Farmer Krishi Yantradhare centre ಕೃಷಿ ಯಂತ್ರೋಪಕರಣಗಳನ್ನು ಖರೀದಿಸಲು ಸಾಧ್ಯವಾಗದ ಸಣ್ಣ, ಅತೀ ಸಣ್ಣ, ಮಧ್ಯಮ ವರ್ಗದ ರೈತರಿಗೆ ಸಹಾಯವಾಗಲೆಂದು ಸರ್ಕಾರವು ಕೃಷಿ ಯಂತ್ರಧಾರೆ ಯೋಜನೆಯನ್ನು 2014 ರಲ್ಲಿ ಆರಂಭಿಸಿದೆ. ಈ ಹಿಂದೆ ಕೃಷಿ ಇಲಾಖೆಯು ಕೃಷಿ ಯಂತ್ರೋಪಕರಣಗಳನ್ನು ರಿಯಾಯಿತಿ ದರದಲ್ಲಿ ರೈತರಿಗೆ ಒದಗಿಸುತ್ತಿತ್ತು.ಇದಕ್ಕೆ ಹೆಚ್ಚಿನ ಬಂಡವಾಳ ಅವಶ್ಯಕತೆಯಿತ್ತು. ಆದರೆ ಈಗ ಬಾಡಿಗೆ ರೂಪದಲ್ಲಿಯಂತ್ರೋಪಕರಣ ಪೂರೈಸಲಾಗುತ್ತಿದೆ. ಕೃಷಿ ಚಟುವಟಿಕೆಗೆ ಬೇಕಾಗುವ ಕೃಷಿಯಂತ್ರೋಪಕರಣಗಳು ಇಲ್ಲಿ ಸಿಗುತ್ತವೆ.
ಮುಂಗಾರು, ಹಿಂಗಾರು ಬೆಳೆಗಳು ಹಾಗೂ ರೈತರ ಜಮಿನು ಉಳುಮೆಗೆ ಕೃಷಿ ಯಂತ್ರೋಪಕರಣಗಳು ಬೇಕಾಗುತ್ತವೆ. ಖಾಸಗಿಯವರಿಗೆ ದುಬಾರಿ ಬೆಲೆ ಕೊಟ್ಟು ಕೃಷಿ ಯಂತ್ರೋಪಕರಣಗಳನ್ನು ಪಡೆಯುವುದರ ಬದಲು ಸರ್ಕಾರವೇ ರೈತರಿಗಾಗಿ ಕಡಿಮೆ ದರದಲ್ಲಿ ಕೃಷಿ ಯಂತ್ರೋಪಕರಣಗಳನ್ನು ನೀಡಲು ಮುಂದಾಗಿದೆ. ಇದಕ್ಕಾಗಿ ರಾಜ್ಯದ ಎಲ್ಲಾ ಹೋಬಳಿ ಕೇಂದ್ರಗಳಲ್ಲಿ ಕೃಷಿಯಂತ್ರ ಕೇಂದ್ರಗಳನ್ನು ಆರಂಭಿಸಲಾಗಿದೆ.
ಕೃಷಿಯಲ್ಲಿ ಉತ್ಪಾದನಾ ವೆಚ್ಚ ಹಾಗೂ ಕೂಲಿ ಕಾರ್ಮಿಕರ ವೆಚ್ಚವನ್ನುತಗ್ಗಿಸಿ ಕೃಷಿಯನ್ನು ಲಾಭದಾಯಕವನ್ನಾಗಿ ಮಾಡಲು ಈ ಯೋಜನೆಯನ್ನು ಆರಂಭಿಸಲಾಗಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ, ಇಂಡಿಯನ್ ಸೊಸೈಟಿು ಆಫ್ ಅಗ್ರಿಕಲ್ಚರ್ ಪ್ರೊಫೆಶನಲ್ ಸಂಸ್ಥೆ, ಮಹೀಂದ್ರಾ ಆ್ಯಂಡ್ ಮಹೀಂದ್ರಾ ಲಿಮಿಟೆಡ್, ಬೆಂಗಳೂರಿನ ವಿ.ಎಸ್.ಟಿ ಲಿಮಿಟೆಡ್, ಆರಾಧ್ಯ ಏಜೆನ್ಸಿ, ವರ್ಶಾ ಅಸೋಸಿಯೇಟ್ ಸಂಸ್ಥೆ ಸೇರಿದಂತೆ ಇನ್ನಿತರ ಸಂಸ್ಥೆಗಳಿಗೆ ಕೃಷಿ ಯಂತ್ರಧಾರೆ ಕೇಂದ್ರಗಳನ್ನು ನಡೆಸಲು ಸರ್ಕಾರ ಅನುಮತಿ ನೀಡಿದೆ. ಈಗ ರಾಜ್ಯದ ಎಲ್ಲಾ ಹೋಬಳಿ ಕೇಂದ್ರಗಳಲ್ಲಿಕೃಷಿ ಯಂತ್ರಧಾರೆ ಕೇಂದ್ರಗಳನ್ನು ತೆರೆಯಲಾಗಿದೆ.
