Krishi yantradhare ಕೃಷಿ ಯಂತ್ರೋಪಕರಣ ಖರೀದಿಸಲು ಸಾಧ್ಯವಾಗದ ಸಣ್ಣ ಮತ್ತು ಮಧ್ಯಮ ವರ್ಗದ ರೈತರ ಕೃಷಿ ಕಾಯಕಕ್ಕೆ ಆಧುನಿಕ ಯಂತ್ರಗಳು ದೊರೆಯುಂತಾಗಲಿ ಎಂಬ ಸರ್ಕಾರದ ಮಹತ್ವಕಾಂಕ್ಷೆಯ ಯೋಜನೆ ಕೃಷಿ ಯಂತ್ರಧಾರೆ. ಕೃಷಿಯಲ್ಲಿ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಿ ಕೃಷಿಯನ್ನು ಲಾಭದಾಯಕಾಗಿ (Agricultural Machinery Center for farmers help) ರೂಪಿಸಲು ಈ ಯೋಜನೆ ಜಾರಿಗೆ ತರಲಾಗಿದೆ.
ಇತ್ತೀಚೆಗೆ ರೈತರು ಕೂಲಿಕಾರ್ಮಿಕರ ಸಮಸ್ಯೆ ಎದುರಿಸುತ್ತಿರುವ ಸಮಸ್ಯೆಯನ್ನು ಮನಗಂಡು ರಾಜ್ಯದ ಎಲ್ಲಾ ಜಿಲ್ಲೆಗಳ ಹೋಬಳಿ ಕೇಂದ್ರಗಳಲ್ಲಿ ಕೃಷಿ ಯಂತ್ರಧಾರೆ ಯೋಜನೆಯಡಿಯಲ್ಲಿ ಕೃಷಿ ಯಂತ್ರೋಪಕರಣಗಳನ್ನು ಒದಗಿಸುತ್ತಿದೆ. ಹೌದು ಸರ್ಕಾರವು 2014-15 ರ ಸಾಲಿನಲ್ಲಿಯೇ ಹೋಬಳಿ ಮಟ್ಟದಲ್ಲಿ ರೈತರಿಗೆ ಸಕಾಲಕ್ಕೆ ಕಡಿಮೆ ಬಾಡಿಗೆ ದರದಲ್ಲಿ ಕೃಷಿ ಯಂತ್ರೋಪಕರಣಗಳನ್ನು ಪೂರೈಕೆ ಮಾಡಲು ಕೃಷಿ ಯಂತ್ರೋಪಕರಣಗಳ ಬಾಡಿಗೆ ಆಧಾರಿತ ಸೇವಾ ಕೇಂದ್ರಗಳ ಸ್ಥಾಪನೆ ಮಾಡಿದೆ.
ಕೃಷಿ ಯಂತ್ರೋಪಕರಣ ಖರೀದಿ ಮಾಡಲು ಸಾಧ್ಯವಾಗದ ಸಣ್ಣ ಮತ್ತು ಮಧ್ಯಮ ವರ್ಗದ ರೈತರೂ ಕೈಗೆಟುಕುವ ಬಾಡಿಗೆ ದರದಲ್ಲಿ ಕೃಷಿ ಯಂತ್ರೋಪಕರಣಗಳನ್ನು ಕೃಷಿ ಯಂತ್ರಧಾರೆ ಯೋಜನೆಯಡಿಯಲ್ಲಿ ಒದಗಿಸಲಾಗುತ್ತದೆ. ಇದರಿಂದ ರೈತರಿಗೆ ಕೂಲಿ ಕಾರ್ಮಿಕರ ಸಮಸ್ಯೆಯೂ ಬಗೆಹರಿಯುತ್ತದೆ. ಇದರೊಂದಿಗೆ ಸಮಯ ಉಳಿತಾಯವಾಗುವುದರೊಂದಿಗೆ ಸುಗಮವಾಗಿ ಕೆಲಸ ಆಗುತ್ತದೆ. ಸಮಯಕ್ಕೆ ಸರಿಯಾಗಿ ಬೇಸಾಯ ಕೈಗೊಂಡು ಹೆಚ್ಚು ಉತ್ಪಾದನೆ ಪಡೆಯಬಹುದು.
