Why should farmers make land podi ನಮ್ಮ ದೇಶದಲ್ಲಿ ಈಗಲೂ ಬಹುತೇಕ ರೈತರು ತಮ್ಮ ಹೆಸರಿನಲ್ಲಿ ಪೋಡಿ ಮಾಡಿಸಿರುವುದಿಲ್ಲ. ಪಹಣಿಯಲ್ಲಿ ಜಂಟಿಯಾಗಿ ಬಹಳಷ್ಟು ರೈತರ ಹೆಸರು ಇರುತ್ತದೆ. ಇದಕ್ಕೆ ಮುಖ್ಯ ಕಾರಣ ಮುಂದೆ ಮಾಡಿಸಿದರಾಯಿತು ಎಂಬ ಉದಾಸೀನತೆ. ಸಹೋದರರು ಜಮೀನು ವಿಭಜನೆ ಮಾಡಿಕೊಂಡರೂ ಸಹ ಪ್ರತ್ಯೇಕವಾಗಿ ಪೋಡಿ ಮಾಡಿಸಿರುವುದಿಲ್ಲ. ಈಗಲೂ ಎಷ್ಟೋ ಅವಿಭಕ್ತ ಕುಟುಂಬಗಳು ಬೇರೆಯಾದ ನಂತರವೂ ಜಮೀನು ಜಂಟಿಯಾಗಿರುತ್ತದೆ. ಇದರಿಂದಾಗಿ ಬಹುತೇಕ ರೈತರು ಸರ್ಕಾರದ ಹಲವಾರು ಸೌಲಭ್ಯಗಳಿಂದ ವಂಚಿತರಾಗುತ್ತಿರುತ್ತಾರೆ.
ರೈತರು ಸರ್ಕಾರದ ಸೌಲಭ್ಯವಷ್ಟೇ ಅಲ್ಲ, ಜಮೀನಿನ ಮಾರಾಟ ಹಾಗೂ ಖರೀದಿಯಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ರೈತರು ತಮ್ಮ ಜಮೀನಿನ ಪೋಡಿ ಮಾಡಿಸುವುದು ಅಗತ್ಯವಾಗಿದೆ. ಏಕೆಂದರೆ ಪೋಡಿ ಮಾಡಿಸುವ ಶುಲ್ಕವೂ ಸಹ ಹೆಚ್ಚಾಗಿದೆ. ಇದೇ ವರ್ಷ ಜನವರಿಯಿಂದ ಪೋಡಿ ಮಾಡಿಸುವ ಶುಲ್ಕ 800 ರೂಪಾಯಿ ಹೆಚ್ಚಾಗಿದೆ. 1200 ರೂಪಾಯಿಯಿಂದ ಈಗ ಜಮೀನಿನ ಪೋಡಿ ಮಾಡಿಸುವ ಶುಲ್ಕ 2000 ರೂಪಾಯಿಗೆ ಹೆಚ್ಚಳವಾಗಿದೆ. ಹಾಗಾಗಿ ರೈತರು ಮುಂದೆ ಹೆಚ್ಚಾಗುವ ಶುಲ್ಕ, ದಿನಕ್ಕೊಂದು ಕಾನೂನಿನ ಕಠಿಣ ನಿಯಮದಿಂದ ಪಾರಾಗಲು ಪ್ರತ್ಯೇಕ ಪೋಡಿ ಮಾಡಿಸುವುದು ಅಗತ್ಯ. ಜಮೀನಿನ ಪೋಡಿ ಏಕೆ ಮಾಡಿಸಬೇಕು, ಪೋಡಿ ಮಾಡುವುದರಿಂದ ಆಗುವ ಉಪಯೋಗಗಳ ಸಂಪೂರ್ಣ ಮಾಹಿತಿ ಇಲ್ಲಿದೆ.
Why should farmers make land podi ರೈತರೇಕೆ ಜಮೀನಿನ ಪೋಡಿ ಮಾಡಿಸಬೇಕು?
