Monsoon rain alert ಮುಂಗಾರು ಮಳೆಗಾಗಿ ಕಾಯುತ್ತಿರುವ ರೈತರಿಗಿಲ್ಲಿದೆ ಸಂತಸದ ಸುದ್ದಿ. ರಾಜ್ಯಕ್ಕೆ ಮುಂಗಾರು ಈಗಾಗಲೇ ಪ್ರವೇಶವಾಗಿದೆ. ಇಂದಿನಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ.
ಹೌದು, ಗುರುವಾರ ಅಧಿಕೃತವಾಗಿ ಕೇರಳಕ್ಕೆ ಆಗಮಿಸಿದ ಮುಂಗಾರು ಎರಡು ದಿನದ ಬಳಿಕ ಕರ್ನಾಟಕದ ಗಡಿ ಪ್ರದೇಶ ಮಾಡಿದೆ. ಈಗಾಗಲೇ ಮಡಿಕೇರಿಹಾಗೂ ಕಾರವಾರದವರೆಗೆ ವ್ಯಾಪಿಸಿರುವ ಮುಂಗಾರು ಮಳೆ ಇನ್ನೆರೆಡು ದಿನಗಳಲ್ಲಿ ರಾಜ್ಯದ ಹಲವು ಪ್ರದೇಶಗಳಿಗೆ ಕಾಲಿಡಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಮುಂಗಾರು ಪ್ರವೇಶವಾಗಿರುವ ಹಿನ್ನೆಲೆಯಲ್ಲಿ ಮುಂದಿನ ಐದು ದಿನಗಳ ಕಾಲ ಕರಾವಳಿಯ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಹಾಗಾಗಿ ಈ ಜಿಲ್ಲೆಗಳಲ್ಲಿ ಯೆಲೋ ಅಲರ್ಟ್ ಎಚ್ಚರಿಕೆ ನೀಡಲಾಗಿದೆ.
ಮುಂದಿನ ಎರಡು ದಿನಗಳ ಕಾಲ ದಕ್ಷಿಣ ಒಳನಾಡಿನ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಮಳೆಯಾಗಲಿದೆ. ಜೂನ್ 13 ರಿಂದ 15 ರವರೆಗೆ ಮಳೆಯ ಪ್ರಮಾಣ ಹೆಚ್ಚಾಗಲಿದೆ. ಹೀಗಾಗಿ ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಹಾಗೂ ಕೊಡಗು ಜಿಲ್ಲೆಗಳಿಗೆ ಮೂರು ದಿನ ಯೆಲ್ಲೋ ಅಲರ್ಟ್ ನೀಡಲಾಗಿದೆ. ಇನ್ನೂಉತ್ತರ ಒಳನಾಡಿನಲ್ಲಿ ಮುಂದಿನ ಐದು ದಿನ ಸಾಧಾರಣ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಗಾಳಿಯು ಗಂಟೆಗೆ 40 ರಿಂದ 55 ಕಿ.ಮೀ ವೇಗದಲ್ಲಿ ಬೀಸುವ ಹಿನ್ನೆಲೆಯಲ್ಲಿ ಸಮುದ್ರದಲ್ಲಿ ಅಲೆಗಳು ಹೆಚ್ಚಾಗುವುದರಿಂದ ಮುಂದಿನ ಐದು ದಿನ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ಮುಂಗಾರು ಅವಧಿಯಲ್ಲಿ ಕರ್ನಾಟಕದಲ್ಲಿ ಸರಾಸಿ 83 ಸೆಂ.ಮೀ. ಮಳೆಯಾಗುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ. ಈ ಪೈಕಿ ಶೇ. 92 ರಿಂದ 96 ರಷ್ಟು ಮಳೆಯಾಗಲಿದೆ.
ಇದನ್ನೂ ಓದಿ : ನೀವು ನಿಂತಿರುವ ಜಮೀನಿನ ಮಾಲಿಕರು ಯಾರಿದ್ದಾರೆ? ಒಂದೇ ನಿಮಿಷದಲ್ಲಿ ಮೊಬೈಲ್ ನಲ್ಲೇ ಚೆಕ್ ಮಾಡಿ
ಜೂನ್ ಅವಧಿಯಲ್ಲಿ ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ವಾಡಿಕೆ ಪ್ರಮಾಣಕ್ಕಿಂತ ಸ್ವಲ್ಪ ಹೆಚ್ಚಿನ ಪ್ರಮಾಣ ಮಳೆಯಾಗಲಿದೆ.
