ಪಂಚರಾಜ್ಯಗಳ ಚುನಾವಣಾ ಫಲಿತಾಂಶಗಳ ಪೈಕಿ ತೀವ್ರ ಕುತೂಹಲ ಹಾಗೂ ಜಿದ್ದಾಜಿದ್ದಿಗೆ ಕಾರಣವಾಗಿದ ಪಶ್ಚಿಮಬಂಗಾಳದಲ್ಲಿ ಈ ಬಾರಿಯೂ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸತತ ಮೂರನೇ ಬಾರಿಗೆ (Trinamool Headed for big win in Bengal) ಅಧಿಕಾರದ ಚುಕ್ಕಾಣಿ ಹಿಡಿಯಲು ಮುಂದಾಗಿದ್ದಾರೆ.

ದೇವರನಾಡು ಕೇರಳದಲ್ಲಿ ನಿರೀಕ್ಷೆಯಂತೆ ಎಲ್‌ಡಿಎಫ್ ಮತ್ತೆ ಅಧಿಕಾರದ ಗದ್ದುಗೆ ಏರಿದೆ. ತಮಿಳುನಾಡಿನಲ್ಲಿ ಸ್ಟಾಲಿನ್ ನೇತೃತ್ವದ ಡಿಎಂಕೆ 10 ವರ್ಷಗಳ ಬಳಿಕ ಅಧಿಕಾರಕ್ಕೆ ಬಂದಿದೆ. ಅಸ್ಸಾಂ ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೆರಿಯಲ್ಲಿ ಎನ್‌ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬಂದಿದೆ.
ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಭರ್ಜರಿ ಪೈಪೋಟಿ ನಡೆದಿದ್ದರೂ ಮಮತಾ ಬ್ಯಾನರ್ಜಿ ಸರಳ ಬಹುಮತ ಪಡೆಯುವುದು ನಿಶ್ಚಿತವಾಗಿದೆ. ಇಲ್ಲಿ ಬಿಜೆಪಿಗೆ ಭರ್ಜರಿ ಗೆಲುವು ಸಿಕ್ಕಿದ್ದು, ಬಹುಮತಕ್ಕೆ ಅಗತ್ಯವಾದ ಸಂಖ್ಯಾಬಲ ಸಿಗದಿದ್ದರೂ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಮೂಲಕ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗಟ್ಟಿ ನೆಲೆ ಕಂಡುಕೊಂಡಿದೆ.
ಸುಮಾರು ಮೂರು ದಶಕಗಳ ಕಾಲ ಪಶ್ಚಿಮ ಬಂಗಾಳವನ್ನು ಆಳಿದ್ದ ಎಡಪಕ್ಷ, ಸಂಪೂರ್ಣ ನೆಲ ಕಚ್ಚಿದ್ದು, ಕಾಂಗ್ರೆಸ್ ಪಕ್ಷ ಇಲ್ಲಿ ಮಕಾಡೆ ಮಲಗಿದೆ.
ತಮಿಳುನಾಡಿನಲ್ಲೂ ಎಐಎಡಿಎಂಕೆಯ ಯುಗ ಅಂತ್ಯವಾಗಿ ಡಿಎಂಕೆಯ ಶಕೆ ಆರಂಭವಾಗಿದೆ. ತಮಿಳುನಾಡಿನಲ್ಲಿ ಆಡಳಿತಾರೂಢ ವಿರೋಧಿ ಅಲೆ ಕಂಡುಬಂದಿದ್ದು, ಎಐಎಡಿಎಂಕೆ ಅಗತ್ಯ ಬಹುಮತ ಗಳಿಸುವಲ್ಲಿ ವಿಫಲವಾಗಿ, ಅಧಿಕಾರದಿಂದ ನಿರ್ಗಮಿಸಿದೆ.
ದಶಕಗಳ ಕಾಲದಿಂದ ಮುಖ್ಯಮಂತ್ರಿ ಹುದ್ದೆಯ ಕುರ್ಚಿ ಅಲಂಕರಿಸುವ ಕನಸು ಕಂಡಿದ್ದ ಡಿಎಂಕೆಯ ಸ್ಟಾಲಿನ್ ಅವರಿಗೆ ಕೊನೆಗೂ ತಮಿಳುನಾಡಿನ ಜನತೆಯ ಆರ್ಶೀವಾದ ಸಿಕ್ಕಿದ್ದು, ಸ್ಟಾಲಿನ್ ಮುಖ್ಯಮಂತ್ರಿ ಕುರ್ಚಿಯ ಮೇಲೆ ವಿರಾಜಮಾನರಾಗಲಿದ್ದಾರೆ.