ಒಂದೇ ಸರ್ವೇ ನಂಬರ್ ನಲ್ಲಿ ಹಲವು ಹಿಸ್ಸಾ ಸರ್ವೇ ನಂಬರ್ ಇರುತ್ತದೆ. ಆದರೆ ಭೂ ಮಾಲಿಕತ್ವದ ಹೆಸರು ಒಂದೇ ಹಿಸ್ಸಾದಲ್ಲಿ ಬಂದಿರುತ್ತದೆ. ಇದರಿಂದ ರೈತರು ಸರ್ಕಾರದ ಸೌಲಭ್ಯಯಗಳಿಂದ ವಂಚಿತರಾಗುತ್ತಾರೆ. ಜಮೀನಿನ ಪೋಡಿಗೆ ಅರ್ಜಿ ಸಲ್ಲಿಸಿದರೆ ಕಾನೂನಿನ ಪ್ರಕಾರ ಪ್ರತ್ಯೇಕವಾಗಿ ಜಮೀನಿನ ವಿಭಾಗ ಮಾಡಿ ಹೊಸ ಹಿಸ್ಸಾ ಸಂಖ್ಯೆ ನೀಡಲಾಗುತ್ತದೆ. ಅದೇ ರೀತಿ ಪೋಡಿ ಮಾಡಿರುವ ಜಮೀನಿಗೆ ಆದಾಯ ದಾಖಲೆ ತಯಾರು ಮಾಡಿ ಪ್ರತ್ಯೇಕ ಪಹಣಿ ಮಾಡಿಸುವುದು ಅತ್ಯವಶ್ಯಕವಾಗಿದೆ. ಪೋಡಿ ಮಾಡಿಸುವ ಮೂಲಕ ಒಂದು ಆರ್.ಟಿ.ಸಿಗೆ ಒಂದು ನಕ್ಷೆ ಒದಗಿಸಲಾಗುತ್ತದೆ. ಬಹು ಮಾಲಿಕತ್ವದ ಪಹಣಿ ಪತ್ರಗಳನ್ನು ಹೊಂದಿರುವ ಹಿಡುವಳಿದಾರರಿಗೆ ಪ್ರತ್ಯೇಕ ಪಹಣಿ ನಕ್ಷೆ ದೊರೆಯಲಾಗಿದೆ. ಪ್ರತ್ಯೇಕ ಪಹಣಿ ನಕ್ಷೆ ಇದ್ದರೆ ಮುಂದೆ ರೈತರಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ.
ಪೋಡಿಯಲ್ಲಿ ಎಷ್ಟು ವಿಧ?
ಜಮೀನಿನ ಪೋಡಿಯಲ್ಲಿ ನಾಲ್ಕು ಪ್ರಕಾರಗಳಿರುತ್ತವೆ. ತತ್ಕಾಲ್ ಪೋಡಿ, ದರ್ಖಾಸ್ ಪೋಡಿ, ಅಲಿನೇಷನ್ ಪೋಡಿ ಹಾಗೂ ಮುಟೇಷನ್ ಪೋಡಿ.
ಇದನ್ನೂ ಓದಿ :ಪೌತಿ ಖಾತೆ ಎಂದರೇನು? ಪೌತಿಖಾತೆಯಡಿ ಜಮೀನು ವರ್ಗಾವಣೆ ಮಾಡದಿದ್ದರೆ ರೈತರು ಯಾವ ಯಾವ ಸೌಲಭ್ಯಗಳಿಂದ ವಂಚಿತರಾಗುತ್ತಾರೆ ಗೊತ್ತಾ….? ಇಲ್ಲಿದೆ ಸಂಪೂರ್ಣ ಮಾಹಿತಿ
ಒಂದು ಸರ್ವೇ ನಂಬರ್ ನಲ್ಲಿ ಹಲವಾರು ಹಿಸ್ಸಾ ಸರ್ವೆ ನಂಬರ್ ಇದ್ದಾಗ ಜಮೀನನ್ನು ಕಾಯ್ದೆ ಪ್ರಕಾರ ವಿಭಜನೆ ಮಾಡಿ ಪ್ರತ್ಯೇಕ ಹಿಸ್ಸಾ ಸಂಖ್ಯೆ ಮಾಡಿ ತತ್ಕಾಲ್ ಪೋಡಿ ಮಾಡಲಾಗುತ್ತದೆ. ಒಂದು ಪಹಣಿಯಲ್ಲಿರುವ ಹಲವಾರು ಜನರ ಹೆಸರು ಪ್ರತ್ಯೇಕವಾಗಿ ಮಾಡುವುದನ್ನು ತತ್ಕಾಲ್ ಪೋಡಿ ಎನ್ನುವರು.
