Croploan to be waived ರಾಜ್ಯದಲ್ಲಿ ತೀವ್ರ ಬರಗಾಲದ ಹಿನ್ನೆಯಲ್ಲಿ ರೈತರು ಸಹಕಾರಿ ಬ್ಯಾಂಕುಗಳಲ್ಲಿ ಪಡೆದಿರುವ ಮಧ್ಯಮಾವಧಿ, ದೀರ್ಘಾವದಿ ಕೃಷಿ ಮತ್ತು ಕೃಷಿ ಸಂಬಂಧಿತ ಸುಸ್ತಿ ಸಾಲಗಳ ಮೇಲಿನ ಬಡ್ಡಿ ಮನ್ನಾ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.ಇದರಿಂದ ರಾಜ್ಯದ 56879 ಮಂದಿ ರೈತರ 440.30 ಕೋಟಿ ರೂಪಾಯಿ ಬಡ್ಡಿ ಮನ್ನಾ ಆಗಲಿದೆ.
ಬೆಳಗಾವಿ ಅಧಿವೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಡ್ಡಿ ಮನ್ನಾ ಸಂಬಂಧ ಘೋಷಣೆ ಮಾಡಿದ್ದರು. ಇದೀಗ ರಾಜ್ಯ ಸರ್ಕಾರ ಈ ಬಗ್ಗೆ ಆದೇಶ ಹೊರಡಿಸಿದೆ.
ಹೌದು, 2024 ರ ಫೆಬ್ರವರಿ 20 ರ ಒಳಗೆ ಸಂಬಂಧಪಟ್ಟ ಸಹಕಾರ ಸಂಘ ಹಾಗೂ ಬ್ಯಾಂಕುಗಳಿಗೆ ಸಂಪೂರ್ಣ ಸಾಲ ಬಾಕಿ ಪಾವತಿಸಿದರೆ ಮಾತ್ರ ಮನ್ನಾ ಲಾಭ ಸಿಗಲಿದೆ ಎಂದು ಸಹಕಾರ ಇಲಾಖೆ ತಿಳಿಸಿದೆ.
ರಾಜ್ಯ ಸರ್ಕಾರದ ಆದೇಶ ಆಧರಿಸಿ ಶನಿವಾರ ಎಲ್ಲಾ ಸಹಕಾರ ಬ್ಯಾಂಕುಗಳಿಗೂ ಸಹಕಾರ ಇಲಾಖೆಯು ಸುತ್ತೋಲೆ ಹೊರಡಿಸಿದೆ.
ಇದರಲ್ಲಿ ರೈತರು ರಾಜ್ಯದ ಸಹಕಾರ ಸಂಘಗಳು ಅಂದರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಲ್ಯಾಂಪ್ಸ್, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕುಗಳು ಮತ್ತು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕುಗಳಿಂದ ಮಧ್ಯಮಾವಧಿ, ದೀರ್ಘಾವಧಿ ಕೃಷಿ ಮತ್ತು ಕೃಷಿ ಸಂಬಂಧಿತ ಸಾಲ ಪಡೆದು ಸುಸ್ತಿಯಾಗಿರುವ ಸಾಲಗಳ ಡಿಸೆಂಬರ್ 31 ರವರೆಗಿನ ಕಂತುಗಳನ್ನು ಫೆಬ್ರವರಿ 20 ರ ಒಳಗಾಗಿ ಪಾವತಿಸಿದರೆ ಅಂತಹವರ ಬಡ್ಡಿಯನ್ನು (ಮರು ಪಾವತಿ ದಿನಾಂಕದವರೆಗೆ) ಸಂಪೂರ್ಣ ಮನ್ನಾ ಮಾಡಲಾಗುವುದು. ಈ ಬಡ್ಡಿಯನ್ನು ಸಹಕಾರ ಸಂಘಗಳಿಗೆ ಸರ್ಕಾರದಿಂದ ಭರ್ತಿ ಮಾಡಿಕೊಡಲಾಗುವುದು ಎಂದು ತಿಳಿಸಲಾಗಿದೆ.
45 ದಿನಗಳ ಒಳಗೆ ಬಿಲ್ಲು ಸಲ್ಲಿಸಬೇಕು
ಸುಸ್ತಿ ಸಾಲಗಾರರಾಗಿರುವ ರೈತರಿಗೆ 5 ದಿನಗಳೊಳಗಾಗಿ ತಿಳಿವಳಿಕೆ ಪತ್ರ ಕಳುಹಿಸಬೇಕು. ಸಾಲ ವಸೂಲಾತಿಗೆ ನಿಗದಿಪಡಿಸಿರುವ ಫೆಬ್ರವರಿ 20 ದಿನಾಂಕದಿಂದ 45 ದಿನಗಳೊಳಗಾಗಿ (ಏಪ್ರೀಲ್ 15 ರ ಒಳಗಾಗಿ)ಬಡ್ಡಿ ಮನ್ನಾ ಬಗೆಗಿನ ಬಿಲ್ಲುಗಳನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಲ್ಯಾಂಪ್ಸ್, ಪಿಕಾರ್ಡ್, ಬ್ಯಾಂಕ್, ಡಿಸಿಸಿ ಬ್ಯಾಂಕ್ ಶಾಖೆಗಳು ಸಹಕಾರ ಇಲಾಖೆಗೆ ಸಲ್ಲಿಸಬೇಕು ಎಂದು ತಿಳಿಸಲಾಗಿದೆ.
