವುದು. ತೋಟಗಾರಿಕೆ ಮೇಳವನ್ನು ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ರವರು ಆನ್ಲೈನ್ ಮೂಲಕ ಚಾಲನೆ ನೀಡಲಿದ್ದಾರೆ.
ಮೂರು ದಿನಗಳ ಕಾಲ ರೈತರ ಆದಾಯ ದ್ವಿಗುಣ, ತೋಟಗಾರಿಕೆ ಬೆಳೆಗಳಿಗೆ ಉಂಟಾಗುವ ಕೀಟಬಾಧೆ ತಡೆಗಟ್ಟುವುದು ಸೇರಿ ಅನೇಕ ವಿಚಾರಗಳ ಮೇಲೆ ಬೆಳಕು ಚೆಲ್ಲಲಾಗುತ್ದೆ. ಮೇಳದಲ್ಲಿ ತರಕಾರಿ, ಹಣ್ಣಿನ ಬೆಳೆಗಳ ಪ್ರಾತ್ಯಕ್ಷಿಕೆ, ಪ್ರದರ್ಶನ ನಡೆಯಲಿದೆ. ಕೋವಿಡ್ ಹಿನ್ನೆಲೆಯಲ್ಲಿ ದಿನಕ್ಕೆ 600 ಜನ ರೈತರ ಪ್ರವೇಶಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗುತ್ತಿದೆ. ಮಹಿಳಾ ಸಬಲೀಕರಣದ ಶೀರ್ಷಿಕೆಯಡಿ ಮೇಳ ಆಯೋಜಿಸಿರುವುದರಿಂದ ಏಳು ಜನ ಮಹಿಳೆಯರನ್ನು ಸನ್ಮಾನಿಸಲಾಗುವುದು. ಮೂರು ದಿನಗಳಲ್ಲಿ ಒಟ್ಟು 24 ಜನ ಪ್ರಗತಿಪರ ರೈತರನ್ನು ಸನ್ಮಾನಿಸಲಾಗುವುದು.
ಇದನ್ನೂ ಓದಿ ನಿಮ್ಮ ಜಮೀನು ಯಾರಿಂದ ಯಾರಿಗೆ ವರ್ಗಾವಣೆಯಾಗಿದೆ? ಚೆಕ್ ಮಾಡಿ
ಮೂರು ದಿನಗಳ ಕಾಲ ನಡೆಯುವ ಮೇಳದಲ್ಲಿ ಮೊದಲ ದಿನವಾದ ಡಿಸೆಂಬರ್ 25 ರಂದು ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಬಳ್ಳಾರಿ, ವಿಜಯಪುರ, ಕೊಪ್ಪಳ ಮತ್ತು ವಿಜಯಪುರ ಜಿಲ್ಲೆಯ ರೈತರನ್ನು ಸನ್ಮಾನಿಸಲಾಗುವುದು. ಡಿಸೆಂಬರ್ 26 ರಂದು ಬಾಗಲಕೋಟೆ, ಹಾವೇರಿ, ಗದಗ, ಉತ್ತರಕನ್ನಡ, ತುಮಕೂರು, ರಾಮನಗರ, ಬೆಳಗಾವಿ, ಧಾರವಾಡ ಜಿಲ್ಲೆಯ ರೈತರನ್ನು ಸನ್ಮಾನಿಸಲಾಗುವುದು. ಅದೇ ರೀತಿ ಡಿಸೆಂಬರ್ 27 ರಂದು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಚಾಮರಾಜನಗರ, ಕೋಲಾರ, ಹಾಸನ, ಮಂಡ್ಯ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ರೈತರನ್ನು ಸನ್ಮಾನಿಸಾಲಗುವುದು.
