Plot Discount rate : ಸಾರ್ವಜನಿಕರಿಗೆ ವಿಶೇಷವಾಗಿ ವಸತಿರಹಿತರಿಗೆ ಕಡಿಮೆ ದರದಲ್ಲಿ ಮತ್ತು ರಿಯಾಯಿತಿ ದರದಲ್ಲಿ ಪ್ಲಾಟ್ (ನಿವೇಶನ) ಹಂಚಿಕೆ ಮಾಲು ಅರ್ಜಿ ಆಹ್ವಾನಿಸಲಾಗಿದೆ.
ಹೌದು, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಹಾಗರಗಾ ಗ್ರಾಮದಲ್ಲಿ ಕಲಬುರಗಿ-ಹಾಗರಗಾ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಂತೆ ಮತ್ತು ಗ್ರಾಮದ ವರ್ತುಲ ರಸ್ತೆಯಿಂದ ಎರಡೂವರೆ ಕಿ.ಮೀ. ಅಂತರದಲ್ಲಿ 50:50 ರೈತರ ಸಹಭಾಗಿತ್ವದೊಂದಿಗೆ 117 ಎಕರೆ 05 ಗುಂಟೆ ಜಮೀನು ವಿಸ್ತೀರ್ಣದಲ್ಲಿ ದಿ. ಡಾ. ಖಮರ್ ಉಲ್ ಇಸ್ಲಾಂ ವಸತಿ ಯೋಜನೆ (ಹಾಗರಗಾ ಯೋಜನೆ) ಪ್ರಾಧಿಕಾರದಿಂದ ಅಭಿವೃದ್ಧಿಪಡಿಸಿದ್ದು, ಕಲಬುರಗಿ ನಗರದ ವಸತಿ ರಹಿತ ಜನರಿಗೆ ಕಡಿಮೆ ಹಾಗೂ ರಿಯಾಯತಿ ದರದಲ್ಲಿ ನಿವೇಶನ ಸೌಭಾಗ್ಯ ದೊರೆಯಲಿದೆ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್ ಮತ್ತು ಆಯುಕ್ತ ಜಿ.ಎಸ್.ಮಳಗಿ ತಿಳಿಸಿದ್ದಾರೆ
ಮಾಜಿ ಸಚಿವ ಡಾ.ಖಮರ್ ಉಲ್ ಇಸ್ಲಾಂ ಅವರ ಕನಸಿನ ಯೋಜನೆ ಇದಾಗಿದ್ದು, ಬಹಳ ವರ್ಷದಿಂದ ಸರ್ಕಾರದಿಂದ ಅನುಮೋದನೆಯಾಗದೇ ನೆನೆಗುದ್ದಿಗೆ ಬಿದ್ದಿತ್ತು. ವಿಶೇಷವಾಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರ ಆಸಕ್ತಿ, ಸ್ಥಳೀಯ ಶಾಸಕರಾದ ಕನೀಜ್ ಫಾತಿಮಾ ಮತ್ತು ಅಲ್ಲಮಪ್ರಭು ಪಾಟೀಲ ಸೇರಿದಂತೆ ಪ್ರಾಧಿಕಾರದ ಸರ್ವ ಸದಸ್ಯರು ಮತ್ತು ವಿಧಾನ ಪರಿಷತ್ ಶಾಸಕರ ಪ್ರೋತ್ಸಾಹ ಮತ್ತು ಸಹಕಾರದಿಂದ ಈ ಯೋಜನೆ ಜಾರಿಗೆ ತರಲು ಸಾಧ್ಯವಾಗಿದೆ ಎಂದು ಮಜಹರ್ ಆಲಂ ಖಾನ್ ತಿಳಿಸಿದ್ದಾರೆ.