ಹಾಗಾದರೆ ಈ ಕೃಷಿ ಯಂತ್ರಧಾರೆ ಸೇವಾ ಕೇಂದ್ರಗಳು ಎಲ್ಲೆಲ್ಲಿವೆ, ನೋಂದಣಿ ಮಾಡಿಸುವುದು ಹೇಗೆ, ಯಾವ ಯಾವ ಕೃಷಿ ಯಂತ್ರೋಪಕರಣಗಳು ಲಬ್ಯವಿದೆ ಹಾಗೂ ಬಾಡಿಗೆ ದರ ಹೀಗೆ ಹತ್ತುಹಲವಾರು ಪ್ರಶ್ನೆಗಳು ನಿಮ್ಮಲ್ಲಿ ಮೂಡಿದೆ ಅದಕ್ಕೆಲ್ಲ ಉತ್ತರ ಇಲ್ಲಿದೆ.
ರಾಜ್ಯದಲ್ಲಿ 490 Krishi yantradhare ಕೇಂದ್ರಗಳಿವೆ
ಸದ್ಯ ರಾಜ್ಯದ 490 ಹೋಬಳಿ ಸ್ಥಳಗಳಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಈ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಈ ಕೇಂದ್ರಗಳನ್ನು ಧರ್ಮಸ್ಥಳ, ಐಎಸ್ಎಪಿ, ಮಹೀಂದ್ರಾ ಆ್ಯಂಡ್ ಮಹೀಂದ್ರ ಲಿಮಿಟೆಡ್ ಸೇರಿದಂತೆ ಇತರ ಎನ್ಜಿಓಗಳಿಗೆ ಜವಾಬ್ದಾರಿ ವಹಿಸಲಾಗಿದೆ.
25 ಜಿಲ್ಲೆಗಳ 164 ಹೋಬಳಿಗಳ ಕೇಂದ್ರಗಳಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆಯಲ್ಲಿ ಮುನ್ನಡೆಯುತ್ತಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಿರ್ವಹಿಸಲಾಗುತ್ತಿದೆ.
ಇಂಡಿಯನ್ ಸೊಸೈಟಿ ಆಫ್ಆಗ್ರಿ ಆಗ್ರಿಬಿಸಿನೆಸ್ ಪ್ರೊಫೆಶನಲ್ಸ್ ಸಂಸ್ಥೆ 3 ಜಿಲ್ಲೆಗಳ 11 ಹೋಬಳಿಯಲ್ಲಿ ಕೃಷಿ ಯಂತ್ರಧಾರೆ ಸೇವಾ ಕೇಂದ್ರಗಳನ್ನು ನಡೆಸುತ್ತಿದೆ.
ಇದನ್ನೂ ಓದಿ DBT APP ನಲ್ಲಿ ಚೆಕ್ ಮಾಡಿ ಯಾವ ಯೋಜನೆಯಿಂದ ಹಣ ಜಮೆ?
2015-16ನೇ ಸಾಲಿನಿಂದ ಕಲಾಚೇತನ ಯುವ ಸಂಸ್ಥೆ ವಿಜಯಪುರದಲ್ಲಿ 7, ಪಂಜಾಬ್ನ ಮಹೀಂದ್ರ ಆ್ಯಂಡ್ ಮಹೀಂದ್ರ ಲಿಮಿಟೆಡ್ 3 ಜಿಲ್ಲೆಗಳ 39 ಹೋಬಳಿಗಳಲ್ಲಿ, ಮುಂಬೈನ ಮಹೀಂದ್ರ ಆ್ಯಂಡ್ ಮಹೀಂದ್ರ ಲಿಮಿಟೆಡ್ 5 ಜಿಲ್ಲೆಗಳ 62 ಹೋಬಳಿಯಲ್ಲಿ, ಬೆಂಗಳೂರಿನ ವಿಎಸ್ಟಿ ಲಿಮಿಟೆಡ್ 9 ಜಿಲ್ಲೆಗಳ 91 ಹೋಬಳಿಯಲ್ಲಿ, ಜಾನ್ ಡೀರ್ ಇಂಡಿಯಾ ಲಿಮಿಟೆಡ್ 11 ಜಿಲ್ಲೆಗಳ 116 ಹೋಬಳಿಯಲ್ಲಿ ಕೃಷಿ ಯಂತ್ರಧಾರೆ ಕೇಂದ್ರಗಳನ್ನು ನಡೆಸುತ್ತಿದೆ. ಆಯಾ ಜಿಲ್ಲೆ, ತಾಲೂಕಿನಲ್ಲಿರುವ ಬೆಳೆಗಳ ಬಗ್ಗೆ ಅಧ್ಯಯನ ನಡೆಸಿ ಅಲ್ಲಿನ ರೈತರಿಗೆ ಬೇಕಾಗುವ ಯಂತ್ರೋಪಕರಣಗಳನ್ನು ದೊರೆಯುವಂತೆ ಮಾಡಿರುವುದು ‘ಕೃಷಿ ಯಂತ್ರಧಾರೆ’ ವಿಶೇಷ.