ಇದನ್ನೂ ಓದಿ : ಯಾವ ಬೆಳೆಗೆ ಎಷ್ಟು ವಿಮೆ ಹಣ ಬರುತ್ತದೆ ? ಮೊಬೈಲ್ ನಲ್ಲೇ ಚೆಕ್ ಮಾಡಬೇಕೆ? ಇಲ್ಲಿದೆ ಮಾಹಿತಿ
ಸ್ಥಳೀಯವಾಗಿ ಲಭ್ಯವಾಗುವ ಬಾಡಿಗೆ ದರಕ್ಕಿಂತ ಕಡಿಮೆ ದರದಲ್ಲಿಕೃಷಿ ಬಳಕೆಯ ಯಂತ್ರೋಪಕರಣಗಳು ರೈತರಿಗೆ ಸಿಗಲಿದೆ. ಮಾಹಿತಿಯ ಕೊರತೆಯಿಂದಾಗಿ ಕೃಷಿ ಯಂತ್ರಧಾರೆಯ ಕೇಂದ್ರಗಳಿಂದ ಆರಂಭದಲ್ಲಿ ರೈತರು ಕೃಷಿಯಂತ್ರೋಪಕರಣಗಳನ್ನು ಪಡೆಯುತ್ತಿರಲಿಲ್ಲ. ಆದರೆ ಈಗ ರೈತರಿಗೂ ಕೃಷಿ ಯಂತ್ರಧಾರೆ ಕೇಂದ್ರಗಳ ಬಗ್ಗೆ ಮಾಹಿತಿ ಸಿಗುತ್ತಿರುವುದರಿಂದ ರೈತರು ಲಾಭ ಪಡೆಯುತ್ತಿದ್ದಾರೆ. ಹೀಗಾಗಿ ಮುಂಗಾರು-ಹಿಂಗಾರು, ಮಳೆ ಆರಂಭವಾಗುವ ಅವಧಿ ಹಾಗೂ ಕಟಾವು ಸಮಯದಲ್ಲಿ ರೈತರು ಕೃಷಿ ಯಂತ್ರೋಪಕರಣಗಳ ಬಳಕೆಯನ್ನು ಮಾಡುತ್ತಿದ್ದಾರೆ.
Farmer Krishi Yantradhare centre ಕೃಷಿ ಯಂತ್ರಧಾರೆಯಲ್ಲಿ ಯಾವ ಯಾವ ಉಪಕರಣಗಳು ಲಭ್ಯವಿರುತ್ತವೆ?
ಟ್ರ್ಯಾಕ್ಟರ್, ಪವರ್ ಟಿಲ್ಲರ್, ರೋಟರಿ ಟಿಲ್ಲರ್, ರೋಟಾವೇಟರ್, ಡಿಸ್ಕ್ ನೇಗಿಲು, ಬದು ನಿರ್ಮಾಣ ಯಂತ್ರ, ಕೂರಿಗೆ ಯಂತ್ರ, ಸಿಂಪರಣೆ ಯಂತ್ರಗಳು, ಕಾಳು ಬಿಡಿಸುವ ಯಂತ್ರ, ಪಂಪ್ ಸೆಟ್, ಬಿತ್ತನೆ ಯಂತ್ರ, ಕಲ್ಟಿವೇಟರ್, ಸ್ಪ್ರೇಯರ್, ಬಲರಾಮ ನೇಗಿಲು, ಕಟಾವು ಯಂತ್ರ, ಗುಂಡಿ ತೋಡುವ ಯಂತ್ರ, ಹುಲ್ಲು ಕಟಾವು ಮಾಡುವ ಯಂತ್ರ ಸೇರಿದಂತೆ ಆಯಾ ಜಿಲ್ಲೆಗೆ ಅಗತ್ಯಕ್ಕನುಗುಣವಾಗಿ ಬೇಕಾಗುವ ಯಂತ್ರೋಪಕರಣಗಳು ಆಯಾ ಕೃಷಿ ಯಂತ್ರಧಾರೆ ಕೇಂದ್ರಗಳಲ್ಲಿ ಲಭ್ಯವಿರುತ್ತವೆ.
