ಹಣಕಾಸು ಖಾತೆಯನ್ನು ನಿರ್ವಹಿಸುತ್ತಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಕೋವಿಡ್‌ ಸಂಕಷ್ಟ ಮತ್ತು ಆರ್ಥಿಕ ಹಿಂಜರಿತದ ಬೆನ್ನಲ್ಲೇ ಸೋಮವಾರ ಬಜೆಟ್‌ ಮಂಡಿಸಲಿದ್ದಾರೆ(Karnataka Budget 2021-22 to be presented on march 8) . ಸಾಲ ಪಡೆಯುವ ಪ್ರಮಾಣ ಹೆಚ್ಚಿಸುವುದರ ಜತೆಗೆ ಉತ್ತಮ ಮಂಡಿಸುವ ಸಾಧ್ಯತೆ ಇದೆ.

ಕಳೆದ ಬಾರಿಯ ಬಜೆಟ್ನಲ್ಲಿ ಹಲವಾರು ಅಭಿವೃದ್ಧಿ ಯೋಜನೆ ಮತ್ತು ಕಾರ್ಯಕ್ರಮಗಳನ್ನು ಘೋಷಿಸಲಾಗಿತ್ತಾದರೂ ಕೊರೋನಾ ಕಾರಣದಿಂದಾಗಿ ಅವುಗಳ ಸಮರ್ಪಕವಾಗಿ ಅನುಷ್ಠಾನಕ್ಕೆ ಬರಲಿಲ್ಲ. ಕೃಷಿ, ಮಹಿಳೆಯರು, ಆರೋಗ್ಯ ಕ್ಷೇತ್ರ, ಪ್ರವಾಸೋದ್ಯಮಕ್ಕೆ ಹೆಚ್ಚಿನ ಅನುದಾನ, ಹೊಸ ಯೋಜನೆಗಳನ್ನು ಪ್ರಕಟಿಸುವ ನಿರೀಕ್ಷೆ ಗಳಿವೆ ಎಂದೂ ಮೂಲಗಳು ಹೇಳಿವೆ.

ಅಗತ್ಯ ವಸ್ತುಗಳ ಬೆಲೆಯಲ್ಲಿ ಭಾರಿ ಹೆಚ್ಚಳವಾಗಿರುವುದರಿಂದ ಬಡ ಮತ್ತು ಮಧ್ಯಮವರ್ಗದ ಜನರ ದೈನಂದಿನ ಬದುಕು ದುಸ್ತರವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಹೊಸದಾಗಿ ತೆರಿಗೆ ವಿಧಿಸುವ ಅಥವಾ ಹೆಚ್ಚಿಸುವ ಸಾಧ್ಯತೆ ಕಡಿಮೆಯಿದೆ ಎನ್ನಲಾಗುತ್ತಿದೆ.  ಅದೇ ರೀತಿ ಈ ಬಾರಿ ಸಾಲದ ಪ್ರಮಾಣದಲ್ಲಿಯೂ ಹೆಚ್ಚಳ ನಿರೀಕ್ಷಿಸಲಾಗಿದ್ದು, ಆದಾಯ ಮತ್ತು ವೆಚ್ಚವನ್ನು ಸರಿದೂಗಿಸಿ ಬಜೆಟ್ ಮಂಡನೆ ಕಷ್ಟದ ಕೆಲಸ. ಆದರೂ ರೈತರು, ಜನರು, ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ.

ಆರ್ಥಿಕ ಸಮೀಕ್ಷೆ ಕೊರತೆ ಬಜೆಟ್‌ನ ಸುಳಿವು ನೀಡಿದೆ. ರಾಜ್ಯದ ಒಟ್ಟು ವರಮಾನದಲ್ಲಿ ಶೇ 93 ರಷ್ಟು ಬಾಬ್ತು ಸಂಬಳ, ಪಿಂಚಣಿ, ಬಡ್ಡಿ ಪಾವತಿಯ ಬದ್ಧತಾ ವೆಚ್ಚಕ್ಕೇ ವ್ಯಯವಾಗು ತ್ತದೆ. ಅಭಿವೃದ್ಧಿಗೆ ಶೇ 7 ರಷ್ಟು ಮಾತ್ರ ಲಭ್ಯವಾಗಲಿದೆ. ಹೀಗಾಗಿ ಜನಪ್ರಿಯ ಯೋಜನೆಗಳಿಗೆ ಹಣ ಹೊಂದಿಸಲು ಹೆಚ್ಚಿನ ಸಾಲ ಮಾಡುವುದು ಅನಿವಾರ್ಯ ಎಂದು ಹಣಕಾಸು ಇಲಾಖೆ ಮೂಲಗಳು ತಿಳಿಸಿವೆ.

ಕೋವಿಡ್‌ ಲಾಕ್‌ಡೌನ್‌ ಬಳಿಕ ರಾಜ್ಯದ ಆರ್ಥಿಕ ವೃದ್ಧಿ ದರ (ಎಸ್‌ಜಿ ಡಿಪಿ) ಕೇಂದ್ರಕ್ಕೆ ಹೋಲಿಸಿದರೆ ತುಸು ಹೆಚ್ಚಾಗಿದ್ದರೂ, ಆಶಾದಾಯಕವಾಗಿಲ್ಲ. ಹೀಗಾಗಿ ಹೆಚ್ಚು ಸಾಲ ಮಾಡುವುದು ರಾಜ್ಯಕ್ಕೆ ಅನಿವಾರ್ಯ. ಅಭಿವೃದ್ಧಿ ಕಾರ್ಯಗಳಿಗಾಗಿ 33 ಸಾವಿರ ಕೋಟಿ ಹೆಚ್ಚುವರಿ ಸಾಲ ಮಾಡಲು ಈಗಾಗಲೇ ನಿರ್ಧರಿಸಿದೆ. ಇದರಿಂದ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಲು ಅನುಕೂಲವಾಗುತ್ತದೆ ಎನ್ನುವುದು ಸರ್ಕಾರದ ಲೆಕ್ಕಾಚಾರ.

ಕಳೆದ ಬಾರಿಯ ಬಜೆಟ್ ಗಾತ್ರ 2.37 ಲಕ್ಷ ಕೋಟಿ ರೂಪಾಯಿಗಳಾಗಿದ್ದರೆ ಈ ಬಾರಿಯ ಹಣಕಾಸಿನ ಮುಗ್ಗಟ್ಟಿನ ಹೊರತಾಗಿಯೂ ಬಜೆಟ್ ಗಾತ್ರ ಹೆಚ್ಚಾಗುವ ಸಾಧ್ಯತೆಯಿದೆ.  ಕೊರೋನಾ ಸಂಕಷ್ಟದಲ್ಲಿರುವ ಜನರಿಗೆ ಈ ಬಜೆಟ್ನಲ್ಲಿ ರೈತರು ಮತ್ತು ಜನಸಾಮಾನ್ಯರ ಪರವಾದ ಯೋಜನೆಗಳನ್ನು ಘೋಷಿಸುತ್ತಾರೆ ಎಂಬ ಆಶಾಭಾವನೆ ಎಲ್ಲರಿಗೂ ಇದೆ.  ಇಂದು ಮಧ್ಯಾಹ್ನ 12.05 ಗಂಟೆಗೆ ಬಜೆಟ್ ಮಂಡನೆಯಾಗಲಿದೆ.

Leave a Reply

Your email address will not be published. Required fields are marked *