ಯಾವ್ಯಾವ ಕೃಷಿ ಯಂತ್ರೋಪಕರಣಗಳು ಬಾಡಿಗೆ ಸಿಗುತ್ತವೆ?
ಟ್ರ್ಯಾಕ್ಟರ್, ಪವರ್ ಟಿಲ್ಲರ್, ರೋಟರಿ ಟಿಲ್ಲರ್, ಎಂ.ಬಿ.ನೇಗಿಲು, ರೋಟಾವೇಟರ್, ಡಿಸ್ಕ್ ನೇಗಿಲು, ಡಿಸ್ಕ್ ಹ್ಯಾರೋ, ನೇಗಿಲು, ಕಬ್ಬಿನ ಸ್ಟಬಲ್ ಶೇವರ್ ಮತ್ತು ನೇಗಿಲು, ಲೆವೆಲ್ಲರ್ ಬ್ಲೇಡ್, ಕೇಜ್ ವೀಲ್, ಬ್ಲೇಡ್ ಕುಂಟೆ, ಬದು ನಿರ್ಮಾಣ ಯಂತ್ರ, ಭತ್ತ ನಾಟಿ ಯಂತ್ರ, ಬದು ಮತ್ತು ಸಾಲು ತೆಗೆಯುವ ಯಂತ್ರ, ಲೇಸರ್ ಆಧಾರಿತ ಸಮತಟ್ಟು ಯಂತ್ರ, ಗುಂಡಿ ತೆಗೆಯುವ ಯಂತ್ರ, ಬಿತ್ತನೆ ಮತ್ತು ರಸಗೊಬ್ಬರ ಕೂರಿಗೆ ಯಂತ್ರ, ಶೂನ್ಯ ಬೇಸಾಯ ಹೊದಿಕೆ ಯಂತ್ರ, ಸಿಂಪರಣಾ ಯಂತ್ರಗಳು (ನ್ಯಾಪ್ ಸ್ಯಾಕ್, ಬ್ಯಾಟರಿ ಚಾಲಿತ, ವಿದ್ಯುತ್ ಚಾಲಿತ, ಗಟಾರ್, ಹೆಚ್ಟಿಪಿ), ಬಹು ಬೆಳೆ ಒಕ್ಕಣೆ ಯಂತ್ರ, ಕೂರಿಗೆ, ನರ್ಸರಿ ಟ್ರೇ, ಕಳೆ ತೆಗೆಯುವ ಯಂತ್ರ, ತೂರುವ ಯಂತ್ರ, ನೆಲಗಡಲೆ ಸುಲಿಯುವ/ಒಕ್ಕಣೆ ಯಂತ್ರ, ಕಬ್ಬು ಸ್ಟ್ರೀಪ್ಪರ್, ಅಡಿಕೆ ಸುಲಿಯುವ ಯಂತ್ರ, ಕಟಾವು ಯಂತ್ರ, ಬಹುಬೆಳೆ ಕಟಾವು ಯಂತ್ರ, ಕಾಳು ಮೆಣಸು ಬಿಡಿಸುವ ಯಂತ್ರ, ಪಂಪ್ ಸೆಟ್, ನೀರಿನ ಟ್ಯಾಂಕರ್, ಅಲ್ಯುಮಿನಿಯಂ, ಪೈಪುಗಳು, ಸ್ಟ್ರಿಂಕ್ಲರ್ಗಳು, ತಳ್ಳು ಗಾಡಿ, ಅಡಿಕೆ/ ತೆಂಗಿನ ಮರ ಹತ್ತುವ ಯಂತ್ರ, , ಟ್ರಾಲಿಗಳು, ಗರಗಸ ಹೀಗೆ 44 ಬಗೆಯ ಯಂತ್ರ/ ಉಪಕರಣಗಳು ಲಭ್ಯವಿದೆ. ಆದರೆ ಇದೆಲ್ಲಾ. ಆಯಾ ಭಾಗದ ಕೃಷಿ ಅವಶ್ಯಕತೆಗೆ ಅನುಗುಣವಾಗಿ ಉಪಕರಣಗಳು ಕೇಂದ್ರದಲ್ಲಿವೆ.
ಬಾಡಿಗೆಗೆ ಪಡೆಯುವುದು ಹೇಗೆ?