ರೈತರು ಕಡಿಮೆ ದರದಲ್ಲಿ ಬಾಡಿಗೆಯಲ್ಲಿ ಕೃಷಿ ಯಂತ್ರೋಪಕರಣಗಳನ್ನುಪಡೆಯಲು ಹತ್ತಿರದ ಕೃಷಿಯಂತ್ರಧಾರೆ ಕೇಂದ್ರಕ್ಕೆ ಹೋಗಿ ಹೆಸರು ನೋಂದಾಯಿಸಬೇಕು. ಯಾವ ಯಂತ್ರ ಬಾಡಿಗೆ ಬೇಕಾಗಿದೆ ಎಂಬುದನ್ನು ಮುಂಗಡ ಹಣ ಪಾವತಿಸಿ ಕಾಯ್ದಿರಿಸಬಹುದು. ಯಂತ್ರಗಳನ್ನು ಲಭ್ಯತೆಯ ಆಧಾರದ ಮೇಲೆ ಬಾಡಿಗೆ ದರದಲ್ಲಿ ನೀಡಲಾಗುವುದು. ಬಾಡಿಗೆ ದರ ಮತ್ತು ಲಭ್ಯವಿರುವ ಯಂತ್ರಗಳ ಪಟ್ಟಿಯನ್ನು ಎಲ್ಲಾ ಕೃಷಿ ಯಂತ್ರಧಾರೆ ಕೇಂದ್ರಗಳಲ್ಲಿ ಪ್ರಕಟಿಸಲಾಗಿರುತ್ತದೆ.
ಬಾಡಿಗೆ ಕೇಂದ್ರದಿಂದ ಟ್ರ್ಯಾಕ್ಟರ್ ಬಾಡಿಗೆ ತೆಗೆದುಕೊಂಡರೆ ಕೃಷಿಯಂತ್ರಧಾರೆ ಸಿಬ್ಬಂದಿ ಬರುತ್ತಾರೆ. ಗದ್ದೆ, ತೋಟದಲ್ಲಿ ಬಳಕೆಯಾಗುವ ಸಮಯದ ಲೆಕ್ಕಾಚಾರ ಮಾಡಿ ಬಾಡಿಗೆ ನಿರ್ಧರಿಸುತ್ತಾರೆ. ಚಾಲಕ ರಹಿತ ಯಂತ್ರೋಪಕರಣಗಳನ್ನು ರೈತರಿಗೆ ನೇರವಾಗಿ ದಿನದ ಆಧಾರದ ಮೇಲೆ ಬಾಡಿಗೆ ನೀಡಲಾಗುವುದು.
ಇದನ್ನೂ ಓದಿ: ರೈತರ ಖಾತೆಗೆ ಜಮೆಯಾಯಿತು ಪರಿಹಾರದ ಹೆಚ್ಚುವರಿ ಹಣಃ ಸ್ಟೇಟಸ್ ನೋಡಲು ಇಲ್ಲಿ ಕ್ಲಿಕ್ ಮಾಡಿ
ಒಂದೊಂದು ಹೋಬಳಿಯಲ್ಲಿ 20-30 ಗ್ರಾಮಗಳಿರುತ್ತವೆ. ಹಾಗಾಗಿ ಎಲ್ಲಾ ಗ್ರಾಮಗಳ ರೈತರು ಅಂದರೆ ಹೋಬಳಿ ಕೇಂದ್ರದಿಂದ ದೂರವಿರುವ ಗ್ರಾಮಗಳಿಗೆ ಇದರ ಸೌಲಭ್ಯ ಸಿಗುತ್ತಿಲ್ಲ. ಹಾಗಾಗಿ ಪ್ರತಿ ಗ್ರಾಮ ಪಂಚಾಯತಿಗೆ ಒಂದೊಂದು ಕೃಷಿಯಂತ್ರಧಾರೆ ಕೇಂದ್ರಗಳನ್ನು ತೆರೆಯಬೇಕೆಂಬ ಒತ್ತಾಯ ರೈತರಿಂದ ಕೇಳಿ ಬರುತ್ತಿದೆ.