Plot Discount rate ಎಷ್ಟು ಪ್ಲಾಟ್ ಗಳಿಗೆ ನಿವೇಶನಕ್ಕೆ ಅರ್ಜಿ ಆಹ್ವಾನ
ಸದರಿ ಯೋಜನೆಯು ದಿ. ಡಾ. ಖಮರ-ಉಲ್-ಇಸ್ಲಾಂ ಇವರ ಕನಸಿನ ಕೂಸಾಗಿದ್ದರಿಂದ ಬಡಾವಣೆಗೆ ಡಾ. ಖಮರ-ಉಲ್-ಇಸ್ಲಾಂ ವಸತಿ ಯೋಜನೆ ಎಂದು ಹೆಸರಿಡಲಾಗಿದೆ. ಹಾಗರಗಾ ಯೋಜನೆಯಲ್ಲಿ ಒಟ್ಟು 1,808 ನಿವೇಶನಗಳಿದ್ದು, ರೈತರ ಪಾಲಿಗೆ 821 ನಿವೇಶನ ಹಂಚಿಕೆ ಮಾಡಿ ಅವರಿಗೆ ನೋಂದಣಿ ಸಹ ಮಾಡಿಸಲಾಗಿದೆ. ಉಳಿದಂತೆ 987 ನಿವೇಶನಗಳ ಪ್ರಾಧಿಕಾರ ಬಳಿ ಇದ್ದು, ಇದರಲ್ಲಿ 769 ಮಧ್ಯದ ನಿವೇಶನಗಳನ್ನು ಸರಕಾರವು ನಿಗದಿಪಡಿಸಿದಂತೆ ನಿವೇಶ ಹಂಚಿಕೆಗೆ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಲಾಗಿದೆ.
ಇದನ್ನೂ ಓದಿ ಇಲ್ಲಿ ಆಧಾರ್ ಸೀಡ್ ಮಾಡಿದರೆ ಮಾತ್ರ ಪಿಎಂ ಕಿಸಾನ್ ಹಣ ಜಮೆ
ಬಡಾವಣೆಯಲ್ಲಿ ಸುಸಜ್ಜಿತ ರಸ್ತೆ, ದಾರಿ ದೀಪಗಳು, ಒಳಚರಂಡಿ ಸೌಲಭ್ಯ ಒಳಗೊಂಡಿದೆ. ಇದಲ್ಲದೆ ಹೊಸ ಮಾದರಿಯ ಎರಡು ವರ್ಣಮಯ ಮಹಾದ್ವಾರ ನಿರ್ಮಿಸಲಾಗಿದ್ದು, ಸಾರ್ವಜನರಿಗೆ ಸುಸಜ್ಜಿತ ಸೌಲಭ್ಯ ಒಳಗೊಂಡ ಅಧಿಕೃತ ನಿವೇಶನಗಳು ಇಲ್ಲಿ ದೊರೆಯಲಿವೆ ಎಂದು ಪ್ರಾಧಿಕಾರದ ಅಧ್ಯಕ್ಷರು ತಿಳಿಸಿದ್ದಾರೆ.
ಇದರಲ್ಲಿ ವಿಶೇಷವಾಗಿ ಆರ್ಥಿಕವಾಗಿ ಹಿಂದುಳಿದವರಿಗೆ 6×9 ಚ.ಮೀ ಅಳತೆಯ 234 ನಿವೇಶನಗಳನ್ನು ನಿವೇಶನದ ಬೆಲೆಯ ಶೇ.50ರ ರಿಯಾಯತಿ ದರ ನಿಗದಿಪಡಿಸಲಾಗಿದೆ. ಇನ್ನು ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡದವರಿಗೆ 6×9 ಚ.ಮೀ ಅಳತೆಯ 52 ನಿವೇಶನಗಳನ್ನು ನಿವೇಶನದ ಬೆಲೆಯ ಶೇ.75ರ ರಿಯಾಯತಿ ದರ ನಿಗದಿಪಡಿಸಲಾಗಿದೆ. ಇದಲ್ಲದೆ ಮಾಜಿ ಸೈನಿಕರಿಗೆ, ಅಂಗವಿಕಲರಿಗೆ, ಕೇಂದ್ರ ಮತ್ತು ರಾಜ್ಯ ಸರಕಾರಿ ನೌಕರರಿಗೆ, ಪತ್ರಕರ್ತರಿಗೆ, ಕಲೆ, ವಿಜ್ಞಾನ, ಕ್ರೀಡೆಯಲ್ಲಿ ಸಾಧನೆ ಮಾಡಿದ ವ್ಯಕ್ತಿಗಳಿಗೆ ನಿವೇಶನಗಳನ್ನು ಹಂಚಿಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಸಿ.