Red gram disease : ತೊಗರಿಯ ನಾಡು ಎಂದೇ ಪ್ರಖ್ಯಾತಿಯಾಗಿರುವ ಉತ್ತರ ಕರ್ನಾಟಕದ ಪ್ರಮುಖ ಜಿಲ್ಲೆಗಳಾದ ಕಲಬುರಗಿ, ಬೀದರ್.ಯಾದಗಿರಿ, ವಿಜಯಪುರ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಸುಮಾರು 14 ಲಕ್ಷ ಹೆಕ್ಟೇರ್ ಗಿಂದಲೂ ಹೆಚ್ಚಿನ ಪ್ರದೇಶದಲ್ಲಿ ತೊಗರಿ ಬಿತ್ತನೆಯಾಗಿದೆ ಎಂದು ಕಲಬುರಗಿ ವಲಯ ಕೃಷಿ ಸಂಶೋಧನಾ ಕೇಂದ್ರದ ಹಿರಿಯ ವಿಜ್ಞಾನಿ (ಸಸ್ಯ ರೋಗಶಾಸ್ತ್ರದ) ಕೆಂಗನಾಳ್ ಅವರು ತಿಳಿಸಿದ್ದಾರೆ.
Red gram disease ಫೈಟೋಫ್ಥೋರಾ ಕಜಾನಿ ಶಿಲೀಂಧ್ರದ ಬಾಧೆ
ಕಳೆದ ಎರಡು ವಾರಗಳಲ್ಲಿ ಸತತವಾದ ಮಳೆಯಿಂದಾಗಿ ತೊಗರಿ ಬೆಳೆ ಅಲ್ಲಲ್ಲಿ ಹೆಚ್ಚಿನ ತೇವಾಂಶದ ಬಾಧೆಗೆ ಒಳಪಡುವಂತಾಗಿದೆ. ಮೋಡ ಕವಿದ ವಾತಾವರಣ ಮತ್ತು ಸತತವಾದ ಜಿಟಿ ಜಿಟಿ ಮಳೆಯಿಂದಾಗಿ ತೊಗರಿಯಲ್ಲಿ ಫೈಟೋಪ್ಥೋರಾ ಕಜಾನಿ ಎಂಬ ಶಿಲೀಂಧ್ರದ ಬಾಧೆ ಕಂಡುಬಂದಿದ್ದು, ಗಿಡದ ಎಲೆಗಳ ಅಂಚಿನ ಮೇಲೆ ನೀರಿನಿಂದ ಹಸಿಯಾಗಿ ತೊಯಿದು ನೆನೆದ ಹಾಗೆ ಮತ್ತು ಹಳದಿಯಾಗಿ ಒಣಗುತ್ತಿರುವ ಮಚ್ಚೆಗಳು ಕಂಡು ಬರುತ್ತಿದೆ. ತೊಗರಿ ಬೆಳೆಯುತ್ತಿರುವ ಎಲ್ಲಾ ರೈತರು ತೊಗರಿ ಬೆಳೆಗೆ ಯಾವುದೇ ತರಹದ ಬೇರು ಕೊಳೆ ಅಥವಾ ನೆಟೆ ರೋಗಗಳು ಬಾರದಂತೆ ಮುನ್ನೆಚ್ಚರಿಕೆ ವಹಿಸಲು ಬೆಳೆಗೆ ಟ್ರೈಕೊಡರ್ಮದಿಂದ ಉಪಚರಿಸುವುದು ಸೂಕ್ತವಾಗಿದೆ.
ರೋಗ ಹೆಚ್ಚಾದಂತೆ ಕ್ರಮೇಣವಾಗಿ ಎಲೆಗಳು ಸಂಪೂರ್ಣ ಹಳದಿಯಾಗಿ ಒಣಗಿ ಗಿಡಗಳು ಬಾಡುತ್ತಿವೆ. ಗಿಡದ ಕಾಂಡಗಳು ನೆಲದ ಹತ್ತಿರ ಕೊಳತಂತೆ ಕಂಡುಬರುತ್ತಿವೆ. ಇನ್ನು ಹೆಚ್ಚಿನ ಮಳೆಯ ನೀರು ಹರಿದು ಹೋಗದೆ ಹೊಲಗಳಲ್ಲಿ ನಿಲ್ಲುತ್ತಿರುವುದರಿಂದ ತೊಗರಿ ಗಿಡಗಳ ಬೇರುಗಳಿಗೆ ಸರಿಯಾಗಿ ಗಾಳಿ ಸಿಗದೆ ಕೊಳೆಯಲು ಪ್ರಾರಂಭಿಸಿ ನೆಟೆ ಹೋಗುತ್ತಿವೆ. ಬಾದಿತ ಗಿಡಗಳನ್ನು ಕಿತ್ತಿ ನೋಡಿದಾಗ ಕುತ್ತಿಗೆಯ ಹತ್ತಿರ ಕೊಳೆತಂತೆ ಕಂಡು ಬಂದು ಕಂದು ಬಣ್ಣದ ಮಚ್ಚೆಗಳಿಂದ ಕೂಡಿರುತ್ತದೆ.
