ಅರಬ್ಬಿ ಸಮುದ್ರದ ಆಗ್ನೆಯ ಭಾಗದಲ್ಲಿ ವಾಯುಭಾರ ಕುಸಿತ ಹಾಗೂ ತೌಕ್ತೇ ಚಂಡಮಾರುತ ಪರಿಣಾಮವಾಗಿ (Cyclone effect ) ರಾಜ್ಯದಲ್ಲಿ ಮೂರು ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ರಾಜ್ಯಕ್ಕೆ ಆಗಮಿಸುತ್ತಿರುವ ವರ್ಷದ ಮೊದಲ ಚಂಡಮಾರುತ ಇದಾಗಿದೆ. ಕರ್ನಾಟಕ, ಮಹಾರಾಷ್ಟ್ರ, ಗುಜರಾತ ಮತ್ತು ಕೇರಳದ 9 ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಕರ್ನಾಟಕದಲ್ಲಿ ಮೇ 15 ಮತ್ತು 16ರಂದು ದಕ್ಷಿಣ ಒಳನಾಡಿನ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ. ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಹಾಗೂ ಕೊಡಗು ಜಿಲ್ಲೆಗಳ ಕೆಲವು ಕಡೆ ಮೇ.17ರಂದು ಭಾರಿ ಮಳೆಯಾಗುವ ಸಾಧ್ಯತೆ ಇದೆ.
Cyclone effect ಕರಾವಳಿಯಲ್ಲಿ ರೆಡ್ ಅಲರ್ಟ್
ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಹಾಗೂ ಹಾಸನದಲ್ಲಿ ಮೇ 15 ರಂದು ವ್ಯಾಪಕ ಮಳೆಯಾಗಲಿದೆ. ಈ ಹಿನ್ನೆಲೆಯಲ್ಲಿ ಇಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.
ಉತ್ತರ ಕರ್ನಾಟಕದಲ್ಲಿ ಯೆಲ್ಲೋ ಅಲರ್ಟ್:
ಮಲೆನಾಡು, ಕರಾವಳಿ ಹಾಗೂ ಬೆಂಗಳೂರಿನಲ್ಲಿ ಸುರಿಯ ಮಳೆ ಉತ್ತರ ಕರ್ನಾಟಕಕ್ಕೂ ಕಾಲಿಡುವ ಸಾಧ್ಯತೆ ಹೆಚ್ಚಿದೆ. ಈಗಾಗಲೇ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ವಿಜಯಪುರ, ಬಾಗಲಕೋಟೆ ಬೆಳಗಾವಿ, ಧಾರವಾಡ, ಹಾವೇರಿ, ಗದಗ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಮೀನುಗಾರರಿಗೆ ಎಚ್ಚರಿಕೆ:
ಸಮುದ್ರದಲ್ಲಿ ತೌಕ್ತೆ ಚಂಡಮಾರುತದ ಅಬ್ಬರ ಹೆಚ್ಚಾಗಿರುವುದರಿಂದ ಮೂರು ದಿನ ಭಾರಿ ಮಳೆಯಾಗುವ ಹಿನ್ನೆಲೆಯಲ್ಲಿ ಒಂದು ವಾರ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ. ಶನಿವಾರ ಮೇ.15 ರಂದು ಬೆಳಿಗ್ಗೆಯಿಂದ ತೌಕ್ಟೇ ಚಂಡಮಾರುತ ತೀವ್ರಗೊಳ್ಳಲಿದೆ. ಮೇ.16-19 ವರೆಗೆ ಪ್ರತಿ ಗಂಟೆಗೆ 150-160 ರಿಂದ ಪ್ರಾರಂಭಿಸಿ 175 ಕಿ.ವೇಗದಲ್ಲಿ ಈ ಚಂಡಮಾರುತ ಸಂಚರಿಸಲಿದೆ.
ಕರಾವಳಿಯಲ್ಲಿ ಶುರುವಾಗಿದೆ ಮಳೆ:
ಅರಬ್ಬಿ ಸಮುದ್ರದಲ್ಲಿ ಸೃಷ್ಟಿಯಾಗಿರುವ ವಾಯುಭಾರ ಕುಸಿತ ಚಂಡಮಾರುತವಾಗಿ ಪರಿವರ್ತನೆಯಾಗಿದ್ದು, ಕರಾವಳಿ ಜಿಲ್ಲೆಯಾದ್ಯಂತ ಮಳೆಯಾಗುತ್ತಿದೆ. ಜಿಲ್ಲೆಯ ಕೆಲವೆಡೆ ಶುಕ್ರವಾರ ರಾತ್ರಿಯೇ ಮಳೆ ಆರಂಭಗೊಂಡಿದ್ದು, ಶನಿವಾರವೂ ಮುಂದುವರೆದಿದೆ. ಮಳೆಯ ಜೊತೆ ಗಾಳಿ ಕೂಡ ಇದ್ದು, ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಿದೆ.
ಸಮುದ್ರದಲ್ಲಿ ಅಲೆಗಳ ಆರ್ಭಟ ಹೆಚ್ಚಾಗಿದ್ದರಿಂದ ಸಮುದ್ರ ತೀರದಲ್ಲಿರುವ ಜನರು ವಿಹಾರಕ್ಕಾಗಲಿ ಬೇರೆ ಯಾವುದೇ ಕಾರಣಕ್ಕೆ ಸಮುದ್ರ ದಡಕ್ಕೆ ಹೋಗಬಾರದು. ಏಕೆಂದರೆ ನೀರಿನ ಅಲೆ ಕೆಲವು ಸಲ ವ್ಯಾಪ್ತಿ ಮೀರಿ ಬರುವ ಸಾಧ್ಯತೆಯಿರುತ್ತದೆ. ಮಳೆಯ ಪ್ರಮಾಣವೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರಿಂದ ನೀರಿನ ಪ್ರಮಾಣ ಕೆಲವು ಸಲ ಗೊತ್ತಾಗುವುದಿಲ್ಲ. ಮಳೆ ನೀರು ನಿಂತ ಮೇಲೆ ನೀರಿನ ಪ್ರಮಾಣ ತುಂಬಾ ಕಡಿಮೆಯಾದ ನಂತರ ಸಮುದ್ರದ ತೀರದಲ್ಲಿ ಅಲೆದಾಡಬಹುದು. ಮೀನುಗಾರರು ಎಚ್ಚರಿಕೆಯಿಂದ ಇರಬೇಕೆಂದು ಸೂಚಿಸಲಾಗಿದೆ.