ಎ. ನಿವೇಶನ ಹಂಚಿಕೆ ಅರ್ಜಿ ಆಹ್ವಾನ ಪ್ರಾಧಿಕಾರದ ಹಾಗೂ ಪ್ರಾಧಿಕಾರದಿಂದ ಅನುಮೋದನೆಗೊಂಡ ಖಾಸಗಿ ವಿನ್ಯಾಸಗಳನ್ನೊಳಗೊಂಡಂತೆ ಒಟ್ಟು 331 ಸಿ.ಎ ನಿವೇಶನಗಳ ಪೈಕಿ ಈಗಾಗಲೆ 117 ನಿವೇಶನಗಳ ಹಂಚಿಕೆಗಾಗಿ ಈ ಹಿಂದೆಯೆ ಸಾರ್ವಜನಿಕ ಪ್ರಕಟಣೆ ಹೊರಡಿಸಲಾಗಿದೆ. ಇನ್ನು ಬೇಡಿಕೆ ಬಂದಲ್ಲಿ ಅವಧಿ ವಿಸ್ತರಿಸುವ ಉದ್ದೇಶ ಹೊಂದಿದೆ. ಇಲ್ಲಿ ವಿಶೇಷವಾಗಿ ವಿಶೇಷಚೇತನರಿಗೆ ಹಾಗೂ ಕನ್ನಡ ಮಾಧ್ಯಮ ಶಾಲೆಗಳಿಗೆ ಶೇ.50ರ ದರದಲ್ಲಿ ನಿವೇಶನವನ್ನು ನೀಡಲಾಗುತ್ತದೆ. ಸಂಘ-ಸಂಸ್ಥೆಯವರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮಜಹರ್ ಆಲಂ ಖಾನ್ ಅವರು ಮನವಿ ಮಾಡಿದ್ದಾರೆ.
ನಾಲ್ಕು ದಿಕ್ಕಿನಲ್ಲಿ ವಸತಿ ಪ್ರದೇಶ: ಪ್ರಾಧಿಕಾರದ ವತಿಯಿಂದ ಈಗಾಗಲೇ ಹೊಸದಾಗಿ 50:50 ರೈತರ ಸಹಭಾಗಿತ್ವದಲ್ಲಿ ಹಾಗರಗಾ ಯೋಜನೆ ಅನುಷ್ಠಾನಕ್ಕೆ ತರಲಾಗಿದೆ. ಮುಂದಿನ ದಿನದಲ್ಲಿ ನಗರದ ನಾಲ್ಕು ದಿಕ್ಕಿನಲ್ಲಿ ವಿಶೇಷವಾಗಿ ಸೇಡಂ ರಸ್ತೆ, ಆಳಂದ ರಸ್ತೆ, ಜೇವರ್ಗಿ ರಸ್ತೆ, ಅಫಜಲಪೂರ ರಸ್ತೆ, ಕಪನೂರ ರಸ್ತೆಗೆ ಹೊಂದಿಕೊಂಡಂತೆ 50:50 ಸಹಭಾಗಿತ್ವದಲ್ಲಿ ವಸತಿ ಪ್ರದೇಶ ಅಭಿವೃಧಿಪಡಿಸುವ ಗುರಿ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಈಗಾಗಲೆ ಜಮೀನು ನೀಡಲು ಮುಂದೆ ಬರುವಂತೆ 01-06-2025 ರಂದು ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದು, ರೈತರು ಮುಂದೆ ಬಂದಲ್ಲಿ ಇನ್ನು ಹೆಚ್ಚಿನ ನಿವೇಶನ ಸೌಲಭ್ಯ ನಗರದ ಜನರಿಗೆ ಸಿಗಲಿದೆ ಎಂದು ಮಜಹರ್ ಆಲಂ ಖಾನ್ ತಿಳಿಸಿದರು.