ಬಡ್ಡಿ ಮನ್ನಾಕ್ಕೆ ಇಱುವ ಷರತ್ತುಗಳೇನು?
ಈ ಸೌಲಭ್ಯ ರೈತರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಲ್ಯಾಂಪ್ಸ್ ಸಹಕಾರ ಸಂಘಗಳು, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕುಗಳು ಮತ್ತು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕುಗಳಿಂದ ಸಾಲ ಪಡೆದು ದಿನಾಂಕ 31-12-2023ಕ್ಕೆ ಸುಸ್ತಿಯಾಗಿರುವ ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಮತ್ತು ಕೃಷಿ ಸಂಬಂಧಿತ ಸಾಲಗಳಿಗೆ ಮಾತ್ರ ಅನ್ವಯವಾಗುತ್ತದೆ.
ಇದನ್ನೂ ಓದಿ : ಈ ಜಿಲ್ಲೆಯ ರೈತರಿಗೆ 12.50 ಕೋಟಿ ಬರ ಪರಿಹಾರ ಹಣ ಜಮೆ
ಈ ಯೋಜನೆಯಲ್ಲಿಸಾಲಗಳಿಗೆ ಯಾವುದೇ ಸುಸ್ತಿ ಬಡ್ಡಿ, ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಬಡ್ಡಿ, ವಸೂಲಿ ವೆಚ್ಚ ಹಾಗೂ ಇತರೆ ವೆಚ್ಚಗಳನ್ನು ಸಹಕಾರ ಸಂಸ್ಥೆಗಳು ಕ್ಲೇಮ್ ಮಾಡುವಂತಿಲ್ಲ.
ಬೆಳೆ ಸಾಲಕ್ಕೆ ಅನ್ವಯವಿಲ್ಲ
ಬಡ್ಡಿ ಮನ್ನಾವು ಮಧ್ಯಮಾವಧಿ ಹಾಗೂ ದೀರ್ಘಾವಧಿ ಕೃಷಿ ಹಾಗೂ ಕೃಷಿ ಸಂಬಂಧಿತ ಸುಸ್ತಿ ಸಾಲಗಳಿಗೆ ಮಾತ್ರ ಅನ್ವಯವಾಗಲಿದೆ. ಬೆಳೆ ಸಾಲವು ಅಲ್ಪಾವಧಿ ಸಾಲವಾಗಿದ್ದು, ಶೂನ್ಯ ಬಡ್ಡಿ ದರದಲ್ಲಿ ಬ್ಯಾಂಕುಗಳು ನೀಡುತ್ತವೆ. ಹೀಗಾಗಿ ಅದಕ್ಕೆ ಬಡ್ಡಿ ಮನ್ನಾ ಅನ್ವಯಿಸುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮಧ್ಯಮಾವಧಿ ಸಾಲವನ್ನು 12 ತಿಂಗಳಿಂದ 36 ತಿಂಗಳಿಗೆ ಹಾಗೂ ದೀರ್ಘಾವಧಿ ಸಾಲವನ್ನು 10 ವರ್ಷದ ಅವಧಿವರೆಗೆ ನೀಡಲಾಗುತ್ತದೆ.
Croploan to be waived ಬೆಳೆ ಸಾಲಮನ್ನಾ ಸ್ಟೇಟಸ್ ಮೊಬೈಲ್ ನಲ್ಲೇ ಚೆಕ್ ಮಾಡಿ
ರೈತರಿಗೆ ಬೆಳೆಸಾಲಮನ್ನಾ ಆಗಿದೆಯೋ ಇಲ್ಲವೋ ಎಂಬುದನ್ನು ಈಗ ಮೊಬೈಲ್ ನಲ್ಲೇ ಚೆಕ್ ಮಾಡಬಹದು. ಹೌದು, ಈ
https://clws.karnataka.gov.in/clws/pacs/citizenreport/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮ್ಮ ಆಧಾರ್ ನಂಬರ್ ಹಾಕಿ ಬೆಳೆ ಸಾಲಮನ್ನಾ ಸ್ಟೇಟಸ್ ಚೆಕ್ ಮಾಡಬಹುದು.