ಇದನ್ನೂ ಓದಿ : ನರೇಂದ್ರ ಮೋದಿಗೆ ನೇರವಾಗಿ ಟಕ್ಕರ್ ನೀಡುವಷ್ಟರ ಮಟ್ಟಿಗೆ ಬೆಳೆದ ಮಮತಾ ಬ್ಯಾನರ್ಜಿ ಬಗ್ಗೆ ಒಂದಿಷ್ಟು ಮಾಹಿತಿ

ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿ ತಮ್ಮದೇ ಎಂಎನ್‌ಎಂ ಪಕ್ಷದ ಮೂಲಕ ಚುನಾವಣೆಯ ಕಣಕ್ಕೆ ಧುಮುಕಿ ಸಂಚಲನ ಮೂಡಿಸಿದ್ದ ನಟ ಕಮಲ್‌ಹಾಸನ್ ಕಮಾಲ್ ನಡೆದಿಲ್ಲ. ಬಹುತೇಕ ಕಡೆ ಎಂಎನ್‌ಎಂ ಅಭ್ಯರ್ಥಿಗಳು ಪರಾಭವಗೊಂಡಿದ್ದಾರೆ. ನಟ ಕಮಲ್‌ಹಾಸನ್ ಮಾತ್ರ ಕೊಯಂಬತ್ತೂರು ಕ್ಷೇತ್ರದಲ್ಲಿ ಗೆಲುವಿನ ಹಾದಿಯಲ್ಲಿದ್ದಾರೆ.
ಕೇರಳದಲ್ಲಿ ಇದೇ ಮೊದಲ ಬಾರಿಗೆ ಸತತವಾಗಿ 2ನೇ ಬಾರಿಗೆ ಅಧಿಕಾರೂಢ ಮೈತ್ರಿಕೂಟ ಗೆಲುವು ಸಾಧಿಸಿದೆ. ಕೇರಳದಲ್ಲಿ ಇದುವರೆಗೂ ಅಧಿಕಾರ ನಡೆಸಿದ್ದ ಪಕ್ಷಗಳು 2ನೇ ಬಾರಿಗೆ ಗೆದ್ದ ಉದಾಹರಣೆ ಇರಲಿಲ್ಲ. ಎಲ್ಲವನ್ನೂ ಹುಸಿ ಮಾಡುವಂತೆ ಎಡ ಪಕ್ಷಗಳ ನೇತೃತ್ವದ ಎಲ್‌ಡಿಎಫ್ ಮೈತ್ರಿಕೂಟ ಸತತ 2ನೇ ಬಾರಿ ಅಧಿಕಾರ ಹಿಡಿದಿದೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತೆ ಮುಖ್ಯಮಂತ್ರಿಯಾಗಿ ಅಧಿಕಾರ ದಂಡ ಹಿಡಿಯಲಿದ್ದಾರೆ. ಇಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಹೇಳಿಕೊಳ್ಳುವಂತಹ ಸಾಧನೆ ಮಾಡುವಲ್ಲಿ ವಿಫಲವಾಗಿದೆ.
ಪುದುಚೆರಿಯಲ್ಲಿ ಮೊದಲ ಬಾರಿಗೆ ಕಮಲ ಅರಳಿದ್ದು, ಇಲ್ಲೂ ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರ ಹಿಡಿಯುವತ್ತ ದಾಪುಗಾಲು ಹಾಕಿದೆ. ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟ ಸೋಲಿನ ಕಡೆ ಮುಖಮಾಡಿದೆ.

Leave a Reply

Your email address will not be published. Required fields are marked *