Monsoon rain alert ಈ ವರ್ಷ ಮುಂಗಾರು ಬಿರುಸು ಕಡಿಮೆ ಕಾಣಿಸುತ್ತಿದೆ
ರಾಜ್ಯಕ್ಕೆ ಪ್ರವೇಶವಾಗಿರುವ ಮುಂಗಾರು ಅಷ್ಟೊಂದು ಬಿರುಸು ಕಾಣಿಸುತ್ತಿಲ್ಲ. ಹೀಗಾಗಿ ನಿರೀಕ್ಷಿತ ಮಳೆಯಾಗುವ ಸಾಧ್ಯತೆ ಕಡಿಮೆ ಕಾಣಿಸುತ್ತಿದೆ. ಈಗಾಗಲೇ ಜೂನ್ 11 ಆಗಿದ್ದು,ಆದರೂ ಸಹ ರಾಜ್ಯದ ವಿವಿಧ ಕಡೆ ಇನ್ನೂ ಮುಂಗಾರು ಮಳೆಯ ಒಂದು ಹನಿಯೂ ಉದುರಿಲ್ಲ. ಹಾಗಾಗಿ ಕೆಲವು ಕಡೆ ರೈತರು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ.
ಚಂಡಮಾರುತದ ಮತ್ತಷ್ಟು ಬಿರುಸು
ಅರಬ್ಬಿ ಸಮುದ್ರದಲ್ಲಿ ಕಾಣಿಸಿಕೊಂಡಿರುವ ಬಿಪರ್ ಜೋಯ್ ಚಂಡಮಾರುತ ಭಾನುವಾರ ಮತ್ತಷ್ಟು ತೀವ್ರತೆ ಪಡೆಯುವ ಸಾಧ್ಯತೆಯಿದೆ. ಮಾರುತವು ಉತ್ತರ ಮತ್ತು ಈಶಾನ್ಯ ದಿಕ್ಕಿನತ್ತ ಮುನ್ನುಗ್ಗುತ್ತಿದ್ದು, ಭಾನುವಾರ ಅಥವಾ ಸೋಮವಾರ ಗುಜರಾತ್ ನ ದಕ್ಷಿಣ ಭಾಗವನ್ನು ಸಮೀಪಿಸುವ ಸಾಧ್ಯತೆಯಿದೆ.
ಚಂಡಮಾರುತ ನಿಖರವಾಗಿ ಎಲ್ಲಿ ಅಪ್ಪಳಿಸಲಿದೆ ಎಂದು ಇನ್ನೂ ಖಚಿತಗೊಂಡಿಲ್ಲವಾದರೂ ಭಾರತದ ಕರಾವಳಿ ರಾಜ್ಯಗಳಾದ ಕರ್ನಾಟಕ, ಗೋವಾ, ಮಹಾರಾಷ್ಟ್ರ ಹಾಗೂ ಗುಜರಾತ್ ಗಳಲ್ಲಿ ಭಾರಿ ಬಿರುಗಾಳಿ ಸಹಿತ ಮಳೆಯ ಮುನ್ನೆಚ್ಚರಿಕೆ ನೀಡಲಾಗಿದೆ.
ಗುಜರಾತ್ ನ ವಲ್ಲದ್ ತಿಧಾಲ್ ಬೀಚ್ ಅನ್ನು ಜೂನ್ 14 ರವರೆಗೆ ಮುಚ್ಚಲಾಗಿದೆ. ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ. ಉಳಿದಂತೆ ದೇಶದ ಕರಾವಳಿ ರಾಜ್ಯಗಳ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ. ಜೊತೆಗೆ ಕೇರಳದ 8 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ನಿಮ್ಮ ಊರಿನಲ್ಲಿ ಮಳೆ ಯಾವಾಗ ಆಗಲಿದೆ? ಒಂದು ಕರೆ ಮಾಡಿ ತಿಳಿದುಕೊಳ್ಳಿ
ನಿಮ್ಮ ಊರಿನ ಸುತ್ತಮುತ್ತ ಮಳೆಯಾವಾಗ ಆಗುತ್ತದೆ ಎಂಬುದನ್ನು ತಿಳಿದುಕೊಳ್ಳಲು ವರುಣಮಿತ್ರ ಸಹಾಯವಾಣಿಗೆ ಕರೆ ಮಾಡಿದರೆ ಸಾಕು, ನಿಮ್ಮೂರಿನ ಸುತ್ತಮುತ್ತ ಯಾವಾಗ ಮಳೆಯಾಗುತ್ತದೆ? ಗಾಳಿಯ ದಿಕ್ಕು, ವೇಗ ಸೇರಿದಂತೆ ಹವಾಮಾನದ ವರದಿಯನ್ನು ನೀಡಲಾಗುವುದು. 9243345433 ವರುಣಮಿತ್ರ ಸಹಾಯವಾಣಿಗೆ ಕರೆ ಮಳೆಯಮಾಹಿತಿ ಪಡೆದುಕೊಳ್ಳಬಹುದು.