ಕೃಷಿ ಯಂತ್ರೋಪಕರಣ ಬಾಡಿಗೆಗೆ ಬೇಕಾದಲ್ಲಿ ಸಮೀಪದ ಕೃಷಿ ಯಂತ್ರಧಾರೆ ಕೇಂದ್ರಕ್ಕೆ ಹೋಗಿ ಬೇಕಾದ ಯಂತ್ರವನ್ನು ಮುಂಗಡ ಹಣ ಪಾವತಿಸಿ ಕಾಯ್ದಿರಿಸಬಹುದು ಏಕಕಾಲದಲ್ಲಿ ಅಲ್ಲಿನ ಎಲ್ಲಾ ರೈತರಿಗೆ ಒಂದೇ ಬಗೆಯ ಯಂತ್ರಗಳು ಬೇಕಾಗುವ ಸಂದರ್ಭದಲ್ಲಿ ಯಂತ್ರಗಳ ಲಭ್ಯತೆಯನ್ನು ನೋಡಿಕೊಂಡು ಬಾಡಿಗೆ ನೀಡಲಾಗುವುದು. ಒಂದು ವಾರ ಮುಂಚಿತವಾಗಿ ಕಾಯ್ದಿರಿಸುವ ಸೌಲಭ್ಯವಿದೆ. ಯಂತ್ರೋಪಕರಣ ಬಾಡಿಗೆ ದರ ಮತ್ತು ಲಭ್ಯವಿರುವ ಯಂತ್ರಗಳ ಪಟ್ಟಿಯನ್ನು ಎಲ್ಲ ಕೃಷಿ ಯಂತ್ರಧಾರೆ ಕೇಂದ್ರದಲ್ಲಿ ಪ್ರಕಟಿಸಲಾಗಿರುತ್ತದೆ. ಇತರ ಕಡೆಗಳಲ್ಲಿ ದೊರೆಯುವ ಯಂತ್ರಗಳಿಗೆ ಹೋಲಿಸಿದರೆ ಇಲ್ಲಿ ಬಾಡಿಗೆ ಕಡಿಮೆ.
Krishi yantradhareಯ ಸಿಬ್ಬಂದಿಯೂ ಬರುತ್ತಾರೆ ?
ಬಾಡಿಗೆ ಕೇಂದ್ರದಿಂದ ಯಂತ್ರ ಕಳಿಸಿಕೊಡುವಾಗ ಜತೆಗೆ ನುರಿತ ಸಿಬ್ಬಂದಿಯೂ ಬಂದಿರುತ್ತಾರೆ. ಗದ್ದೆ, ತೋಟಕ್ಕೆ ಯಂತ್ರ ಕೆಲಸಕ್ಕೆ ಇಳಿದ ನಂತರ ಬಾಡಿಗೆ ನೀಡಬೇಕಾದ ಸಮಯ ಆರಂಭವಾಗುತ್ತದೆ. ಸಮಯದ ಲೆಕ್ಕಚಾರವನ್ನು ಆ ಯಂತ್ರವನ್ನು ಚಾಲನೆ ಅಥವಾ ಬಳಸುವವರೇ ನೋಡಿಕೊಳ್ಳುತ್ತಾರೆ. ಪ್ರತ್ಯೇಕವಾಗಿ ಚಾಲಕನಿಗೆ ಸಂಬಳ ನೀಡಬೇಕಾದ ಅಗತ್ಯಲ್ಲ. ಕೆಲವೊಂದು ಚಾಲಕ ರಹಿತ ಯಂತ್ರಗಳನ್ನು ನೇರವಾಗಿ ರೈತರಿಗೆ ನೀಡಲಾಗುತ್ತದೆ.
ನಿಮ್ಮ ಹತ್ತಿರದ ಕೃಷಿ ಯಂತ್ರಧಾರೆಗೆ ಭೇಟಿ ನೀಡಿ ಯಾವ್ಯಾವ ಉಪಕರಣಗಳಿವೆ ಹಾಗೂ ಅದರ ಬಾಡಿಗೆ ಏನೆಂಬುದನ್ನು ವಿಚಾರಿಸಿ ನಿಮಗೆ ಬೇಕಾದ ಯಂತ್ರೋಪಕರಣಗಳನ್ನು ಬಾಡಿಗೆ ಪಡೆಯಲು ಮುಂಗಡವಾಗಿ ಕಾಯ್ದಿರಿಸಿಕೊಳ್ಳಿ. ಇಲ್ಲಿ ಇತರ ಕೃಷಿ ಯಂತ್ರೋಪಕರಣಗಳಿಗಿಂತ ಶೇ. 10 ರಿಂದ 20 ರಷ್ಟು ಕಡಿಮೆ ದರ ಇರುತ್ತದೆ.