ಜಮೀನಿನ ಪೋಡಿ ಶುಲ್ಕ ಹೆಚ್ಚಳ
2021 ರ ಡಿಸೆಂಬರ್ ವರೆಗೆ ಜಮೀನನ ಪೋಡಿಯ ಗರಿಷ್ಠ ಬೆಲೆ 1200 ರೂಪಾಯಿ ಇತ್ತು. ಈಗ ಹೊಸ ವರ್ಷ 2022 ರಿಂದ 2000 ರೂಪಾಯಿಗೆ ಹೆಚ್ಚಿಸಲಾಗಿದೆ. ಅಂದರೆ 800 ರೂಪಾಯಿ ಹೆಚ್ಚಿಸಲಾಗಿದೆ. ಜಮೀನು ಖರೀದಿ ಮತ್ತು ಮಾರಾಟ ಮಾಡಲು ಪೋಡಿ ಮಾಡುವುದನ್ನು ಸರ್ಕಾರ ಕಡ್ಡಾಯಗೊಳಿಸಿದ್ದರಿಂದ ಈಗ ಪೋಡಿ ಮಾಡಿಸುವ ಶುಲ್ಕ ಹೆಚ್ಚಿಸಿದ್ದರಿಂದ ರೈತರಿಗೆ ಹೆಚ್ಚುವರಿ ಹೊರೆಯಾಗಿದೆ.
ಜಮೀನಿನ ಪೋಡಿ ಮಾಡಿಸುವುದರಿಂದ ಆಗುವ ಲಾಭಗಳು
ಕಿಸಾನ್ ಕ್ರೇಡಿಟ್ ಕಾರ್ಡ್ ಪಡೆಯಲು ಬೇಕಾಗುತ್ತದೆ. ಅದೇ ರೀತಿ ಬೆಳೆ ಸಾಲ ಪಡೆಯುವುದಕ್ಕೆಗ ಪೋಡಿ ಅಗತ್ಯವಾಗಿ ಬೇಕು. ಜಮೀನಿನ ಪೋಡಿ ಮಾಲಿಕನ ಹೆಸರಿನ ಮೇಲೆ ಇದ್ದರೆ ಜಮೀನು ಅತಿಕ್ರಮಣ ಮಾಡುವುದು ಅಸಾಧ್ಯ. ಜಮೀನಿನಲ್ಲಿ ಹಾಕಿದ್ದ ಬೆಳೆಗಳಿಗೆ ವಿಮೆ ಮಾಡಿಸಲು ಪೋಡಿ ಬೇಕಾಗುತ್ತದೆ. ಜಮೀನು ಮಾರಾಟ ಮಾಡುವಾಗಲು ಮಾಲಿಕನ ಹೆಸರಿನ ಮೇಲೆ ಪೋಡಿ ಇರಬೇಕಾಗುತ್ತದೆ.
ಪೋಡಿ ಮಾಡಿಸದಿದ್ದರೆ ರೈತರಿಗಾಗುವ ಹಾನಿ
ಜಮೀನಿನ ಪೋಡಿ ಮಾಲಿಕನ ಹೆಸರಿನ ಮೇಲೆ ಇರದಿದ್ದರೆ ಪಿಎಂ ಕಿಸಾನ್ ಯೋಜನೆ ಲಾಭ ದೊರೆಯುವುದಿಲ್ಲ. ಅಷ್ಟೇ ಅಲ್ಲ ಅತೀವೃಷ್ಟಿ, ಪ್ರಕೃತಿ ವಿಕೋಪದಿಂದಾಗಿ ಬೆಳೆ ಹಾನಿಯಾದಾಗ ಬೆಳೆ ಪರಿಹಾರ ಸಿಗುವುದಿಲ್ಲ. ಬೆಳೆ ವಿಮೆ ಮಾಡಿಸುವುದಕ್ಕೂ ಆಗುವುದಿಲ್ಲ. ಇದರಿಂದಾಗಿ ಬೆಳೆವಿಮೆಯ ಸೌಲಭ್ಯದಿಂದಾಗಿ ರೈತರು ವಂಚಿತರಾಗುತ್ತಾರೆ. ಜಮೀನಿನ ಮಾಲೀಕನ ಹೆಸರಿನ ಮೇಲೆ ಪೋಡಿ ಇರಿದಿದ್ದರೆ ಖರೀದಿ ಮಾಡುವವರು ಹಿಂದೇಟು ಹಾಕುವ ಸಾಧ್ಯತೆಯಿರುತ್ತದೆ.