ತೋಟಗಾರಿಕೆ ಮೇಳಕ್ಕೆ ಭಾಗವಹಿಸದ ರೈತರು ಮನೆಯಲ್ಲಿಯೇ ಕುಳಿತು ಮೊಬೈಲ್ ನಲ್ಲಿ ನೋಡಬಹುದು.
https://uhsbagalkot.karnataka.gov.in/info-2/Totagarike+Mela+2021+Live+on+Youtube+(Click+here)/kn
ಈ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಸಾಕು, ಡಿಸೆಂಬರ್ 25 ರಂದು ಬೆಳಗ್ಗೆ 9 ಗಂಟೆಯಿಂದ ಮೂರು ದಿನಗಳ ಕಾಲ ನಡೆಯುವ ತೋಟಗಾರಿಕೆ ಮೇಳದ ಎಲ್ಲಾ ಕಾರ್ಯಕ್ರಮಗಳನ್ನು ಮನೆಯಲ್ಲಿಯೇ ಕುಳಿತು ನೇರವಾಗಿ ವೀಕ್ಷಿಸಬಹುದು. ತೋಟಗಾರಿಕೆ ಮೇಳ ಕುರಿತು ಮಾಹಿತಿ ಪಡೆಯಲು ರೈತರು ಉಚಿತ ಸಹಾಯವಾಣಿ 1800 425 7910 ಗೆ ಕರೆ ಮಾಡಬಹುದು. ಅಥವಾ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟೆ ವೆಬ್ಸೈಟ್ ಲಿಂಕ್
https://uhsbagalkot.karnataka.gov.in/
ಮೇಲೆ ಕ್ಲಿಕ್ ಮಾಡಿ ಮಾಹಿತಿ ಪಡೆಯಬಹುದು.
Totagarike mela at Bagalkote ತೋಟಗಾರಿಕೆ ಮೇಳದ ವಿಶೇಷತೆ
ನವೀನ ಪದ್ಧತಿಯಲ್ಲಿ ಸುಸ್ಥಿರ ತರಕಾರಿ ಬೇಸಾಯ ಯಾವ ರೀತಿ ಮಾಡಬೇಕೆಂಬುದುರ ಕುರಿತು ಮಾಹಿತಿ ನೀಡಲಾಗುವುದು. ದೇಶೀ ಹಾಗೂ ವಿದೇಶಿ ತರಕಾರಿಗಳ ಪ್ರಾತ್ಯಕ್ಷಿಕೆ ಇರಲಿದೆ. ಪೌಷ್ಠಿಕ ಕೈತೋಟ, ಹೂವು ಹಾಗೂ ಹಣ್ಣಿನ ತೋಟದ ಬಗ್ಗೆ ಮಾಹಿತಿ ನೀಡಲಾಗುವುದು. ಸ್ವಯಂಚಾಲಿತ ನೀರಾವರಿ ವ್ಯವಸ್ಥೆ, ಜಾನುವಾರು ಮೇಳ, ರೈತರಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯಕ್ರಮಗಳು ಜರುಗಲಿವೆ.
ನೆರಳು ಮನೆಯಲ್ಲಿ ಬಾಳೆ ಮತ್ತು ಪೊದೆ ಮೆಣಸು ತಾಕುಗಳು, ರಾಸಾಯನಿಕ ಗೊಬ್ಬರಗಳು ಹಾಗೂ ಪೀಡೆನಾಶಕಗಳ ಬಗ್ಗೆ ಮಾಹಿತಿ ನೀಡಲಾಗುವುದು. ಕೃಷಿ ಯಂತ್ರೋಪಕರಣಗಳ ಪ್ರದರ್ಶನ ಇರಲಿದೆ. ಡ್ರ್ಯಾಗನ್ ಹಣ್ಣು, ಹಲಸು, ಅಂಜೂರ, ಸೀತಾಫಲ, ನೇರಳೆ, ಗೋಡಂಬಿ ಸೇರಿದಂತೆ ಇನ್ನಿತರ ತೋಟಗಾರಿಕೆ ಬೆಳೆಗಳ ಬಗ್ಗೆ ಮಾಹಿತಿ ನೀಡಲಾಗುವುದು. ಅಷ್ಟೇ ಅಲ್ಲ, ಔಷಧಿ ಮತ್ತು ಸುಗಂಧ ದ್ರವ್ಯ ಬೆಳೆಗಳ ಪ್ರದರ್ಶನ ಸಹ ಇರಲಿದೆ.