ಒಂದೂರಿನಿಂದ ಮತ್ತೊಂದೂರಿಗೆ ಕಾಲ್ನಡಿಗೆಯಲ್ಲಿ ಹೋಗುವಾಗ ಸುಸ್ತಾಗಿ ನೀರಿಲ್ಲದೆ ಬಾಯಾರಿಕೆಯಿಂದ ಸಾಯುವುದು ಸಿನೆಮಾದಲ್ಲಿ ನೋಡಿದ್ದೇವೆ. ಅಜ್ಜ ತಾತಂದಿರು ಹೇಳುವ ಕಥೆಯಲ್ಲಿ ಕೇಳಿದ್ದೇವೆ. ಆದರೆ ಇಂದಿನ ಮುಂದುವರೆದ ತಂತ್ರಜ್ಞಾನ ಯುಗದಲ್ಲಿ ಓರ್ವ ಬಾಲಕಿ ನೀರಿಲ್ಲದೆ ಬಾಯಾರಿಕೆಯಿಂದ ಸಾವನ್ನಪ್ಪಿರುವ ಘಟನೆ ಕೇಳಿದರೆ ಎಂಥಹವರ ಮನಸ್ಸು ಮಮ್ಮಲ ಮರಗುತ್ತದೆ. ಇದು ಯಾವುದೋ ದಕ್ಷಿಣ ಆಫ್ರಿಕಾದ ಹಿಂದುಳಿದ ದೇಶದ ಘಟನೆಯಂತು ಅಲ್ಲವೇ ಭಾರತ ದೇಶದ ರಾಜಸ್ಥಾನದ ರೋಡಾ ಗ್ರಾಮದಲ್ಲಿ (roda village)  ತಮ್ಮ ಕುಟುಂಬದ ಸದಸ್ಯರನ್ನು ನೋಡಲು ಹೋದಾಗ ಈ  ಹೃದಯವಿದ್ರಾವಕ ಘಟನೆ ನಡೆದಿದೆ.

ಸಾವು ಹೇಗೆಲ್ಲಾ ಬೆನ್ನಟ್ಟುತ್ತದೆ ಎಂಬುದಕ್ಕೆ ರಾಜಸ್ಥಾನದ ಜಲೋರ್ ಜಿಲ್ಲೆಯ ರಾಣಿವಾರದಲ್ಲಿ (Raniwara) ನಡೆದ ಘಟನೆಯೇ ಉದಾಹರಣೆಯಾಗಿದೆ. ಐದು ವರ್ಷದ ಬಾಲಕಿ ಬಾಯಾರಿಕೆಯಿಂದ (5 year old girl dies of thirst in rajasthan) ಸಾವನ್ನಪ್ಪಿದ್ದರೆ, ಅಜ್ಜಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಮೂಲಗಳ ಪ್ರಕಾರ, ರಾಜಸ್ಥಾನದ ಜಲೋರ ಜಿಲ್ಲೆಯ ರೋಡಾ ಗ್ರಾಮದಲ್ಲಿ ಕುಟುಂಬದ ಸದಸ್ಯರನ್ನು ನೋಡಲು 60 ವರ್ಷದ ಸುಖಿ (Sukhi) ಎಂಬ ಮಹಿಳೆ ತನ್ನ ಐದು ವರ್ಷದ ಮೊಮ್ಮಗಳೊಂದಿಗೆ (Manju)  ಕಾಲ್ನಡಿಗೆಯಲ್ಲಿ ಹೋಗಿದ್ದಾರೆ. ದಾರಿಯಲ್ಲಿ ಅವರಿಗೆ ಬಾಯಾರಿಕೆಯಾಗಿದೆ. ಆದರೆ ಸುತ್ತಮುತ್ತ ಎಲ್ಲೂ ಕುಡಿಯಲು ನೀರು ಸಿಗುವುದಿಲ್ಲ. ಮುಂದೆ ದಾರಿಯಲ್ಲಿ ಎಲ್ಲಿಯಾದರೂ ಸಿಗಬಹುದೆಂದು ಹಾಗೆಯೇ ನಡೆದುಕೊಂಡು ಹೋಗಿದ್ದಾರೆ. ಆಧರೆ ದಾರಿಯಲ್ಲಿ ಎಲ್ಲೂ ಕುಡಿಯಲು ನೀರು ಸಿಗದೆ ಅಜ್ಜಿ ಮೊಮ್ಮಗಳು ನಿತ್ರಾಣರಾಗಿ ಬಿದ್ದಿದ್ದಾರೆ. ಅಲ್ಲೇ ದೂರದಲ್ಲಿ ಕುರಿ ಮೇಯಿಸುತ್ತಿದ್ದ ಕೆಲವರು ಗಮನಿಸಿ ಓಡಿ ಬಂದು ನೋಡಿದ್ದಾರೆ. ಆರೈಕೆಯೂ ಮಾಡಿದ್ದಾರೆ. ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸುತ್ತಿರುವಾಗಲೇ ಎಲ್ಲರ ಮುಂದೆ ಐದು ವರ್ಷದ ಮಗುವಿನ ಪ್ರಾಣ ಪಕ್ಷಿ ಹಾರಿಹೋಗಿದೆ. ಕುಡಿಯಕ್ಕೆ ಸ್ವಲ್ಪ ನೀರು ಸಿಕ್ಕಿದ್ದರೆ ಐದು ವರ್ಷದ ಕೂಸಿನ ಪ್ರಾಣ ಉಳಿತಿತ್ತು. ಅಜ್ಜಿಯ ಸ್ಥಿತಿಯೂ ಸಹ ಗಂಭೀರವಾಗಿದೆ ಎಂದು ಅಲ್ಲಿನ ಆರೋಗ್ಯಾಧಿಕಾರಿ ತಿಳಿಸಿದ್ದಾರೆ.

ದೇಶದಲ್ಲಿ ಇನ್ನೂ ಬಡತನ, ಕುಡಿಯುವ ನೀರಿಗಾಗಿ ಪರಿತಪಿಸುವ ಸ್ಥಿತಿ ಇದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ. ಕುರುಚಲು ಗುಡ್ಡಗಾಡು ಪ್ರದೇಶ, ಇಲ್ಲಿ ಯಾವ ವಾಹನದ ವ್ಯವಸ್ಥೆಯೂ ಇಲ್ಲ. ದೇಶದ ಎಷ್ಟೋ ಕಡೆ ಇನ್ನೂ ಗ್ರಾಮಗಳಿಗೆ ರಸ್ತೆಯ ಸೌಲಭ್ಯವಿಲ್ಲ, ಕುಡಿಯುವ ನೀರಿಗಾಗಿ ಪರಿತಪಿಸುವ ಪರಿಸ್ಥಿತಿಯಿದೆ ಎಂಬುದಕ್ಕೆ ಈ ಹೃದಯವಿದ್ರಾವಕ ಘಟನೆಯೇ ಸಾಕ್ಷಿ.

Leave a Reply

Your email address will not be published. Required fields are marked *