CHC Farm Machinery ಕೃಷಿ ಯಂತ್ರೋಪಕರಣಗಳನ್ನು ಖರೀದಿ ಮಾಡಲು ಸಾಧ್ಯವಾಗದ ಸಣ್ಣ ಮತ್ತು ಮಧ್ಯಮ ವರ್ಗದ ರೈತರೂ ಕಡಿಮೆ ಬಾಡಿಗೆ ದರದಲ್ಲಿ ದೊರಕುವಂತೆ ಸರ್ಕಾರವು ರಾಜ್ಯದ ಎಲ್ಲಾ ಹೋಬಳಿ ಕೇಂದ್ರಕ್ಕೊಂದರಂತೆ ಕೃಷಿ ಉಪಕರಣಗಳ ಬಾಡಿಗೆ ಸೇವಾ ಕೇಂದ್ರ (ಕೃಷಿ ಯಂತ್ರಧಾರೆ ಕೇಂದ್ರ) ಆರಂಭಿಸಿದೆ. ಕಾರ್ಮಿಕರ ಕೊರತೆ ನಿವಾರಣೆ, ರೈತರಿಗೆ ಅಧಿಕ ಲಾಭ ಹಾಗೂ ಕಡಿಮೆ ಬಾಡಿಗೆಯಲ್ಲಿ ಕೃಷಿ ಯಂತ್ರಗಳು ಸಿಗುವ ಉದ್ದೇಶದಿಂದ ಈ ಯೋಜನೆ ಆರಂಭಿಸಲಾಗಿದೆ.
ಮುಂಬಾಯಿಯ ಮಹೀಂದ್ರಾ ಆ್ಯಂಡ್ ಮಂಹೀಂದ್ರಾ ಲಿಮಿಟೆಡ್, ಇಂಡಿಯನ್ ಸೊಸೈಟಿ ಆಫ್ ಅಗ್ರಿ ಬಿಸಿನೆಸ್ ಪ್ರೊಫೆಷನ್ ಸಂಸ್ಥೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು, ಕಲಾಚೇತನ ಯುವ ಸಂಸ್ಥೆ, ಪಂಜಾಬಿನ ಮಹೀಂದ್ರಾ ಆ್ಯಂಡ್ ಮಹೀಂದ್ರ ಲಿಮಿಟೆಡ್, ವಿಎಸ್ಟಿ ಲಿಮಿಟೆಡ್ ಗಳಿಗೆ ಈ ಕೃಷಿ ಯಂತ್ರಧಾರೆ ಕೇಂದ್ರಗಳನ್ನು ನೀಡಲಾಗಿದೆ.
ರಾಜ್ಯದ ಎಲ್ಲಾ ಹೋಬಳಿ ಕೇಂದ್ರಗಳಲ್ಲಿ ಕೇಂದ್ರಗಳನ್ನು ಆರಂಭಿಸಲಾಗಿದೆ. ರೈತರಿಗೆ ಸುಲಭವಾಗಿ ಕೃಷಿ ಯಂತ್ರೋಪಕರಣಗಳ ಸೌಲಭ್ಯ ಒದಗಿಸುವುದಕ್ಕಾಗಿ ಸಿಎಚ್.ಸಿ ಫಾರ್ಮ್ ಮಷಿನರಿ ಎಂಬ ಆ್ಯಪ್ ಆರಂಭಿಸಲಾಗಿದೆ. ಈ ಆ್ಯಪ್ ಮೂಲಕ ರೈತರು ಕೃಷಿಗೆ ಸಂಬಂಧಿಸಿದ ಯಂತ್ರಗಳಾದ ಟ್ರ್ಯಾಕ್ಟರ್ ಸೇರಿದಂತೆ ಇನ್ನಿತರ ಕೃಷಿ ಯಂತ್ರೋಪಕರಣಗಳನ್ನು ಬಾಡಿಗೆಗೆ ಪಡೆಯಬಹುದು. ಕೃಷಿ ಕೇಂದ್ರದಿಂದ 50 ಕಿ.ಮೀಟರ್ ದೂರದಲ್ಲಿರುವ ಪ್ರದೇಶಗಳಿಗೆ ಈ ಉಪಕರಣ ಬಾಡಿಗೆಗೆ ಸಿಗಲಿದೆ. ಕಡಿಮೆ ದರದಲ್ಲಿ ಬಾಡಿಗೆಗೆ ಕೃಷಿ ಯಂತ್ರೋಪಕರಣಗಳು ಸಿಗಲಿದೆ.
