Free scientific sheep training ಕುರಿ ಮತ್ತು ಮೇಕೆ ಸಾಕಾಣಿಕೆಯಲ್ಲಿ ಆಸಕ್ತಿಯಿರುವ ರೈತರಿಗಿಲ್ಲಿದೆ ಸಂತಸದ ಸುದ್ದಿ. ರೈತರಿಗೆ ವೈಜ್ಞಾನಿಕವಾಗಿ ಕುರಿ ಸಾಕಾಣಿಕೆ ಮಾಡಲು ಎರಡು ದಿನಗಳ ಕಾಲ ಉಚಿತ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಹೌದು, ಕಲಬುರಗಿ ಸೇಡಂ ರಸ್ತೆಯಲ್ಲಿರುವ ಪಶು ಆಸ್ಪತ್ರೆ ಆವರಣದಲ್ಲಿರುವ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಕಲಬುರಗಿ ಜಿಲ್ಲೆಯ ರೈತರಿಗೆ ಎರಡು ದಿನಗಳ ಕಾಲ ವೈಜ್ಞಾನಿಕ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಹಮ್ಮಿಕೊಳ್ಳಲಾಗಿದೆ. ಜೂನ್ 29 ಹಾಗೂ 30 ರಂದು ಎರಡು ದಿನಗಳ ಕಾಲ ತರಬೇತಿ ನೀಡಲಾಗುವುದು.
ತರಬೇತಿಯಲ್ಲಿ ಒಂದು ಬ್ಯಾಚ್ ನಲ್ಲಿ 25 ಜನರಿಗೆ ತರಬೇತಿ ನೀಡಲಾಗುವುದು. ಮೊದಲು ಬಂದವರಿಗೆ ಅವಕಾಶ ನೀಡಲಾಗುವುದು. ತರಬೇತಿಯ ದಿನದಂದು ರೈತರು ಬೆಳಗ್ಗೆ 10 ಗಂಟೆಗೆ ಕಡ್ಡಾಯವಾಗಿ ಹಾಜರಾಗಬೇಕು. ತರಬೇತಿಗೆ ಹಾಜರಾಗುವ ರೈತರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ರೈತರೇ ಮಾಸ್ಕ್ ತರಬೇಕು. ರೈತರಿಗೆ ಯಾವುದೇ ಭತ್ಯೆ ಇರುವುದಿಲ್ಲ. ಮಧ್ಯಾಹ್ನ ಊಟ ನೀಡಲಾಗುವುದು. ಎರಡು ದಿನಗಳ ಕಾಲ ಕಡ್ಡಾಯವಾಗಿ ತರಬೇತಿಗೆ ಹಾಜರಾದವರಿಗೆ ಮಾತ್ರ ತರಬೇತಿ ಪ್ರಮಾಣ ಪತ್ರ ನೀಡಲಾಗುವುದು.
ಈ ತರಬೇತಿಗೆ ಹಾಜರಾಗುವ ರೈತರು ಅರ್ಜಿಯ ಜೊತೆಗೆ ಎರಡು ಪಾಸ್ ಪೋರ್ಟ್ ಸೈಜಿನ ಭಾವಚಿತ್ರ ತರಬೇಕು. ಆಧಾರ್ ಕಾರ್ಡ್ ಝರಾಕ್ಸ್ ಪ್ರತಿ ಲಗತ್ತಿಸಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಜಾತಿ ಪ್ರಮಾಣ ಪತ್ರ ಲಗತ್ತಿಸಬೇಕು.
ಇದನ್ನೂ ಓದಿ : ರೈತರು ತಮ್ಮ ಜಮೀನಿನ ಮ್ಯಾಪ್ ಮೊಬೈಲ್ ನಲ್ಲೇ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ
ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರ ಕಚೇರಿ, ಪಶುಪಾಲನೆ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರ, ಸೇಡಂ ರಸ್ತೆ, ಕಲಬುರಗಿ ವಿಳಾಸಕ್ಕೆ ಅಥವಾ ಕಚೇರಿ ದೂರವಾಣಿ ಸಂಖ್ಯೆ 08472 220576ಗೆ ಸಂಪರ್ಕಿಸಬಹುದು ಎಂದು ಕಲಬುರಗಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ತರಬೇತಿ ಕೇಂದ್ರದ ಉಪನಿರ್ದೇಶಕರು ಪ್ರಕಣೆಯಲ್ಲಿ ತಿಳಿಸಿದ್ದಾರೆ.
Free scientific sheep training ಕುರಿ ಮತ್ತು ಮೇಕೆ ಸಾಕಾಣಿಕೆಯಲ್ಲಿ ಏನೇನು ತರಬೇತಿ ನೀಡಲಾಗುವುದು?
ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ವತಿಯಿಂದ ಹಮ್ಮಿಕೊಳ್ಳುವ ಕುರಿ ಮತ್ತು ಮೇಕೆ ಸಾಕಾಣಿಕೆಯಲ್ಲಿ ರೈತರಿಗೆ ಕುರಿ ಮತ್ತು ಮೇಕೆಗಳ ತಳಿಗಳ ಪರಿಚಯ ಮಾಡಲಾಗುವುದು. ಕುರಿಗಳಿಗೆ ಸೂಕ್ತ ವಸತಿ ನಿರ್ಮಾಣದ ಬಗ್ಗೆ ಮಾಹಿತಿ ನೀಡಲಾಗುವುದು. ಕುರಿ ಮತ್ತು ಮೇಕೆಗಳ ಮರಿಗಳ ಆರೈಕೆ ಹೇಗೆ ಮಾಡಬೇಕೆಂಬುದರ ಕುರಿತು ತಿಳಿಸಲಾಗುವುದು. ಕುರಿ, ಮೇಕೆಗಳಿಗೆ ನೀಡುವ ಆಹಾರ, ರಸಮೇವು, ಅಜೋಲ್ಲಾ ಮತ್ತು ಜಲಕೃಷಿ ಮೇವು ಉತ್ಪಾದನೆ ಹೇಗೆ ಮಾಡಬೇಕು, ಈ ಮೇವು ಪಶುಗಳಿಗೆ ಎಷ್ಟು ಪ್ರಯೋಜನಕಾರಿ ಎಂಬ ಮಾಹಿತಿ ನೀಡಲಾಗುವುದು. ಜಾನುವಾರುಗಳಿಗೆ ಬರುವ ರೋಗಗಳು ಮತ್ತು ಅವುಗಳನ್ನು ಹೇಗೆ ತಡೆಯಬೇಕು. ಕುರಿ ಸಾಕಾಣಿಕೆ ಮಾಡಿದನಂತರ ಅವುಗಳಿಗೆ ಮಾರುಕಟ್ಟೆ ಅವಕಾಶಗಳ ಬಗ್ಗೆ ಮಹತ್ವದ್ದಾಗಿರುವುದರಿಂದ ಇದರ ಬಗ್ಗೆ ರೈತರಿಗೆ ಸಂಪೂರ್ಣ ಮಾಹಿತಿ ನೀಡಲಾಗುವುದು. ಕುರಿ ಮತ್ತು ಮೇಕೆ ಸಾಕಾಣಿಕೆ ಮಾಡಲಿಚ್ಚಿಸುವ ರೈತರಿಗೆ ಕುರಿ ಶೆಡ್ ನಿರ್ಮಾಣ ಮಾಡಲು ರೈತರಿಗೆ ಹೇಗೆ ಸಾಲ ಸೌಲಭ್ಯ ಪಡೆಯಬಹುದು. ಸಾಲ ಪಡೆಯಲು ಎಷ್ಟು ಸಬ್ಸಿಡಿ ಇರುತ್ತದೆ ಎಂಬಿತ್ಯಾದಿ ಮಾಹಿತಿಗಳನ್ನು ನೀಡಲಾಗುವುದು.
ಪಶುಪಾಲಕರ ಸಹಾಯವಾಣಿ
ಕುರಿ ಸಾಕಾಣಿಕೆ ತರಬೇತಿಯು ಕೇವಲ ಕಲಬುರಗಿ ಜಿಲ್ಲೆಯಲ್ಲಿ ಮಾತ್ರವಲ್ಲದೆ ಇತರ ಜಿಲ್ಲೆಗಳಲ್ಲಿಯೂ ಹಮ್ಮಿಕೊಳ್ಳಲಾಗುವುದು. ಕುರಿ ಮತ್ತು ಮೇಕೆ ಸಾಕಾಣಿಕೆ ನಿಮ್ಮ ಜಿಲ್ಲೆಯಲ್ಲಿ ಯಾವಾಗ ಹಮ್ಮಿಕೊಳ್ಳಲಾಗುವುದು ಎಂಬುದನ್ನು ತಿಳಿದುಕೊಳ್ಳಲು ರೈತರು ಪಶುಪಾಲಕರ ಸಹಾಯವಾಣಿಗೆ ಕರೆ ಮಾಡಿ ತಿಳಿದುಕೊಳ್ಳಬಹುದು.
ರೈತರು 8277 100 200 ನಂಬರಿಗೆ ಕರೆ ಮಾಡಿದರೆ ಸಾಕು, ನಿಮ್ಮ ಜಿಲ್ಲೆಯಲ್ಲಿ ಕುರಿ, ಮೇಕೆ, ಹೈನುಗಾರಿಕೆ, ಮೊಲ ಸಾಕಾಣಿಕೆ ಯಾವಾಗ ಹಮ್ಮಿಕೊಳ್ಳಲಾಗುವುದು ಎಂಬ ಮಾಹಿತಿ ಪಡೆಯಬಹುದು.