Red gram disease ಹೊಲದಲ್ಲಿ ಮಳೆಯ ನೀರು ನಿಂತರೆ ಏನು ಮಾಡಬೇಕು?
ಈ ರೋಗದ ನಿರ್ವಹಣೆಗೆ ರೈತರು ಹೊಲಗಳಲ್ಲಿ ಮಳೆಯ ನೀರು ನಿಲ್ಲದಂತೆ ಕ್ರಮ ವಹಿಸಬೇಕು.ರೋಗಕಾರಕ ಶಿಲೀಂದ್ರದ ಕೋಶಗಳು ಮಳೆಯ ನೀರಿನೊಂದಿಗೆ ಇತರೆ ಹೊಲಗಳಿಗೆ ಹರಡುವ ಸಾಧ್ಯತೆ ಇರುತ್ತದೆ. ಹೆಚ್ಚಾದ ಮಳೆಯ ನೀರು ಹರಿದು ಹೋಗಲು ಕಾಲುವೆ ಮತ್ತು ಹರಿವುಗಳನ್ನು ಮಾಡಿ ನೀರು ಇತರೆ ಹೊಲಗಳನ್ನು ಸೇರದೆ ನಾಲೆಗಳಿಗೆ ಸೇರುವಂತೆ ದಾರಿ ಮಾಡಬೇಕು.
ಇದನ್ನೂ ಓದಿ : ನಿಮ್ಮ ಜಮೀನು ಹಿಂದೆ ಯಾರ ಯಾರ ಹೆಸರಿನಲ್ಲಿತ್ತು? ಇಲ್ಲೇ ಚೆಕ್ ಮಾಡಿ
ವಾತಾವರಣದಲ್ಲಿ ಶೇ. 85 ಕ್ಕಿಂತಲೂ ಹೆಚ್ಚಿನ ಆದ್ರತೆ ಇರುವುದರಿಂದು ಮುಂಜಾಗ್ರತಾ ಕ್ರಮವಾಗಿ ತೊಗರಿ ಬೆಳೆಗೆ ರೈತರು ಕಡಿಮೆ ಖರ್ಚಿನಲ್ಲಿ ಮಾಡಬಹುದಾದ ಟ್ರೈಕೋಡರ್ಮ ಬೆರಸಿ ಕೈಪಂಪು ಅಥವಾ ಬ್ಯಾಟರಿ ಚಾಲಿತ ಪಂಪುಗಳನ್ನು ಬಳಸಿ ಗಿಡಗಳ ಕಾಂಡ ಮತ್ತು ಬೇರುಗಳು ತೊಯುವಹಾಗೆ ಉಪಚಾರ ಮಾಡುವುದರಿಂದ ತೊಗರಿ ಗಿಡಗಳನ್ನು ಫೈಟೋಫ್ಥೋರ ಸಸಿ ಕೊಳೆ ರೋಗದ ಬಾಧೆಯಿಂದ ರಕ್ಷಿಸಬಹುದು. ರೋಗ ತೀವ್ರತೆ ಹೆಚ್ಚಾಗಿ ಇರುವ ಹೊಲಗಳಲ್ಲಿ ಮೆಟಿಲ್ಯಾಕ್ಸಿಲ್ ಶಿಲೀಂಧ್ರನಾಶಕವನ್ನು 3 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರಸಿ ಬೆಳೆಗೆ ಸಿಂಪರಣೆ ಮಾಡುವುದರಿಂದ ರೋಗದ ಹರಡುವನನ್ನು ತಡೆಯಬಹುದು.
ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ವಲಯ ಕೃಷಿ ಸಂಶೋಧನಾ ಕೇಂದ್ರ ಸಸ್ಯ ರೋಗ ಶಾಸ್ತ್ರ ವಿಭಾಗವನ್ನು ಅಥವಾ ಸಮೀಪದ ಕೃಷಿ ವಿಜ್ಞಾನ ಕೇಂದ್ರ ಮತ್ತು ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಬೇಕೆಂದು ಅವರು ತಿಳಿಸಿದ್ದಾರೆ.
ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ನಿಮ್ಮ ತೊಗರಿ ಬೆಳೆ ಮೇಲೆ ತಿಳಿಸಿದಂತಾಗಿದ್ದರೆ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಕ್ರಮಗೈಕೊಳ್ಳಬಹುದು.