ಕೃಷಿ ಸಚಿವಾಲಯದ ಈ ಅಪ್ಲಿಕೇಷನ್ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಸಿಗಲಿದೆ. 12 ಭಾಷೆಗಳಲ್ಲಿ ಲಭ್ಯವಿದೆ. . ಈ ಆ್ಯಪ್ ಮೂಲಕ ನೀವು ಕೃಷಿ ಯಂತ್ರೋಪಕರಣಕ್ಕಾಗಿ ಬುಕ್ ಮಾಡಿದರೆ ಸಾಕು ಟ್ರ್ಯಾಕ್ಟರ್ ನೀವು ಹೇಳಿದ ವಿಳಾಸಕ್ಕೆ ಬಂದು ತಲುಪುತ್ತದೆ. ಆ್ಯಪ್ ನಲ್ಲಿ ನೀವು ಯಾವ ಕೃಷಿ ಯಂತ್ರೋಪಕರಣ ಬಾಡಿಗೆಗೆ ಬೇಕೋ ಅದನ್ನು ಅಲ್ಲಿ ನಮೂದಿಸಿದರೆ ಟ್ರ್ಯಾಕ್ಟರ್ ನೀವು ಹೇಳಿದ ವಿಳಾಸಕ್ಕೆ ನಿಮಗೆ ಕರೆ ಮಾಡಿ ಬರುತ್ತದೆ. ಅಲ್ಲಿ ಯಂತ್ರೋಪಕರಣಗಳ ಬಾಡಿಗೆಯ ಮಾಹಿತಿಯೂ ನೀಡಲಾಗುತ್ತದೆ.
ಸಿ.ಎಚ್.ಸಿ ಫಾರ್ಮ್ ಮಷಿನರಿ ಆ್ಯಪ್ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿದೆ. ಗೂಗಲ್ ಪ್ಲೇ ಸ್ಟೋರ್ ನಲ್ಲಿ CHC Farm Machinery ಎಂದು ಟೈಪ್ ಮಾಡಿ ಆ್ಯಪ್ ಡೌನ್ಲೋಡ್ ಮಾಡಿಕೊಂಡನಂತರ ಯಾವ ಭಾಷೆಯಲ್ಲಿ ಮಾಹಿತಿ ಬೇಕೋ ಅದನ್ನು ಆಯ್ಕೆ ಮಾಡಿಕೊಳ್ಳಬೇಕು.
ಇದನ್ನೂ ಓದಿ : Google Mapನಲ್ಲಿ ನಿಮ್ಮ ಲೋಕೇಷನ್, ನಿಮ್ಮೂರಿನ ಸ್ಥಳ, ಹೊಲ, ರಸ್ತೆ ಮಾಹಿತಿ ಸೇರಿಸಬೇಕೇ? ಇಲ್ಲಿದೆ ಮಾಹಿತಿ
ಸಿಎಚ್ಸಿ ಫಾರ್ಮ ಮಷಿನರಿ ಆ್ಯಪ್ install ಮಾಡಿದ ನಂತರ ಮೊಬೈಲ್ ನಂಬರ್ ನಮೂದಿಸಿ ನಿಮ್ಮ ಮೊಬೈಲ್ ಗೆ ಬರುವ ಓಟಿಪಿ ನಮೂದಿಸಿ ಲಾಗಿನ್ ಆಗಬೇಕು. ಅಲ್ಲಿ ಬುಕಿಂಗ್ ಅಳವಡಿಸು ವಿಭಾಗದಲ್ಲಿ ಬುಕಿಂಗ್ ಲಿಸ್ಟ್ ಇರುತ್ತದೆ. ಬುಕಿಂಗ್ ಅಳವಡಿಸಿ ಆಯ್ಕೆ ಮಾಡಿಕೊಂಡ ನಂತರ ಯಾವ ದಿನಾಂಕಕ್ಕೆ ಕೃಷಿ ಯಂತ್ರೋಪಕರಣಗಳು ಬೇಕು, ಜಮೀನಿನ ಎಷ್ಟು