ಬಡವರಿಗೆ, ನೊಂದವರಿಗೆ, ಸಂತ್ರಸ್ತರ ನೆರವಿಗೆ ಬರುವ ಮೂಲಕ ಹೆಸರುವಾಸಿಯಾಗಿರುವ ಸರಳತೆಯ ಸಾಧಕಿ,ಕರ್ನಾಟಕ ಕಂಡ ಶ್ರೇಷ್ಠ ಮಹಿಳೆಯರಲ್ಲಿ ಒಬ್ಬರಾದ ಸುಧಾಮೂರ್ತಿಯವರು (Sudhamurhti) ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ಉನ್ನತ ಸ್ಥಾನದಲ್ಲಿದ್ದರೂ ನೆಲದ ಋಣ ತೀರಿಸುವ ಕೆಲಸ ಮಾಡುತ್ತಲೇ ಬರುತ್ತಿದ್ದಾರೆ.
ಹೌದು, ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದ ಅಗ್ರಜರೆನಿಸಿಕೊಂಡಿರುವ ಇನ್ಫೋಸಿಸ್ ಸಂಸ್ಥೆಯ ಒಡತಿಯಾಗಿದ್ದರೂ ತನ್ನನ್ನು ತಾನು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದಲ್ಲದೇ ಸೌಜನ್ಯಮೂರ್ತಿ ಸುಧಾಮೂರ್ತಿಯವರು ಕೊರೋನಾ ವಿರುದ್ಧ ಹೋರಾಟಕ್ಕೆ 100 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ.
ಕಳೆದ ವರ್ಷವೂ ಸಹ ಸುಧಾ ಮೂರ್ತಿಯವರು ಬೆಂಗಳೂರಿನಲ್ಲಿ ಕೋವಿಡ್ ಆಸ್ಪತ್ರೆಗಾಗಿ 100 ಕೋಟಿ ರೂಪಾಯಿ ದೇಣಿಗೆಯನ್ನು ನೀಡಿದ್ದರು. ಈ ಬಾರಿಯ ದೇಣಿಗೆಯನ್ನು ಕೋವಿಡ್ ರೋಗಿಗಳಿಗೆ ಆಮ್ಲಜನಕ, ವೆಂಟಿಲೇಟರ್ ಮತ್ತು ಇತರ ಔಷಧಿ ಖರೀದಿಗೆ ಬಳಸಿಕೊಳ್ಳಬಹುದು ಎಂದು ಅವರು ಹೇಳಿದ್ದಾರೆ. ಮಂಗಳೂರು, ಹೈದರಾಬಾದ್, ಪುಣೆ, ನಾಗ್ಪುರ, ನವದೆಹಲಿ ಮತ್ತು ತಿರುವನಂತಪುರಂಗೆ ಇನ್ಫೋಸಿಸ್ ಫೌಂಡೇಶನ್ ಹಣ ಒದಗಿಸುತ್ತದೆ ಎಂದು ಅವರು ಘೋಷಿಸಿದರು.
ಈ ಬಗ್ಗೆ ಮಾಹಿತಿ ನೀಡಿರುವ ಇನ್ಫೋಸಿಸಿ ಫೌಂಡೇಷನ್ ಅಧ್ಯಕ್ಷೆ ಸುಧಾಮೂರ್ತಿ, ಕಳೆದ ವರ್ಷ ಬೆಂಗಳೂರಿನಲ್ಲಿ ಕೋವಿಡ್ ಆಸ್ಪತ್ರೆ ಸ್ಥಾಪನೆಗೆ ನೆರವು ನೀಡಿದ್ದೇವು. ಈ ಆಸ್ಪತ್ರೆ ಇದೀಗ ಪರಿಪೂರ್ಣವಾಗಿ ಕಾರ್ಯನಿರ್ವಹಿಸುತ್ತಿದೆ. ಕಳೆದ ವರ್ಷ 100 ಕೋಟಿ ರೂಪಾಯಿ ಪೈಕಿ ಶೇ. 50 ರಷ್ಟು ಹಣವನ್ನು ಪಿಎಂ ಕೇರ್ಸ್ ಗೆ ನೀಡಿದ್ದೇವು. ಆದರೆ ಈ ಸಲ 100 ಕೋಟಿ ರೂಪಾಯಿ ಮೂಲಭೂತ ಸೌಕರ್ಯಗಳ ಪೂರೈಕೆಗಾಗಿ ಬಳಕೆ ಮಾಡಿಕೊಳ್ಳಲಾಗುತ್ತದೆ ಎಂದಿದ್ದಾರೆ.
ಪ್ರವಾಹ ಸಂತ್ರಸ್ತರಿಗೆ, ಕೊರೋನಾ ಪೀಡಿತರಿಗೆ ತಮ್ಮ ಸಂಸ್ಥೆಯಿಂದ ಸೂರು ಕಲ್ಪಿಸಿ ಅಗತ್ಯ ವಸ್ತುಗಳನ್ನು ಪೂರೈಸುವ ಮೂಲಕ ಮಾತೃ ಹೃದಯದ ಪ್ರೀತಿಯನ್ನು ಸಮಾಜಕ್ಕೆ ಪರಿಚಯಿಸುತ್ತಲೇ ಇದ್ದಾರೆ. ಸಾವಿರಾರು ಕೋಟಿಯ ಒಢತಿಯಾಗಿದ್ದರೂ ತನ್ನ ಸರಳತೆ, ಸಜ್ಜನಿಕೆಯಿಂದ ಜನರ ಮನಸ್ಸಿಗೆ ಹತ್ತಿರವಾಗುತ್ತಿರುವ ಆದರ್ಶ ವ್ಯಕ್ತಿಯಾಗಿದ್ದಾರೆ.