ಎಕರೆಗೆ ಬೇಕು. ಯಾವ ಬೆಳೆ ಕಟಾವಿಗೆ ಅಥವಾ ಕೃಷಿ ಚಟುವಟಿಕೆಗೆ ಬೇಕು ಎಂಬುದನ್ನು ಬೆಳೆ ಆಯ್ಕೆ ಮಾಡಿಕೊಳ್ಳೇಬೇಕು, ಅಲ್ಲಿ ನಿಮ್ಮೂರಿನ ಹೆಸರು ಕಾಣುತ್ತದೆ. ಒಂದು ವೇಳೆ ಹೆಸರು ಕಾಣದಿದ್ದರೆ ವಿಳಾಸ ಕಾಲಂನಲ್ಲಿ ನಮೂದಿಸಿದ ನಂತರ ನಿಮ್ಮ ಹತ್ತಿರದ ಸಿಎಚ್.ಸಿ ಕೇಂದ್ರವನ್ನು ಹುಡುಕಿ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಹತ್ತಿರವಿರುವ ಸಿಎಚ್ಸಿ ಕೇಂದ್ರದ ಲಿಸ್ಟ್ ಕಾಣುತ್ತದೆ. ಆಗ ಕೇಂದ್ರವನ್ನು ಆಯ್ಕೆ ಮಾಡಿಕೊಂಡು ಬುಕ್ ಮಾಡಿದರೆ ನೀವು ನಮೂದಿಸಿದ ವಿಳಾಸಕ್ಕೆ ಕಡಿಮೆ ಬಾಡಿಗೆ ದರದಲ್ಲಿ ಟ್ರ್ಯಾಕ್ಟರ್ ಬರಲಿದೆ.
CHC Farm Machinery ಬಾಡಿಗೆ ಪಡೆಯುವುದು ಹೇಗೆ?
ಕೃಷಿ ಯಂತ್ರೋಪಕರಣ ಬಾಡಿಗೆ ಬೇಕಾದಲ್ಲಿ ಸಮೀಪದ ಕೃಷಿ ಯಂತ್ರಧಾರೆ ಕೇಂದ್ರಕ್ಕೆ ಹೋಗಿಯ ಬೇಕಾದ ಯಂತ್ರವನ್ನು ಮುಂಗಡ ಹಣ ಪಾವತಿಸಿ ಕಾದಿರಿಸಬಹುದು. ಯಂತ್ರಗಳ ಲಭ್ಯತೆಯನ್ನು ನೋಡಿಕೊಂಡು ಬೇಕಾದ ದಿನಕ್ಕಿಂತ ಒಂದು ವಾರ ಮುಂಚಿತವಾಗಿ ಕಾಯ್ದಿರಿಸುವ ಸೌಲಭ್ವವಿದೆ. ಯಂತ್ರೋಪಕರಣ ಬಾಡಿಗೆ ದರ ಮತ್ತು ಲಭ್ಯವಿರುವ ಯಂತ್ರಗಳ ಪಟ್ಟಿಯನ್ನು ಕೃಷಿ ಯಂತ್ರಧಾರೆ ಕೇಂದ್ರದಲ್ಲಿ ಪ್ರಕಟಿಸಲಾಗಿರುತ್ತದೆ.
ಮಹೀಂದ್ರಾ ಆ್ಯಂಡ್ ಮಹೀಂದ್ರಾ ಲಿಮಿಟೆಡ್ ಕೃಷಿ ಯಂತ್ರಧಾರೆ ಕೇಂದ್ರಗಳಲ್ಲಿ ಲಭ್ಯವಿರುವ ಕೃಷಿ ಯಂತ್ರೋಪಕರಣ ಲಭ್ಯತೆ ಹಾಗೂ ದರದ ಕುರಿತು ತಿಳಿದುಕೊಳ್ಳಲು ಉಚಿತ ಸಹಾಯವಾಣಿ ಮಹೀಂದ್ರಾ ಟ್ರಿಂಗೋ 1800 266 2668 ಆರಂಭಿಸಿದೆ. ಈ ನಂಬರಿಗೆ ಕರೆ ಮಾಡಿ ವಿಚಾರಿಸಿಕೊಳ್ಳಬಹುದು.